ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತಿವೆ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ಹೆದ್ದಾರಿ ಕಾಮಗಾರಿಗಳು

ಅನುದಾನದ ಕೊರತೆ, ಭೂಸ್ವಾಧೀನ ಸಮಸ್ಯೆ, ಗುತ್ತಿಗೆದಾರರ ವಿಳಂಬ ಧೋರಣೆ
Last Updated 11 ಡಿಸೆಂಬರ್ 2022, 20:30 IST
ಅಕ್ಷರ ಗಾತ್ರ

ನವದೆಹಲಿ: ಅನುದಾನದ ಕೊರತೆ, ಭೂಸ್ವಾಧೀನ ಸಮಸ್ಯೆ, ಸಮನ್ವಯ ಕೊರತೆ ಹಾಗೂ ಗುತ್ತಿಗೆದಾರರ ವಿಳಂಬ ಧೋರಣೆಯಿಂದಾಗಿ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ತೆವಳುತ್ತಾ ಸಾಗಿವೆ.

ಕೇಂದ್ರ ಭೂಸಾರಿಗೆ ಸಚಿವಾಲಯವು ರಾಜ್ಯದಲ್ಲಿ 107 ಹೆದ್ದಾರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ 60 ಕಾಮಗಾರಿಗಳ ಗಡುವು ಈಗಾಗಲೇ ಮುಗಿದಿದೆ. ಕೆಲವು ಕಾಮಗಾರಿಗಳ ಗಡುವು ಮುಗಿದು ಮೂರು–ನಾಲ್ಕು ವರ್ಷಗಳೇ ಕಳೆದಿವೆ. ಆದರೂ, ಅವುಗಳ ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿಲ್ಲ. ಹಲವು ಕಾಮಗಾರಿಗಳಿಗೆ ಸಂಪೂರ್ಣ ಅನುದಾನ ಹಂಚಿಕೆ ಮಾಡಿದ್ದರೂ ಬಳಕೆ ಮಾಡಿದ್ದು ಶೇ 10ರಿಂದ 20ರಷ್ಟು. ರಾಜ್ಯದ ಹೆದ್ದಾರಿ ಕಾಮಗಾರಿಗಳ ಪ್ರಗತಿ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಈ ಉತ್ತರವು ಕಾಮಗಾರಿಗಳ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದೆ.

ಉಡುಪಿ ಜಿಲ್ಲೆಯ ಕುಂದಾಪುರದಿಂದ ಉತ್ತರ ಕನ್ನಡದ ಮೂಲಕ ಗೋವಾಕ್ಕೆ ಸಂಪರ್ಕ ಬೆಸೆಯುವ 187 ಕಿ.ಮೀ. ಉದ್ದದ ಕಾಮಗಾರಿಗೆ 2014ರ ಮಾರ್ಚ್‌ನಲ್ಲಿ ಚಾಲನೆ ನೀಡಲಾಗಿತ್ತು.ವಿನ್ಯಾಸ, ನಿರ್ಮಾಣ, ಹಣಕಾಸು ನೆರವು, ನಿರ್ವಹಣೆ, ವರ್ಗಾವಣೆ’ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ₹557 ಕೋಟಿ ವೆಚ್ಚದ ಈ ಕಾಮಗಾರಿ 2016ರ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಬಳಿಕ ಹಲವು ಗಡುವುಗಳನ್ನು ವಿಧಿಸಲಾಗಿತ್ತು. ಈ ವರ್ಷದ ಡಿಸೆಂಬರ್‌ನಲ್ಲಿ ಕಾಮಗಾರಿ ಮುಗಿಯಲಿದೆ ಎಂದು ನಿತಿನ್‌ ಗಡ್ಕರಿ ಅವರು ಜುಲೈ ತಿಂಗಳಲ್ಲಿ ಟ್ವೀಟ್‌ ಮಾಡಿದ್ದರು. ಇಲಾಖೆಯಿಂದ ಇಲ್ಲಿಯವರೆಗೆ ₹536 ಕೋಟಿ ವೆಚ್ಚ ಮಾಡಲಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಮುಗಿಯುವುದು ಅನುಮಾನ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

₹575 ಕೋಟಿ ವೆಚ್ಚದಹಾಸನ– ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ 75) ಚತುಷ್ಪಥ ಕಾಮಗಾರಿಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

2017ರ ಮಾರ್ಚ್‌ನಲ್ಲಿ ಆರಂಭಗೊಂಡ 45 ಕಿ.ಮೀ. ಉದ್ದದ ಕಾಮಗಾರಿ 2019ರಲ್ಲಿ ಪೂರ್ಣಗೊಳ್ಳಬೇಕಿತ್ತು. ಇಲ್ಲಿಯವರೆಗೆ ಶೇ 50ರಷ್ಟು ಕಾಮಗಾರಿಯಷ್ಟೇ ಮುಗಿದಿದೆ.

ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ಐಸೋಲೆಕ್ಸ್‌ ಕಂಪನಿ ದಿವಾಳಿಯಾಯಿತು. ಬಳಿಕ ಬೇರೆ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಯಿತು. ಗುತ್ತಿಗೆದಾರರಿಗೆ ಈವರೆಗೆ ₹299 ಕೋಟಿ ಮೊತ್ತ ಬಿಡುಗಡೆ ಮಾಡಲಾಗಿದ್ದು, ಆ ಮೊತ್ತವನ್ನು ಬಳಕೆ ಮಾಡಲಾಗಿದೆ. ಮಳೆ, ಕೋವಿಡ್‌ ಮತ್ತಿತರರ ಕಾರಣಗಳಿಂದಾಗಿ ಹೆದ್ದಾರಿಯ ಕಾಮಗಾರಿ ವಿಳಂಬವಾಗಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದ ಸಮಿತಿಯು ಕಾಮಗಾರಿಯ ಮೇಲ್ವಿಚಾರಣೆ ಮಾಡುತ್ತಿದೆ.

ಹೊಸಪೇಟೆ–ಬಳ್ಳಾರಿ–ಕರ್ನಾಟಕ ಗಡಿ/ಬಳ್ಳಾರಿ ಗಡಿ (ಎನ್‌ಎಚ್‌ 63) ನಡುವಿನ 95 ಕಿ.ಮೀ.ಯ ಕಾಮಗಾರಿ ಶುರುವಾಗಿದ್ದು 2017ರ ಮಾರ್ಚ್‌ನಲ್ಲಿ. ಕಾಮಗಾರಿ ಪೂರ್ಣಕ್ಕೆ ಎರಡು ವರ್ಷಗಳ ಗಡುವು ವಿಧಿಸಲಾಗಿತ್ತು. ₹870 ಕೋಟಿ ಮೊತ್ತದ ಕಾಮಗಾರಿಗೆ ಈವರೆಗೆ ₹414 ಕೋಟಿ ವೆಚ್ಚ ಮಾಡಲಾಗಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ 170 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು (ಎನ್‌ಎಚ್‌ 209) ಚತುಷ್ಪಥವನ್ನಾಗಿ ಪರಿವರ್ತಿಸುವ ಕಾಮಗಾರಿಗೆ ಚಾಲನೆ ನೀಡಿದ್ದು 2017ರ ಆಗಸ್ಟ್‌ನಲ್ಲಿ. ಈ ಕೆಲಸ 2019ರ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆರಂಭದಲ್ಲಿ ಚುರುಕಿನಿಂದ ಕಾಮಗಾರಿ ಕೈಗೊಂಡ ಗುತ್ತಿಗೆದಾರ ಸಂಸ್ಥೆ, ನಂತರ ಆರ್ಥಿಕ ಸಂಕಷ್ಟದಿಂದ ಕೆಲಸ ಸ್ಥಗಿತಗೊಳಿಸಿತ್ತು. ಹದಗೆಟ್ಟ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಹಲವು ಮಂದಿ ಗಾಯಗೊಂಡಿದ್ದರು. ಬಳಿಕ ರಸ್ತೆ ನಿರ್ವಹಣೆ ಕಾಮಗಾರಿ ನಡೆಸಲಾಗಿತ್ತು. ಮತ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಹೆದ್ದಾರಿಯಲ್ಲಿ ಭೂಸ್ವಾಧೀನಕ್ಕೆ ₹970 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ ₹448 ಕೋಟಿ ಬಳಸಲಾಗಿದೆ.

ಬೆಳಗಾವಿ–ಖಾನಾಪುರ ನಡುವಿನ 30 ಕಿ.ಮೀ. ಹೆದ್ದಾರಿ ಕಾಮಗಾರಿಗೆ 2019ರ ಮಾರ್ಚ್‌ನಲ್ಲಿ ಚಾಲನೆ ನೀಡಲಾಗಿತ್ತು. ಎರಡೂವರೆ ವರ್ಷಗಳಲ್ಲಿ ಕೆಲಸ ಮುಗಿಯಬೇಕಿತ್ತು. ಆದರೆ, ₹856 ಕೋಟಿ ವೆಚ್ಚದ ಈ ಕಾಮಗಾರಿಗೆ ಇಲ್ಲಿಯವರೆಗೆ ಖರ್ಚು ಮಾಡಿರುವುದು ₹7.16 ಕೋಟಿ ಮಾತ್ರ.

‘ದಶಪಥ ಎರಡು ತಿಂಗಳಲ್ಲಿ ಪೂರ್ಣ’

ಮೈಸೂರು–ಬೆಂಗಳೂರು ದಶಪ‍ಥ ಕಾಮಗಾರಿ 2023ರ ಫೆಬ್ರುವರಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ. ನಿಡಘಟ್ಟ–ಬೆಂಗಳೂರು ನಡುವಿನ 56 ಕಿ.ಮೀ. ಉದ್ದದ ಪ್ಯಾಕೇಜ್‌ 1 ಕಾಮಗಾರಿ ಈ ತಿಂಗಳ ಅಂತ್ಯದೊಳಗೆ ಮುಗಿಯಲಿದೆ. ಮೈಸೂರು–ನಿಡಘಟ್ಟ ನಡುವಿನ 61 ಕಿ.ಮೀ. ಉದ್ದದ ಪ್ಯಾಕೇಜ್‌ 2 ಕಾಮಗಾರಿ ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT