ಭಾನುವಾರ, ಮೇ 29, 2022
20 °C
ನೆಟ್‌ ಪರೀಕ್ಷೆಯಲ್ಲಿ ಎಡವಟ್ಟು : ಪರೀಕ್ಷಾರ್ಥಿಗಳ ಪ್ರತಿಭಟನೆ

ಕನ್ನಡ ಐಚ್ಛಿಕ ಪತ್ರಿಕೆಯಲ್ಲಿ ‘ಹಿಂದಿ’ ಪ್ರಶ್ನೆಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಭಾನುವಾರ ನಡೆಸಿದ ‘ಯುಜಿಸಿ–ಎನ್‌ಇಟಿ’ ಕನ್ನಡ ಐಚ್ಛಿಕ ಭಾಷೆಯ ಪ್ರಶ್ನೆ ಪತ್ರಿಕೆಯ 100ರಲ್ಲಿ 90 ಪ್ರಶ್ನೆಗಳು ಹಿಂದಿ ಭಾಷೆಯಲ್ಲಿದ್ದ ಕಾರಣ ಗೊಂದಲಕ್ಕೊಳಗಾದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆಯನ್ನು ಅರ್ಧಕ್ಕೆ ಬಿಟ್ಟು ಹೊರನಡೆದರು.

ರಾಜ್ಯದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಐಚ್ಛಿಕ ಭಾಷೆಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರದ ಈ ಗಂಭೀರ ಲೋಪದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಪರೀಕ್ಷಾರ್ಥಿಗಳು ಪಟ್ಟು ಹಿಡಿದರು. ಕೆಲವೆಡೆ ಪ್ರತಿಭಟನೆಯನ್ನು ನಡೆಸಿದರು.

‘ಪ್ರಶ್ನೆ ಪತ್ರಿಕೆಯಲ್ಲಿ 10 ಪ್ರಶ್ನೆಗಳು ಮಾತ್ರಗಳು ಕನ್ನಡದಲ್ಲಿದ್ದವು. ಉಳಿದದ್ದು ಹಿಂದಿ ಭಾಷೆಯಲ್ಲಿದ್ದವು’ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.

‘ಎರಡು ವರ್ಷಗಳಿಂದ ಪರೀಕ್ಷೆಗಾಗಿ ನಡೆಸಿದ್ದೆ. ಪರೀಕ್ಷಾ ಏಜೆನ್ಸಿಯ ತಾಂತ್ರಿಕ ಲೋಪದಿಂದಾಗಿ ಸಾವಿರಾರು ಮಂದಿ ಶಿಕ್ಷೆ ಅನುಭವಿಸುವಂತಾಗಿದೆ. ಪರೀಕ್ಷಾ ಕೇಂದ್ರದಲ್ಲಿ ನೋಡಲ್ ಅಧಿಕಾರಿಗಳೇ ಇರಲಿಲ್ಲ. ಅಲ್ಲಿದ್ದ ಸಿಬ್ಬಂದಿಗೂ ಸರಿಯಾದ ಮಾಹಿತಿ ಇರಲಿಲ್ಲ. ಆನ್‌ಲೈನ್‌ ಮೂಲಕ ಪರೀಕ್ಷೆ ಆಯೋಜಿಸುತ್ತಿರುವುದರಿಂದ ತಾಂತ್ರಿಕ ದೋಷಗಳು ಹೆಚ್ಚಾಗಿವೆ. ಮೊದಲಿನಂತೆ ಲಿಖಿತ ಪರೀಕ್ಷೆ ನಡೆಸುವುದೇ ಒಳ್ಳೆಯದು’ ಎಂದು ಬೆಂಗಳೂರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಆರ್‌.ಅರ್ಚನಾ ಅಳಲು ತೋಡಿಕೊಂಡರು.

ಅರ್ಧ ಗಂಟೆ ತಡ: ಧಾರವಾಡದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 9ಕ್ಕೆ ಆರಂಭವಾಗಬೇಕಿದ್ದ ಆನ್‌ಲೈನ್‌ ಪರೀಕ್ಷೆ ತಾಂತ್ರಿಕ ತೊಂದರೆಯಿಂದ ಅರ್ಧ ಗಂಟೆ ತಡವಾಗಿ ಆರಂಭಗೊಂಡಿತು. ಜತೆಗೆ ಬೇರೆ ಬೇರೆ ಕೊಠಡಿಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ಪುನರಾವರ್ತನೆಗೊಂಡಿದ್ದವು. ಹೀಗಾಗಿ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದರು.

‘ವಿಶ್ವವಿದ್ಯಾಲಯ ಅನುದಾನ ಆಯೋಗದ ತಾಂತ್ರಿಕ ದೋಷದಿಂದ ತೊಂದರೆ ಉಂಟಾಗಿದೆ’ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಸಮಜಾ ಯಿಷಿ ನೀಡಿದರು. ಜಮಖಂಡಿ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷಾರ್ಥಿಗಳ ಪ್ರತಿಭಟನೆ

ತುಮಕೂರಿನ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ 97 ಮಂದಿ ಹಾಜರಾಗಿದ್ದರು. ಸಾಮಾನ್ಯ ಜ್ಞಾನ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಆದರೆ ಐಚ್ಛಿಕ ಕನ್ನಡ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳು ಹಿಂದಿ ಭಾಷೆಯಲ್ಲಿ ಇದ್ದದ್ದನ್ನು ಕಂಡು ವಿದ್ಯಾರ್ಥಿಗಳಿಗೆ ದಿಕ್ಕುತೋಚದಂತಾಗಿತ್ತು. ತಕ್ಷಣವೇ ಪರೀಕ್ಷೆಯನ್ನು ಬಹಿಷ್ಕರಿಸಿ ಮರುಪರೀಕ್ಷೆ ನಡೆಸುವಂತೆ ಅವರು ಪ್ರತಿಭಟನೆ ನಡೆಸಿದರು.

ಅಸಹಾಯಕರಾದ ಮೇಲ್ವಿಚಾರಕರು

ಬಳ್ಳಾರಿಯಲ್ಲಿ ಪರೀಕ್ಷೆ ಬರೆಯಲು ಬೆಂಗಳೂರಿನಿಂದ ಬಂದಿದ್ದ ಪರೀಕ್ಷಾರ್ಥಿ ಜ್ಯೋತಿ ಮಾತನಾಡಿ, ‘ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 100 ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಆದರೆ, 11 ನೇ ಪ್ರಶ್ನೆಯಿಂದ ಹಿಂದಿ ಭಾಷೆಯಲ್ಲಿ ಪ್ರಶ್ನೆ ಡೌನ್‍ಲೋಡ್ ಆರಂಭವಾಯಿತು. ತಕ್ಷಣ ಮೇಲ್ವಿಚಾರಕರ ಗಮನಕ್ಕೆ ತರಲಾಯಿತು. ‘ಸ್ವಲ್ಪ ಸಮಯ ನಿರೀಕ್ಷಿಸಿ’ ಎಂದು ಅಸಹಾಕತೆ ವ್ಯಕ್ತಪಡಿಸಿದರು. ಒಂದು ಗಂಟೆಯಾದರೂ ಈ ಕುರಿತು ಯಾವುದೇ ಉತ್ತರ ದೊರೆಯಲಿಲ್ಲ. ನೆಟ್ ಪರೀಕ್ಷೆ ಈ ರೀತಿ ನಡೆಯತ್ತದೆ ಎಂದು ಊಹಿಸಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲವರು ಪ್ರಶ್ನೆಗಳಿಗೆ ಉತ್ತರಿಸಿದ್ದರೂ ಆನ್‍ಲೈನ್‍ನಲ್ಲಿ ಸಬ್‌ಮಿಟ್‌ ಆಗದೆ ಗೊಂದಲಕ್ಕೆ ಒಳಗಾದರು ಎಂದು ಪರೀಕ್ಷಾ ಕೊಠಡಿಯಿಂದ ಹೊರಬಂದ ಪರೀಕ್ಷಾರ್ಥಿಗಳು ಮಾಹಿತಿ ನೀಡಿದರು.

‘ಮರು ಪರೀಕ್ಷೆ ನಡೆಸುತ್ತೇವೆ’

ಯುಜಿಸಿ ‘ನೆಟ್‌’ ಕನ್ನಡ ಐಚ್ಛಿಕ ಪರೀಕ್ಷೆಯಲ್ಲಿ ಉಂಟಾದ ಗೊಂದಲದ ಬಗ್ಗೆ ವೆಬ್‌ಸೈಟ್‌ನಲ್ಲಿ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ‘ಮುಂದಿನ ದಿನಗಳಲ್ಲಿ ದಿನಾಂಕ ನಿಗದಿಪಡಿಸಿ ಮತ್ತೆ ಪರೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು