ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಟೆಂಡರ್‌ ಕಮಿಷನ್ ದಂಧೆಯಲ್ಲಿ ಮೋದಿಯ ಪಾಲೆಷ್ಟು: ಸಿದ್ದರಾಮಯ್ಯ ಪ್ರಶ್ನೆ

Last Updated 29 ಜನವರಿ 2022, 14:22 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಟೆಂಡರ್‌ ಕಮಿಷನ್‌ ದಂಧೆಯಲ್ಲಿ ಪ್ರಧಾನಿ ಮೋದಿಯವರ ಪಾಲೆಷ್ಟು ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಶನಿವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘‌ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗಿವೆ. ಬಿಜೆಪಿ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗಿದೆ. ಮುಖ್ಯಮಂತ್ರಿ ಮಾತ್ರ ಬದಲಾಗಿದ್ದಾರೆ, ಭ್ರಷ್ಟಾಚಾರ ಹಿಂದಿನಂತೆಯೇ ಮುಂದುವರೆದಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಎರಡೂವರೆ ವರ್ಷದ ಸಾಧನೆಗಳ ಪುಸ್ತಕದಲ್ಲಿ ಸಾಧನೆಗಿಂತ ಭರವಸೆಗಳೇ ಜಾಸ್ತಿ ಇವೆ. ಇದುವರೆಗೂ ಈಡೇರದ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭರವಸೆಗಳಿಗೆ ಈ ಪುಸ್ತಕ ಹೊಸ ಸೇರ್ಪಡೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ₹1.5 ಲಕ್ಷ ಕೋಟಿ ಖರ್ಚು ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.‌ ಅಂದರೆ ವರ್ಷಕ್ಕೆ ಕನಿಷ್ಠ ₹30,000 ಕೋಟಿ. ಈ ವರ್ಷ ಖರ್ಚು ಮಾಡಿರುವುದು ಬರೀ ₹6,300 ಕೋಟಿ’ ಎಂದು ಅವರು ತಿಳಿಸಿದ್ದಾರೆ.

'ನಮ್ಮ ಸರ್ಕಾರ ಸ್ಥಾಪಿಸಿದ್ದ ಗ್ರಾಮೀಣ ಸೇವಾ ಕೇಂದ್ರಗಳನ್ನು ಈಗ ಗ್ರಾಮ ಒನ್ ಎಂದು ಮರುನಾಮಕರಣ ಮಾಡಲು ಹೊರಟಿದ್ದಾರೆ. ಯೋಜನೆಗಳ ಹೆಸರು ಬದಲಿಸುವುದನ್ನು ಸಾಧನೆ ಎಂದು ಯಾರಾದರೂ ಕರೆಯುತ್ತಾರಾ?' ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

‘ರಾಜ್ಯ ಬಿಜೆಪಿ ಸರ್ಕಾರ ಜಾಹಿರಾತಿನಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ ₹3000 ಕೋಟಿ ಖರ್ಚು ಮಾಡುವುದಾಗಿ ಹೇಳಿದೆ. ಈ ವರೆಗೆ ಕ್ರಿಯಾ ಯೋಜನೆ ರೂಪಿಸಿ ಬಿಡುಗಡೆ ಮಾಡಿರೋದು ₹1,200 ಕೋಟಿ‘ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉಳಿದಿರೋದು ಎರಡು ತಿಂಗಳು ಮಾತ್ರ. ಈ ಅವಧಿಯಲ್ಲಿ ಯಾವ ಅನುದಾನಕ್ಕೂ ಆರ್ಥಿಕ ಇಲಾಖೆ ಅನುಮತಿ ಸಿಗಲ್ಲ, ಒಂದು ರೂಪಾಯಿಯೂ ಬಿಡುಗಡೆ ಆಗಲ್ಲ. ಕೋಟ್ಯಾಂತರ ರೂಪಾಯಿ ಸುರಿದು ಸುಳ್ಳು ಜಾಹಿರಾತು ನೀಡಿರುವುದೇ ಬಿಜೆಪಿ ಸರ್ಕಾರದ ಸಾಧನೆ’ ಎಂದೂ ಅವರು ಹರಿಹಾಯ್ದಿದ್ದಾರೆ.

‘ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದ್ದೊಂದೆ ಬಿಜೆಪಿ ಸಾಧನೆ. ಈ ಭಾಗಕ್ಕೆ ಹೆಚ್ಚುವರಿ ಹಣಕಾಸಿನ ನೆರವು ಶೂನ್ಯ. ಸಂವಿಧಾನದ 371 ನೇ ವಿಧಿಗೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದವರು ಎನ್.ಡಿ.ಎ ಸರ್ಕಾರದ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ’ ಎಂದು ವಿರೋಧ ಪಕ್ಷದ ನಾಯಕ ಟ್ವೀಟಿಸಿದ್ದಾರೆ.

‘ಶ್ರೀಮತಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಸಂವಿಧಾನದ 371 ನೇ ವಿಧಿಗೆ ತಿದ್ದುಪಡಿ ತಂದು, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು ಮನಮೋಹನ್ ಸಿಂಗ್ ಅವರ ಯು.ಪಿ.ಎ ಸರ್ಕಾರ. ಇದನ್ನು ಜನ ಮರೆಯಬಾರದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಬಿಜೆಪಿ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಇದಕ್ಕಿಂತ ಅಸಹ್ಯ ಬೇರೇನೂ ಇಲ್ಲ. ಸರ್ಕಾರದ ಈ ನಡೆ ಲಕ್ಷಾಂತರ ಜನರ ಸಾವನ್ನು ಸಂಭ್ರಮಿಸಿದಂತೆಯೇ ಸರಿ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಕೊವಿಡ್‌ನಿಂದ ಮರಣ ಹೊಂದಿದ 27,074 ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ತಲಾ ₹50,000 ಪರಿಹಾರ ನೀಡಲಾಗಿದೆ. ರಾಜ್ಯ ಸರ್ಕಾರ 13,541 ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದೆ. ಇನ್ನುಳಿದ ಕುಟುಂಬಗಳಿಗೆ ಪರಿಹಾರ ಸಿಗೋದು ಯಾವ ಕಾಲಕ್ಕೆ?’ ಎಂದು ಪ್ರಶ್ನಿಸಿದ್ದಾರೆ.

‘ಕೊರೊನಾ ಉಲ್ಬಣಗೊಂಡ ಸಂದರ್ಭದಲ್ಲಿ ಉಂಟಾದ ನಿರುದ್ಯೋಗ ಸಮಸ್ಯೆಯಿಂದಾಗಿ 1.57 ಲಕ್ಷ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎನ್.ಸಿ.ಆರ್.ಬಿ ವರದಿ ಹೇಳಿದೆ. ಇದಕ್ಕೆ ಯಾರು ಹೊಣೆ? ಇದನ್ನು ಕೇಂದ್ರ ಸರ್ಕಾರದ ಸಾಧನೆ ಎಂದು ಪರಿಗಣಿಸಬಹುದಾ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

‘ಕೊರೊನಾ ಸಂದರ್ಭದಲ್ಲಿ ಕಾರ್ಮಿಕರಿಗೆ ₹237 ಕೋಟಿ ರೂಪಾಯಿ ಪರಿಹಾರ ಕೊಟ್ಟಿದ್ದೇವೆ ಎಂದು ರಾಜ್ಯ ಬಿಜೆಪಿ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತೆ, ಈ ಕಾರ್ಮಿಕರ ಕಲ್ಯಾಣ ನಿಧಿ ಕಾರ್ಮಿಕರೇ ನೀಡಿರುವ ಹಣ, ಸರ್ಕಾರ ತನ್ನ ಕೈಯಿಂದ ಕೊಟ್ಟಿರುವುದಲ್ಲ’ ಎಂದು ಅವರು ಹೇಳಿದ್ದಾರೆ.

‘ಪ್ರವಾಹದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಹಾರ ನೀಡುವಂತೆ ಸದನದಲ್ಲಿ ನಾನು ಒತ್ತಾಯ ಮಾಡಿದ್ದೆ, ಕೊನೆಗೆ ಎರಡು ಪಟ್ಟು ಮಾಡಿದ್ರು, ಆದರೆ ಇವತ್ತಿನವರೆಗೆ ಒಂದು ರೂಪಾಯಿ ಹಣವನ್ನೂ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿಲ್ಲ’ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ಬಿಜೆಪಿಯವರು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ ಎನ್ನುತ್ತಾರೆ, ನಮ್ಮ ಸರ್ಕಾರದ ವಿದ್ಯಾಸಿರಿ, ಅರಿವು ಯೋಜನೆಯನ್ನು ನಿಲ್ಲಿಸಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳೋದೇ ಸಾಧನೆಯ?’ ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

‘ರಾಜ್ಯ ಬಿಜೆಪಿ ಸರ್ಕಾರ ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಕೃಷಿ ಉತ್ಪನ್ನಗಳ ಖರೀದಿಗೆ ಮುಕ್ತ ಅವಕಾಶ ನೀಡಿದ್ದರಿಂದ ದಲ್ಲಾಳಿಗಳು ಲಾಭ ಹೊಂದಿದರೆ, ಎ.ಪಿ.ಎಂ.ಸಿ ಗಳು ನಷ್ಟದ ಹಾದಿ ಹಿಡಿದಿವೆ. ಎ.ಪಿ.ಎಂ.ಸಿ ಗಳಿಂದ 2019-20 ರಲ್ಲಿ ₹600 ಕೋಟಿ ಆದಾಯ ಬಂದಿತ್ತು, ಈಗದು ₹106 ಕೋಟಿಗೆ ಇಳಿದಿದೆ’ ಎಂದು ಅವರು ಹೇಳಿದ್ದಾರೆ.

‘ಕನಿಷ್ಠ ಬೆಂಬಲ ಬೆಲೆ ನೀಡಿ ಬೆಳೆಗಳ ಖರೀದಿ ಮಾಡುತ್ತಿಲ್ಲ. 2020-21 ರಲ್ಲಿ 12 ಲಕ್ಷ ಟನ್ ಭತ್ತ ಖರೀದಿ ಮಾಡಬೇಕೆಂದು ನಿರ್ಧಾರ ಮಾಡಿದ್ದರು, ಈ ಬಾರಿ ಕೇವಲ 5 ಲಕ್ಷ ಟನ್ ಖರೀದಿ ಮಾಡಲು ತೀರ್ಮಾನಿಸಿದ್ದಾರೆ. ಉಳಿದ ರೈತರು ತಮ್ಮ ಫಸಲನ್ನು ಏನು ಮಾಡಬೇಕು?’ ಎಂದು ಸರ್ಕಾರವನ್ನು ಮಾಜಿ ಸಿಎಂ ಕೇಳಿದ್ದಾರೆ.

‘ರಾಗಿ ಖರೀದಿಯನ್ನು 5 ಲಕ್ಷ ಟನ್‌ನಿಂದ 2 ಲಕ್ಷ ಟನ್‌ಗೆ ಇಳಿಸಿದ್ದಾರೆ. ಈ ವರ್ಷ 2 ಲಕ್ಷ ಟನ್ ತೊಗರಿ ಖರೀದಿ ಮಾಡಬೇಕಿತ್ತು, ಆದರೆ ಈ ವರೆಗೆ ಬಿಜೆಪಿ ಸರ್ಕಾರ ಖರೀದಿಸಿರುವುದು 40,000 ಟನ್ ಮಾತ್ರ. ತೊಗರಿ ಬೆಳೆದ ರೈತರ ಕಷ್ಟ ಕೇಳುವವರು ಯಾರು?’ ಎಂದು ಅವರು ಟ್ವೀಟಿಸಿದ್ದಾರೆ.

‘ಕೊರೊನಾ ಕಾಲದಲ್ಲಿ ಕಾರ್ಪೊರೇಟ್ ಕಂಪನಿಗಳು ₹12.5 ಲಕ್ಷ ಕೋಟಿ ಲಾಭ ಗಳಿಸಿವೆ. ಆದರೂ ಅವರ ಮೇಲೆ ಈ ಹಿಂದೆ ವಿಧಿಸುತ್ತಿದ್ದ ಶೇ 30 ಕಾರ್ಪೊರೇಟ್ ತೆರಿಗೆಯನ್ನು ಶೇ 22.5 ಗೆ ಇಳಿಸಲಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಸಾಮಾನ್ಯ ಜನ ಖರೀದಿ ಮಾಡುವ ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣ, ಸಿಮೆಂಟ್, ರಸ ಗೊಬ್ಬರದ ಮೇಲೆ ತೆರಿಗೆ ಹೆಚ್ಚು ಮಾಡಲಾಗಿದೆ. ಗ್ಯಾಸ್‌ಗೆ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆದು ಶ್ರೀಮಂತರ ಹೊಟ್ಟೆ ತುಂಬಿಸುತ್ತಿದೆ’ ಎಂದು ಟೀಕಿಸಿದ್ದಾರೆ.

‘2017-18 ರ ನನ್ನ ಬಜೆಟ್ ಗಾತ್ರ ₹2.02 ಲಕ್ಷ ಕೋಟಿ ಇತ್ತು, ಈ ವರ್ಷದ ಬಜೆಟ್ ಗಾತ್ರ ₹2.47 ಲಕ್ಷ ಕೋಟಿ. ನಮ್ಮ ಸರ್ಕಾರ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗೆ ನೀಡಿದ್ದ ಹಣ ₹30,150 ಕೋಟಿ. ಈ ವರ್ಷ ಬಿಜೆಪಿ ಸರ್ಕಾರ ನೀಡಿರುವ ಹಣ ₹25,000 ಕೋಟಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಬಜೆಟ್ ಗಾತ್ರ ಹೆಚ್ಚಾದಂತೆ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗೆ ಮೀಸಲಿಡಬೇಕಿದ್ದ ಹಣ ಕೂಡ ಹೆಚ್ಚಾಗಬೇಕಿತ್ತು, ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ಇಳಿಕೆ ಆಗುತ್ತಿರುವುದು ಏಕೆ? ಶೋಷಿತರ ಜನರನ್ನು ಕಂಡರೆ ಬಿಜೆಪಿಗೆ ಯಾಕಿಷ್ಟು ದ್ವೇಷ?’ ಎಂದು ಕೇಳಿದ್ದಾರೆ.

‘ಗಂಗಾ ಕಲ್ಯಾಣ ಯೋಜನೆಗೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2017-18 ರಲ್ಲಿ ₹300 ಕೋಟಿ ಖರ್ಚು ಮಾಡಿತ್ತು, ಈ ವರ್ಷದ ಬಜೆಟ್‌ನಲ್ಲಿ ₹30 ಕೋಟಿ ಮಾತ್ರ ನೀಡಿದ್ದಾರೆ. ಇದೇನಾ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು?’ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

‘ಪರಿಶಿಷ್ಟ ಜಾತಿ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎಸ್.ಸಿ.ಪಿ ಯೋಜನೆಯಡಿ ನಮ್ಮ ಸರ್ಕಾರ ಇದ್ದಾಗ 2017-18 ರಲ್ಲಿ ₹164 ಕೋಟಿ ಅನುದಾನ ನೀಡಿದ್ದೆ, ಈ ವರ್ಷ ಅದನ್ನು ಬಿಜೆಪಿ ಸರ್ಕಾರ ₹50 ಕೋಟಿಗೆ ಇಳಿಸಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಟಿ.ಎಸ್.ಪಿ ಯೋಜನೆ ಅಡಿ ಸ್ವ ಉದ್ಯೋಗ ಕೈಗೊಳ್ಳುವ ಬುಡಕಟ್ಟು ಜನಾಂಗದ ಜನರಿಗಾಗಿ ₹63 ಕೋಟಿ ಅನುದಾನ ನೀಡಿದ್ದೆವು, ಈ ವರ್ಷ ಬಿಜೆಪಿ ಸರ್ಕಾರ ಕೇವಲ ₹20 ಕೋಟಿ ಅನುದಾನ ನೀಡಿದ್ದಾರೆ’ ಎಂದು ಟ್ವೀಟಿಸಿದ್ದಾರೆ.

‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರದ ಸಚಿವರು, ಅಧಿಕಾರಿಗಳು ಸರ್ಕಾರಿ ಟೆಂಡರ್ ಗಳಲ್ಲಿ ಶೇ 40 ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ಪ್ರಧಾನಿ ಮೋದಿ ಅವರಿಗೆ ದೂರು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವ ಪ್ರಧಾನಿ ಮೋದಿಯವರು ರಾಜ್ಯ ಬಿಜೆಪಿ ಸರ್ಕಾರದ ಲಂಚಾವತಾರವನ್ನು ಕಂಡರೂ ಕಾಣದಂತೆ ಸುಮ್ಮನಿರುವುದು ಏಕೆ? ಈ ಕಮಿಷನ್ ದಂಧೆಯಲ್ಲಿ ಅವರ ಪಾಲೆಷ್ಟು?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT