ಶುಕ್ರವಾರ, ಮೇ 14, 2021
29 °C

ಮೈಸೂರು: ಗ್ರಂಥಾಲಯಕ್ಕೆ ಬೀಡಿಯಿಂದ ಬೆಂಕಿ– ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸೈಯದ್ ಇಸಾಕ್ ಅವರ ಗ್ರಂಥಾಲಯ ಭಸ್ಮಗೊಳ್ಳಲು ವ್ಯಕ್ತಿಯೊಬ್ಬರು ಬೀಡಿ ಹಚ್ಚಿ, ನಿರ್ಲಕ್ಷ್ಯದಿಂದ ಎಸೆದ ಬೆಂಕಿ ಕಡ್ಡಿ ಕಾರಣ ಎಂಬ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಕಿ ಕಡ್ಡಿ ಎಸೆದ ಆರೋಪಿ ಸೈಯದ್ ನಾಸೀರ್ (35) ಎಂಬಾತನನ್ನು ಬಂಧಿಸಿದ್ದಾರೆ.

‘ಮದ್ಯ ಸೇವಿಸಿದ್ದ ಆರೋಪಿಯು ಏ.8ರಂದು ರಾತ್ರಿ 10 ಗಂಟೆ ಸುಮಾರಿನಲ್ಲಿ ತಾಯಿ ಮತ್ತು ಸೋದರನೊಂದಿಗೆ ಗಲಾಟೆ ಮಾಡಿಕೊಂಡು, ಗ್ರಂಥಾಲಯದ ಸಮೀಪದ ಅಂಗಡಿಯಲ್ಲಿ ಬೀಡಿ, ಬೆಂಕಿ ಪೊಟ್ಟಣ ಖರೀದಿಸುತ್ತಾರೆ. ಬೀಡಿ ಹೊತ್ತಿಸಿ ಗ್ರಂಥಾಲಯ ಪಕ್ಕದ  ಸೋಫಾ ರಿಪೇರಿ ಅಂಗಡಿ ಬಳಿನ ಬೆಂಕಿ ಕಡ್ಡಿ ಎಸೆದು ಹೋಗುತ್ತಾರೆ. ಅದು ಸೋಫಾ ಮತ್ತು ಕುಷನ್‌ ಮೇಲೆ ಬೀಳುತ್ತದೆ. ಸ್ವಲ್ಪ ಹೊತ್ತಿನ ನಂತರ ಈ ಜಾಗದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳದಲ್ಲಿದ್ದ ಸೈಯದ್ ಅಸ್ಗರ್ ಮತ್ತು ಸೈಯದ್ ಅಯಾಜುದ್ದೀನ್ ಎಂಬವರು ಬೆಂಕಿ ನಂದಿಸುತ್ತಾರೆ. ಉಳಿದಿದ್ದ ಕಿಡಿಗಳು ನಸುಕಿನ 2.15ಕ್ಕೆ ಬೆಂಕಿ ಜ್ವಾಲೆಗಳಾಗಿ ಪರಿವರ್ತನೆಯಾಗುತ್ತವೆ. ಇಸಾಕ್ ಅವರ ಗ್ರಂಥಾಲಯಕ್ಕೂ ವ್ಯಾಪಿಸುತ್ತವೆ. ಈ ದೃಶ್ಯಗಳು ಸಮೀಪದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ ಎಂದು ಹೇಳಿದರು.

10x18 ವಿಸ್ತೀರ್ಣ ಜಾಗದಲ್ಲಿ 11 ಸಾವಿರದಷ್ಟು ಪುಸ್ತಕ ಇಡಲು ಸಾಧ್ಯವೇ ಎಂಬ ಪ್ರಶ್ನೆಗೆ, ‘ಭಸ್ಮವಾಗಲು ಕಾರಣ ಏನು ಎಂದು ಪತ್ತೆ ಹಚ್ಚುವುದಷ್ಟೇ ನಮ್ಮ ಕೆಲಸ. ಇಸಾಕ್ ಅವರು ದೂರಿನಲ್ಲಿ 11 ಸಾವಿರ ಪುಸ್ತಕಗಳಿದ್ದವು ಎಂದು ಹೇಳಿಲ್ಲ. ಮಾಧ್ಯಮಗಳಿಗಷ್ಟೇ ಅವರು ಈ ರೀತಿ ಹೇಳಿದ್ದಾರೆ’ ಎಂದು ತಿಳಿಸಿದರು.

ಸಮಿತಿ ರಚನೆಗೆ ವಿರೋಧ

ಇಸಾಕ್‌ ಅವರ ಗ್ರಂಥಾಲಯ ಮರುಸ್ಥಾಪನೆಗೆ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಂಥಾಲಯ ಇಲಾಖೆ ಜಂಟಿ ಸಮಿತಿ ರಚನೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.‌

ಈ ಮಧ್ಯೆ, ಗ್ರಂಥಾಲಯ ಮರುನಿರ್ಮಿಸಲು ಆನ್‌ಲೈನ್‌ನಲ್ಲಿ ಆರಂಭಿಸಿದ್ದ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಇನ್ಫೊಸಿಸ್‌ನ ಸಾಫ್ಟ್‌ವೇರ್‌ ಎಂಜಿನಿಯರ್‌ ಫತೇನ್‌ ಮಿಸ್ಬಾ ನಿಲ್ಲಿಸಿದ್ದಾರೆ. ಇಲ್ಲಿಯವರೆಗೆ ₹ 29 ಲಕ್ಷ ಸಂಗ್ರಹವಾಗಿದೆ.

‘1,800ಕ್ಕೂ ಅಧಿಕ ಮಂದಿ ದಾನಿಗಳು ಹಣ ನೀಡಿದ್ದಾರೆ’ ಎಂದು ಫತೇನ್‌ ಮಿಸ್ಬಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು