ಬುಧವಾರ, ಮೇ 25, 2022
29 °C

ರಾಜಕೀಯಕ್ಕೆ ಅಪ್ಪು ಕರೆತರಲು ಪ್ರಯತ್ನ: ಮೋದಿ ಆಹ್ವಾನ ತಿರಸ್ಕರಿಸಿದ್ದ ಪುನೀತ್!

ಬಿ.ಎಂ.ಹನೀಫ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಚಿತ್ರನಟಪುನೀತ್‌ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು. ಇದನ್ನು ನಯವಾಗಿಯೇ ತಿರಸ್ಕರಿಸಿದ್ದರು ಅಪ್ಪು.

‘ಪುನೀತ್‌ರನ್ನು ರಾಜಕೀಯಕ್ಕೆ ಕರೆತರಲು ಬಿಜೆಪಿ ನಾಯಕರು ತುಂಬಾ ಪ್ರಯತ್ನ ಪಟ್ಟಿದ್ದರು’ ಎಂದು ಅಪ್ಪು ಅವರ ಆಪ್ತ, ಪ್ರೊಡಕ್ಷನ್ ಮ್ಯಾನೇಜರ್ ಎನ್.ಎಸ್. ರಾಜ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಚಿತ್ರನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಮತ್ತು ನಿರ್ಮಾಪಕ ಎಸ್.ವಿ. ಬಾಬು ಅವರು ಪುನೀತ್ ಅವರನ್ನು ಭೇಟಿ ಮಾಡಿ, ರಾಜಕೀಯಕ್ಕೆ ಬರುವಂತೆ ಕೋರಿದ್ದರು’ ಎಂದು ಅವರು ವಿಶೇಷ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದರು.

‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ನಾನು ನನ್ನ ತಂದೆಯ ಹಾದಿಯಲ್ಲಿಯೇ (ಡಾ.ರಾಜ್‌ಕುಮಾರ್) ಸಾಗುತ್ತೇನೆ ಎಂದು ಅಪ್ಪು ಸ್ಪಷ್ಟವಾಗಿ ಹೇಳಿ ಕಳುಹಿಸಿದರು’ ಎಂದೂ ಅವರು ತಿಳಿಸಿದರು.

‘ಸಂತೋಷ್ ಅವರು ಬಂದು ಹೋಗಿ ಸುಮಾರು 20 ದಿನಗಳ ನಂತರ, ಬಿಜೆಪಿ ಮುಖಂಡರಾದ ಗುಜರಾತ್‌ನ ಬಿ.ವಿ.ಎಸ್. ಶರ್ಮಾ ಹಾಗೂ ಆಂಧ್ರಪ್ರದೇಶದ ಸೋಮು ವಿ. ರಾಜು ಮತ್ತು ನಿರ್ಮಾಪಕ ಎಸ್.ವಿ. ಬಾಬು ಬಂದು ನನ್ನನ್ನು ಭೇಟಿಯಾದರು. ಎಲ್ಲ ನಟರೂ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ನೀವು ಹೇಳಿ ಪುನೀತ್‌ ಅವರನ್ನು ಒಪ್ಪಿಸಿ ಎಂದರು. ಈ ವಿಷಯದಲ್ಲಿ ಅವರನ್ನು ಒಪ್ಪಿಸುವುದು ಸಾಧ್ಯವೇ ಇಲ್ಲ ಎಂದು ಹೇಳಿ ಕಳುಹಿಸಿದೆ’ ಎಂದು ರಾಜ್‌ಕುಮಾರ್ ತಿಳಿಸಿದರು.

‘ಕೊನೆಗೆ, ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್‌ ಎಂಬುವರ ಮೂಲಕವೂ ಪುನೀತ್‌ರಿಗೆ ಆಹ್ವಾನ ನೀಡಲಾಯಿತು. ನೀವು ರಾಜಕೀಯಕ್ಕೆ ಬರುವುದೇನೂ ಬೇಡ, ಆದರೆ, ಒಂದು ಬಾರಿ ನರೇಂದ್ರ ಮೋದಿಯವರನ್ನು ದೆಹಲಿಗೆ ಬಂದು ಭೇಟಿ ಮಾಡಿ ಎಂದು ಮನವಿ ಮಾಡಿದಾಗಲೂ ಅಪ್ಪು ಅದನ್ನು ನಿರಾಕರಿಸಿದ್ದರು’ ಎಂದರು.

‘ನಮಗೆ ಎಲ್ಲ ಪಕ್ಷದವರೂ ಬೇಕಾದವರೇ. ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಎಲ್ಲರೂ ಬೇಕು. ಎಲ್ಲ ಪಕ್ಷಗಳಲ್ಲಿಯೂ ನಮ್ಮ ಅಭಿಮಾನಿಗಳಿದ್ದಾರೆ. ಮೋದಿಯವರನ್ನು ಭೇಟಿಯಾದರೆ ಅದು ರಾಜಕೀಯವಾಗುತ್ತದೆ ಎಂದು ಅಪ್ಪು ಪುನರುಚ್ಚರಿಸಿದ್ದರು’ ಎಂದರು.

‘ಒತ್ತಡ ಹೆಚ್ಚಾದಾಗ ನಾನು ಪುನೀತ್‌ ಅವರಿಗೆ ಸಲಹೆಯೊಂದನ್ನು ಮುಂದಿಟ್ಟೆ. ಬಿಜೆಪಿ ಮುಖಂಡರು ಎಂದು ಮೋದಿಯವರನ್ನು ಭೇಟಿ ಮಾಡಬೇಡಿ, ಭಾರತದ ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದೇನೆ ಎಂದುಕೊಳ್ಳಿ. ಅವರಿಗೆ ಅಪ್ಪಾಜಿ ಕುರಿತಾದ ಪುಸ್ತಕ (ರಾಜ್‌ಕುಮಾರ್: ದಿ ಪರ್ಸನ್‌ ಬಿಹೈಂಡ್ ದಿ ಪರ್ಸನಾಲಿಟಿ) ನೀಡುವ ನೆಪದಲ್ಲಿಯಾದರೂ ಭೇಟಿ ಮಾಡಿ ಎಂದು ಹೇಳಿದೆ. ಬಳಿಕ ಅವರು ಭೇಟಿಯಾಗಲು ಒಪ್ಪಿದರು’ ಎಂದು ರಾಜ್ ಕುಮಾರ್ ತಿಳಿಸಿದರು.

‘ಎಚ್‌ಎಎಲ್‌ ಏರ್ ಪೋರ್ಟ್ ಟ್ರಾನ್ಸಿಟ್‌ನಲ್ಲಿ ಪ್ರಧಾನಿಯವರನ್ನು ಅಪ್ಪು ಮತ್ತು ಅಶ್ವಿನಿಯವರು ಭೇಟಿಯಾದರು. ನಾನೂ ಜೊತೆಗಿದ್ದೆ. ಪ್ರಧಾನಿಯವರು ಸುಮಾರು 7 ನಿಮಿಷ ಮಾತನಾಡಿದರು. ನಿಮ್ಮಂಥ ಯುವಕರು ರಾಜಕೀಯಕ್ಕೆ ಬಂದರೆ ದೇಶ ಬದಲಾಗಲಿದೆ ಎಂದು ಹೇಳಿದರು. ಅಪ್ಪು ಮುಗುಳ್ನಕ್ಕು ವಂದನೆ ಸಲ್ಲಿಸಿ ಮರಳಿದರು' ಎಂದೂ ರಾಜ್‌ಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು