ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಾವಧಿಗೆ ಬೊಮ್ಮಾಯಿ ಮುಖ್ಯಮಂತ್ರಿ: ನಳಿನ್‌ ಕುಮಾರ್‌ ಕಟೀಲ್‌ ಸ್ಪಷ್ಟನೆ

Last Updated 9 ಆಗಸ್ಟ್ 2022, 16:07 IST
ಅಕ್ಷರ ಗಾತ್ರ

ಮಂಗಳೂರು: ‘ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿ ಯಾವುದೇ ಚರ್ಚೆ ನಡೆದಿಲ್ಲ. ಬಸವರಾಜ ಬೊಮ್ಮಾಯಿ ಅವರು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಿ.ಎಸ್‌.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ, ಬೊಮ್ಮಾಯಿ ಅವರ ನೇತೃತ್ವದಲ್ಲಿ ಎದುರಿಸಲಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಸ್ಪಷ್ಟಪಡಿಸಿದರು.

ಬೊಮ್ಮಾಯಿ ಪದಚ್ಯುತಿ ಕುರಿತು ಕಾಂಗ್ರೆಸ್‌ ಟ್ವೀಟ್‌ ಮಾಡಿರುವುದಕ್ಕೆ ಇಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ನ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರು ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಈಚೆಗಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇವೆಲ್ಲವನ್ನು ಮುಚ್ಚಿಡಲು ಕಾಂಗ್ರೆಸ್‌ ಈ ರೀತಿ ಗೊಂದಲ ಸೃಷ್ಟಿಸುತ್ತಿದೆ. ಹಗರಣಗಳು ಹೊರಗೆ ಬಂದಿರುವುದು, ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಗೊಂದಲಗಳು, ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಚರ್ಚೆಗಳನ್ನು ಮುಚ್ಚಿಟ್ಟು ಪಕ್ಷವನ್ನು ಉಳಿಸಲು ಕಾಂಗ್ರೆಸ್‌ ಈ ರೀತಿ ಟ್ವೀಟ್‌ ಮಾಡಿದೆ’ ಎಂದರು.

‘ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್‌ನಲ್ಲಿ ಒಳ ಜಗಳ ಜಾಸ್ತಿ ಆಗಿದೆ. ಕೆ.ಬಿ.ಕೋಳಿವಾಡ ಅವರಂತಹ ಹಿರಿಯ ರಾಜಕಾರಣಿಗಳೇ ಸಿದ್ದರಾಮಯ್ಯ ಅವರಿಗೆ ಬೈಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕಚ್ಚಾಟ ಜಾಸ್ತಿ ಆಗುತ್ತಿದೆ. ಕಾಂಗ್ರೆಸ್‌ನ ಆಂತರಿಕ ಜಗಳ, ಬೀದಿ ಕಾಳಗ ಹಾಗೂ ಗೊಂದಲಗಳನ್ನು ಮುಚ್ಚಿಡಲು ರಾಜ್ಯ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ’ ಎಂದರು.

‘ಗೊಂದಲವನ್ನು ಸೃಷ್ಟಿಸುವ ಕಾಂಗ್ರೆಸ್‌ನ ಆಟ ನಡೆಯದು. ಕಾಂಗ್ರೆಸ್‌ ಮೊದಲು ತನ್ನಲೊಳಗಿನ ಗೊಂದಲ ಬಗೆಹರಿಸಿ ಒಟ್ಟಾಗಿ ಚುನಾವಣೆ ಎದುರಿಸಲಿ. ಕಾಂಗ್ರೆಸ್‌ನ ಸ್ಥಿತಿ ಏನು ಎಂಬುದು ಮುಂದಿನ ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT