ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠದ ಆಡಳಿತಾಧಿಕಾರಿ ಹುದ್ದೆಯಿಂದ ಬಸವರಾಜನ್‌ ವಜಾ

Last Updated 1 ಸೆಪ್ಟೆಂಬರ್ 2022, 12:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಷರತ್ತುಗಳನ್ನು ಉಲ್ಲಂಘಿಸಿ ಮಠ ಹಾಗೂ ಪೀಠಾಧಿಪತಿ ಘನತೆ, ಗೌರವಕ್ಕೆ ಧಕ್ಕೆ ತರಲು ಒಳಸಂಚು ರೂಪಿಸಿದ ಆರೋಪದ ಮೇರೆಗೆ ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಅವರನ್ನು ಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.

ಮಾರ್ಚ್‌ 7ರಂದು ಅವರು ಈ ಹುದ್ದೆಗೆ ನೇಮಕಗೊಂಡಿದ್ದರು. ಈ ವೇಳೆ ಬಸವರಾಜನ್‌ ಅವರಿಗೆ 8ಕ್ಕೂ ಹೆಚ್ಚು ಷರತ್ತುಗಳನ್ನು ವಿಧಿಸಲಾಗಿತ್ತು. 2007ರಲ್ಲಿಯೂ ಇವರನ್ನು ಇದೇ ಹುದ್ದೆಯಿಂದ ಕಿತ್ತುಹಾಕಲಾಗಿತ್ತು.

‘ಲಿಂಗಾಯತ-ವೀರಶೈವ ಮತ್ತು ವಿವಿಧ ಸಮಾಜಗಳ ಮುಖಂಡರ ಒತ್ತಾಸೆಯಂತೆ ಬಸವರಾಜನ್‌ ಅವರನ್ನು ಮಾರ್ಚ್‌ 7ರಂದು ಪುನರ್‌ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಮಠ ಮತ್ತು ಬಸವರಾಜನ್‌ ಅವರ ನಡುವಿನ ವ್ಯಾಜ್ಯಗಳನ್ನು ಮುಕ್ತಾಯಗೊಳಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಮೊದಲ ಹೆಜ್ಜೆಯಾಗಿ ನಗರದ ಕಾವೇರಿ ಸ್ಟೋರ‍್ಸ್‌ಗೆ ಸಂಬಂಧಿಸಿದ ವ್ಯಾಜ್ಯವನ್ನು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ರಾಜಿಯೊಂದಿಗೆ ಇತ್ಯರ್ಥಗೊಳಿಸಿಕೊಳ್ಳಲಾಗಿತ್ತು. ಆದರೆ, ಆನಂತದ ಅವರ ನಡೆಗಳು ಅನುಮಾಸ್ಪದವಾಗಿದ್ದವು’ ಎಂದು ಮಠ ಆರೋಪಿಸಿದೆ.

‘ಬಸವರಾಜನ್‌ ಅವರು ಆಡಳಿತಾತ್ಮಕವಾಗಿ ಯಾವುದೇ ರೀತಿಯ ಸಹಕಾರ ನೀಡುತ್ತಿರಲಿಲ್ಲ. ಮಠದ ಪರವಾಗಿ ಬಸವರಾಜನ್ ಅವರ ಹೆಸರಿನಲ್ಲಿ ಖರೀದಿಸಿದ ಆಸ್ತಿಗಳನ್ನು ಹಿಂದಿರುಗಿಸದೇ ಸಮಸ್ಯೆ ಸೃಷ್ಟಿಸಿದರು. ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಅಮೆರಿಕ ಮತ್ತು ಮಾರಿಷಸ್ ಪ್ರವಾಸಗಳಲ್ಲಿರುವಾಗ ಮಠದ ವಿರೋಧಿ ಕೃತ್ಯದಲ್ಲಿ ತೊಡಗಿದರು. ಪೀಠಾಧ್ಯಕ್ಷರು ಹಲವು ಬಾರಿ ಸೂಚನೆ ನೀಡಿದರೂ ತಪ್ಪು ತಿದ್ದಿಕೊಳ್ಳಲಿಲ್ಲ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಕಾರ್ಯದರ್ಶಿ ಹುದ್ದೆಗೆ ನೇಮಕ?

ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಎಸ್‌ಜೆಎಂ ವಿದ್ಯಾಪೀಠದ ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಶಿವಮೂರ್ತಿ ಮುರುಘಾ ಶರಣರ ಆಪ್ತ ಸಹಾಯಕರಾಗಿ ಬಿಜೆಪಿ ಮುಖಂಡ ಅನಿತ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ. ಅನಿತ್‌ ಕುಮಾರ್‌ ಅವರು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪುತ್ರ. ಈ ಬಗ್ಗೆ ಮಠ ಅಧಿಕೃತ ಮಾಹಿತಿ ನೀಡಿಲ್ಲ.

ಆಡಳಿತಾಧಿಕಾರಿಗೆ ವಿಧಿಸಿದ ನಿಬಂಧನೆಗಳು

* ಪ್ರತಿಯೊಂದು ವಿಚಾರವನ್ನು ಪಿಠಾಧೀಶರೊಂದಿಗೆ ಚರ್ಚಿಸಬೇಕು. ಪೀಠಾಧ್ಯಕ್ಷರದ್ದೇ ಅಂತಿಮ ನಿರ್ಧಾರ.
* ಗುಂಪುಗಾರಿಕೆ, ಸ್ವಜನಪಕ್ಷಪಾತಕ್ಕೆ ಅವಕಾಶವಿಲ್ಲ.
* ಆಡಳಿತದಲ್ಲಿ ಕುಟುಂಬ, ಪರಿವಾರ ಹಾಗೂ ಆಪ್ತರು ಹಸ್ತಕ್ಷೇಪ ಮಾಡಬಾರದು.
* ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಖರೀದಿಸಿದ ಜಮೀನು, ಕಾವೇರಿ ಸ್ಟೋರ್‌ ಅನ್ನು ಮಠದ ಸುಪರ್ದಿಗೆ ನೀಡಬೇಕು.
* ಮಠ ಹಾಗೂ ಪೀಠಾಧ್ಯಕ್ಷರ ವಿರುದ್ಧ ಷಡ್ಯಂತ್ರ ರೂಪಿಸಬಾರದು. ಪಾರದರ್ಶಕ ಆಡಳಿತ ನೀಡಬೇಕು.
* ಮಠವನ್ನು ರಾಜಕೀಯಕ್ಕೆ ಬಳಸಿಕೊಳ್ಳದೇ, ಪಕ್ಷಾತೀತ ಭಾವನೆ ಹೊಂದಬೇಕು.
* ವೇತನ ನಿರಾಕರಿಸಿದ ಬಸವರಾಜನ್‌ ಅವರಿಗೆ ಆಡಳಿತಾತ್ಮಕ ಖರ್ಚು ನೀಡಲಾಗುವುದು.
* ಮಠದ ಆವರಣದಲ್ಲಿ ಕಚೇರಿ ಒದಗಿಸಲಾಗುವುದು. ಶಾಖಾ ಮಠದ ಸ್ವಾಮೀಜಿಗಳಿಗೆ ಸರಿಯಾಗಿ ಸ್ಪಂದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT