ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ನಳಿನ್ ಕುಮಾರ್‌ ಕಟೀಲ್

Last Updated 28 ಮೇ 2021, 19:46 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಬಿ.ಎಸ್‌.ಯಡಿಯೂರಪ್ಪ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗಳ ಬಗ್ಗೆ ವಿವರಣೆ ಪಡೆಯುವುದಾಗಿ ತಿಳಿಸಿದರು.

ಯಶವಂತಪುರದಲ್ಲಿ ಕೋವಿಡ್‌ನಿಂದ ಮೃತಪಟ್ಟವರಿಗೆ ತಲಾ ₹1 ಲಕ್ಷ ಸಹಾಯಧನ ವಿತರಿಸುವ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ನಾಯಕತ್ವ ಬದಲಾವಣೆ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದ ದಿನದಿಂದಲೇ ಇಂತಹ ಚರ್ಚೆ ನಡೆಯುತ್ತಲೆ ಬಂದಿದೆ. ಅವರೇ ನಮ್ಮ ನಾಯಕರು. ಮುಂದಿನ ಎರಡು ವರ್ಷ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದರು.

ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ಅಗತ್ಯವಿಲ್ಲ. ಕೋವಿಡ್‌ ಸಂಕಷ್ಟ ಮುಗಿಯುವವರೆಗೆ ಯಾವುದೇ ಸಭೆಗಳನ್ನು ನಡೆಸುವ ಪ್ರಸ್ತಾಪವಿಲ್ಲ. ಯಡಿಯೂರಪ್ಪ 24 ಗಂಟೆಗಳೂ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಬಡ ಜನರ ಸಂಕಷ್ಟಕ್ಕೆ ಮಿಡಿದು ಅವರ ಜತೆ ಇದ್ದೇನೆ ಎಂದು ಸಂದೇಶ ನೀಡುವ ಕಾರಣಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ. ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರ ಇದೆ ಎಂದು ಹೇಳಿರುವುದು ಮತ್ತು ಮುಖ್ಯಮಂತ್ರಿ ಪುತ್ರ ಅವರಿಂದ ಅಧಿಕಾರ ಹಸ್ತಕ್ಷೇಪದ ಆರೋಪದ ಬಗ್ಗೆ ತಕ್ಷಣವೇ ವಿವರಣೆ ಪಡೆಯುತ್ತೇನೆ ಎಂದು ಕಟೀಲ್‌ ತಿಳಿಸಿದರು.

ಶಾಸಕರು ಕೋವಿಡ್‌ ಕೆಲಸದಲ್ಲಿ ಮಾತ್ರ ತೊಡಗಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿಲ್ಲ. ರಾಜಕೀಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಅವರು ತಾಕೀತು ಮಾಡಿದರು.

ರಾಜಕೀಯ ಕಾರಣಕ್ಕಾಗಿ ಆರೋಪ: ವಿಜಯೇಂದ್ರ
ಬೆಂಗಳೂರು:
‘ರಾಜಕೀಯ ಕಾರಣಗಳಿಗಾಗಿ ಕೆಲವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪಕ್ಷದ ಉಪಾಧ್ಯಕ್ಷನಾಗಿ ನನ್ನ ಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ’ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ಯೋಗೇಶ್ವರ್ ಪರೋಕ್ಷ ಟೀಕೆಗೆ ಉತ್ತರಿಸುತ್ತಾ, ‘ನನ್ನ ವಿರುದ್ಧ ಮಾತನಾಡುವುದೇ ಕೆಲವರಿಗೆ ಚಟವಾಗಿದೆ ಎಂದು ಸಚಿವ ಅಶೋಕ ಹೇಳಿದ್ದಾರೆ. ನನ್ನ ಬಗ್ಗೆ ಕೆಲವರಿಗೆ ಪ್ರೀತಿ. ಅದಕ್ಕೆ ಮಾತನಾಡುತ್ತಾರೆ’ ಎಂದರು.

‘ಯಡಿಯೂರಪ್ಪ ಅವರು 40 ವರ್ಷದ ಸುದೀರ್ಘ ಹೋರಾಟದಿಂದ ಮುಖ್ಯಮಂತ್ರಿ ಆದವರು. ಅವರ ಅನುಭವದ ಮುಂದೆ ನಮ್ಮದೇನೂ ಇಲ್ಲ. ಅವರು ಸಿ.ಎಂ ಆಗಲು ಕಾರ್ಯಕರ್ತರ ಶ್ರಮವೂ ಅಪಾರ’ ಎಂದು ಹೇಳಿದರು.

ಸಿದ್ಧಗಂಗಾ ಸ್ವಾಮೀಜಿ ಜತೆ ಮುಖ್ಯಮಂತ್ರಿ ಚರ್ಚೆ
ತುಮಕೂರು
: ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿ ವಲಯದಲ್ಲಿ ಒತ್ತಡ ಹೆಚ್ಚುತ್ತಿರುವ ಸಮಯದಲ್ಲೇ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಗೌಪ್ಯ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಪ್ರಗತಿ ಪರಿಶೀಲನೆ ನಡೆಸಿದ ನಂತರ ನೇರವಾಗಿ ಒಬ್ಬರೇ ಮಠಕ್ಕೆ ತೆರಳಿದರು. ತೆರಳುವ ಮುನ್ನ ಜತೆಯಲ್ಲಿ ಇದ್ದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನೂ ಕರೆದುಕೊಂಡು ಹೋಗಲಿಲ್ಲ. ಸ್ವಾಮೀಜಿ ಜೊತೆ ಸುಮಾರು 20 ನಿಮಿಷ ಚರ್ಚೆ ನಡೆಯಿತು.

ನಿಗದಿಯಂತೆ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಠಕ್ಕೆ ಭೇಟಿ ನೀಡಬೇಕಿತ್ತು. ಸಭೆ ನಡೆಯುವಾಗ ಮುಖ್ಯಮಂತ್ರಿ ಮಠಕ್ಕೆ ಹೋಗುವುದಿಲ್ಲ. ನೇರ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮಾಧ್ಯಮದವರಿಗೆ ತಿಳಿಸಲಾಯಿತು.

ಮಾಧ್ಯಮದವರು ಮಠದ ಬಳಿ ಬರುವುದನ್ನು ತಪ್ಪಿಸಿ ಯಡಿಯೂರಪ್ಪ ಅವರೊಬ್ಬರೇ ಸ್ವಾಮೀಜಿಯನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ಭೇಟಿಯ ಬಳಿಕ ಬೆಂಗಳೂರಿಗೆ ಹಿಂದಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT