ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನವೀರ ಕಣವಿ ನಿಧನ: ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರ ಸಂತಾಪ

Last Updated 16 ಫೆಬ್ರುವರಿ 2022, 8:32 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಹಾನಿಯಾಗಿದೆ. ಧೀಮಂತ ಮಾರ್ಗದರ್ಶಕ ಇಲ್ಲದಂತಾಗಿದೆ. ಸಾತ್ವಿಕ ಚಿಂತಕರ ಕೊರತೆ ಇರುವ ಈ ಸಂದರ್ಭದಲ್ಲಿ ಚೆನ್ನವೀರ ಕಣವಿ ಅವರ ಪ್ರಸ್ತುತತೆ ತಂಬಾ ಅವಶ್ಯಕವಾಗಿತ್ತು. ಈ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡ ಕನ್ನಡ ನಾಡು ನಷ್ಟದಲ್ಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದರು.

'ಚೆಂಬೆಳಕಿನ ಕವಿ' ಖ್ಯಾತಿಯ ಡಾ. ಚೆನ್ನವೀರ ಕಣವಿ ಅವರು ನಿಧನದ ಹಿನ್ನೆಲೆಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, 'ಕಳೆದ ನಾಲ್ಕು ದಶಕಗಳಿಂದ ಆತ್ಮೀಯರಾಗಿದ್ದ ಕವಿ, ನಾಡೋಜ ಚೆನ್ನವೀರ ಕಣವಿ ಅವರು ಸಜ್ಜನಿಕೆಯ ಸಾಕಾರಮೂರ್ತಿ. ಅವರ ಮಾತುಗಳು ಅತ್ಯಂತ ಮಾನವೀಯತೆ ಮತ್ತು ಮನಮುಟ್ಟುವಂತವು. ತಮ್ಮ ಮೃದು ಮಾತುಗಳಿಂದ ಎಲ್ಲರ ಮನಸ್ಸನ್ನು ಗೆಲ್ಲುವಂತಹ ಅಪರೂಪದ ವ್ಯಕ್ತಿತ್ವ ಹೊಂದಿದ್ದರು' ಎಂದರು.

'ಕಣವಿ ಅವರು ಒಂದು ದಿನವೂ ಕೋಪಗೊಂಡಿದ್ದನ್ನು ನಾನು ನೋಡಿಲ್ಲ. ಎಲ್ಲ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಪರಿಹಾರ ಸೂಚಿಸುವಂತಹ ಸಾಹಿತ್ಯ ರಚನೆ ಮಾಡಿದ್ದಾರೆ. ತಮ್ಮ ಕಲ್ಪನೆ ಮತ್ತು ವಾಸ್ತವಾಂಶವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಕಣವಿ ಅವರು ಪ್ರಶಸ್ತಿಗೇ ಗೌರವ ಬರುವಂತಹ ವ್ಯಕ್ತಿತ್ವ ಹೊಂದಿದ್ದರು'

'ಸಾಹಿತ್ಯದ ಲೋಕದಲ್ಲಿ ಒಬ್ಬೊಬ್ಬರನ್ನೇ ಕಳೆದುಕೊಳ್ಳುತ್ತಿದ್ದೇವೆ. ಸಿದ್ದಲಿಂಗಯ್ಯ ಅವರನ್ನು ಕಳೆದುಕೊಂಡೆವು. ಚಂಪಾ ಅವರನ್ನು ಕಳೆದುಕೊಂಡೆವು. ಇವತ್ತು ಕಣವಿ ಅವರನ್ನು ಕಳೆದುಕೊಂಡಿದ್ದೇವೆ. ಕಳೆದುಕೊಂಡಿರುವ ಮಹನೀಯರ ಸ್ಮರಣೆ ಮತ್ತು ಪ್ರೇರಣೆ ಪಡೆದುಕೊಂಡು ಹೊಸ ಸಾಹಿತಿಗಳು ಬರಬೇಕು. ಹೊಸ ಚಿಂತನೆಗಳು ಆಗಬೇಕು. ಮೇರು ಸ್ಥಾನಕ್ಕೆ ಏರಬೇಕು. ಸಾಹಿತ್ಯ ಲೋಕದ ಬೆಳವಣಿಗೆಗೆ ಅಗತ್ಯ ಸಹಾಯವನ್ನು ಮಾಡಲು ಸರ್ಕಾರ ಸಿದ್ಧವಿದೆ. ಈ ಮೂಲಕವೇ ಕಣವಿ ಅವರಿಗೆ ನಿಜವಾದ ಗೌರವ ಮತ್ತು ಶ್ರದ್ಧಾಂಜಲಿ ಅರ್ಪಿಸಿದಂತಾಗುತ್ತದೆ' ಎಂದರು.

'ಕನ್ನಡ ಕಾವ್ಯಲೋಕದ ಚೆಂಬೆಳಕಾಗಿದ್ದ, ಸೌಹಾರ್ದತೆಯನ್ನು ಸಾರುತ್ತಾ ಸಮನ್ವಯ ಕವಿ ಎಂದೇ ಖ್ಯಾತರಾಗಿದ್ದ ಕವಿ ಚೆನ್ನವೀರ ಕಣವಿ ಅವರ ನಿಧನದಿಂದ ಅತೀವ ದು:ಖಕ್ಕೀಡಾಗಿದ್ದೇನೆ. ಅವರ ಕುಟುಂಬ ವರ್ಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ‌ ಕೋರುತ್ತೇನೆ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶೋಕ ವ್ಯಕ್ತಪಡಿಸಿದ್ದಾರೆ.

ಕಳಚಿದ ನವ್ಯ ಕಾವ್ಯ ಪರಂಪರೆಯ ಕೊಂಡಿ: ಕಣವಿ ನಿಧನಕ್ಕೆ ಶಾಸಕ ಜಗದೀಶ ಶೆಟ್ಟರ್ ಸಂತಾಪ

ಹುಬ್ಬಳ್ಳಿ: ಕನ್ನಡ ಕಾವ್ಯ ಲೋಕದಲ್ಲಿ ಸಮನ್ವಯ ಕವಿ ಎಂದು ಹೆಸರಾದ ನಾಡೋಜ ಡಾ.‌ಚನ್ನವೀರ ಕಣವಿ ಅವರ ನಿಧನಕ್ಕೆ ಶಾಸಕ ಜಗದೀಶ ಶೆಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ನವಿರಾದ ಕವಿತೆಗಳ ರಚನೆ ಮೂಲಕ ಕಣವಿ ಅವರು "ಪ್ರತಿಮಾಕವಿ" ಎಂದು ಖ್ಯಾತರಾಗಿದ್ದರು. ಅವರ ಕವನಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ವೈಯಕ್ತಿಕವಾಗಿ ಅವರ ಕವಿತೆಗಳ ಸಹೃದಯಿ ಓದುಗನಾಗಿದ್ದೆ. ಜೀವನ ಧ್ವನಿ, ಕಾವ್ಯಾಕ್ಷಿ, ಭಾವಜೀವಿ, ಆಕಾಶ ಭುಟ್ಟಿ, ಮಧುಚಂದ್ರ, ನಗರದಲ್ಲಿ ನೆರಳು.... ಹೀಗೆ ಹಲವಾರು ಕವನ ಸಂಕಲನಗಳು, ವಿಮರ್ಶಾ ಲೇಖನ, ಮಕ್ಕಳ ಕವಿತೆಗಳ ಮೂಲಕ ಕಣವಿ ಅವರು ಜನಮನದಲ್ಲಿ ನೆಲೆಸಿದ್ದರು.

ಕಣವಿ ಅವರ ನಿಧನದಿಂದಾಗಿ ನವ್ಯ ಕಾವ್ಯ ಪರಂಪರೆಯ ಕೊಂಡಿ ಕಳಚಿದಂತಾಗಿದೆ. ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕಣವಿ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅವರ ಸಹೃದಯಿ ಓದುಗರಿಗೆ ದೇವರು ಕರುಣಿಸಲಿ ಎಂದು ಶೆಟ್ಟರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT