ಮಂಗಳವಾರ, ಸೆಪ್ಟೆಂಬರ್ 21, 2021
23 °C

ನೂತನ ಶಿಕ್ಷಣ ನೀತಿ ‘ಮೇಕ್ ಇನ್ ಅಮೆರಿಕ’– ಪ್ರೊ.ಕೆ.ಇ ರಾಧಾಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನೂತನ ಶಿಕ್ಷಣ ನೀತಿಯ ಹೆಸರಲ್ಲಿ ಅಮೆರಿಕದ ಶೈಕ್ಷಣಿಕ ವ್ಯವಸ್ಥೆಯನ್ನು ತರಲು ಕೇಂದ್ರ ಸರ್ಕಾರ ಹೊರಟಿದೆ. ದೇಶದ ಶೈಕ್ಷಣಿಕ ಕ್ಷೇತ್ರವನ್ನೇ ಹಳ್ಳ ಹಿಡಿಸಲಿರುವ ಈ ನೀತಿ, ಮೇಕ್ ಇನ್ ಇಂಡಿಯಾ ಅಲ್ಲ, ಬದಲಿಗೆ ಮೇಕ್ ಇನ್ ಅಮೆರಿಕ’ ಎಂದು ಕೆಪಿಸಿಸಿ ಶಿಕ್ಷಣ ಸಮಿತಿಯ ಅಧ್ಯಕ್ಷ ಪ್ರೊ.ಕೆ.ಇ. ರಾಧಾಕೃಷ್ಣ ಟೀಕಿಸಿದರು.

ನೂತನ ಶಿಕ್ಷಣ ನೀತಿ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಮಹೇಶಪ್ಪ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಮ್ಮದು ಕೃಷಿ ಪ್ರಧಾನ ದೇಶ. ಅಮೆರಿಕ ಉದ್ಯೋಗ ಪ್ರಧಾನ ರಾಷ್ಟ್ರ. ಹೀಗಾಗಿ, ಅಲ್ಲಿನ ಶಿಕ್ಷಣ ವ್ಯವಸ್ಥೆ ನಮ್ಮ ದೇಶಕ್ಕೆ ಹೊಂದಿಕೆಯಾಗುವುದಿಲ್ಲ’ ಎಂದರು.

‘ಈ ನೀತಿಯಲ್ಲಿ ಸಾಕಷ್ಟು ಅಪಾಯಕಾರಿ ಅಂಶಗಳಿವೆ. ಡಿಜಿಟಲ್ ವಿಭಜನೆಯು ಶ್ರೀಮಂತರು ಹಾಗೂ ಬಡವರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ನೀತಿಯ ಮೂಲಕ, ವಿಶ್ವವಿದ್ಯಾಲಯಗಳನ್ನು ಸಂಶೋಧನಾ, ಸ್ವಾಯತ್ತ, ಕಲಿಕಾ ವಿಶ್ವವಿದ್ಯಾಲಯ ಎಂದು ವಿಂಗಡಿಸುವ ಕ್ರಮ ಹಾಸ್ಯಾಸ್ಪದ’ ಎಂದರು.

‘ಘೋಷಣೆಗಳ ಮೂಲಕ ಪ್ರಚಾರ ಪಡೆಯುವ ಮೋದಿ, ಸ್ಲೋಗನ್ ಸೇನಾಪತಿ. ‘ಆಲ್ ಫಾರ್ ಆಲ್’ ಎಂಬ ಪರಿಕಲ್ಪನೆಯಲ್ಲಿ ಎಲ್ಲ ವಯಸ್ಸಿನವರಿಗೆ ಕೃತಕ ಬುದ್ದಿಮತ್ತೆ ಮೂಲಕ ಶಿಕ್ಷಣ ನೀಡುವುದಾಗಿ ಹೇಳುತ್ತಾರೆ. ಆದರೆ, ದೇಶದಲ್ಲಿ ಸಾವಿರಾರು ಅತಿಥಿ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಜತೆಗೆ ಶಿಕ್ಷಕರು ರಸ್ತೆಬದಿಯಲ್ಲಿ ತರಕಾರಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದನೇ ತರಗತಿಗೆ ಸೇರುವ ವಿದ್ಯಾರ್ಥಿಗೆ ಶಾಲೆ ಸೇರುವ ಮುನ್ನ ವಿದ್ಯಾ ಪ್ರಕಾಶ ಎಂಬ 3 ತಿಂಗಳ ತರಬೇತಿ ನೀಡುವುದು ಮತ್ತೊಂದು ಹಾಸ್ಯಾಸ್ಪದ ವಿಚಾರ. ಉಳಿದಂತೆ ನಿಷ್ಠ, ಸಫಲ್ ಎಂಬ ಹೆಸರಿಡುವ ಮೂಲಕ ಮೋದಿ, ತಾನು ನಾಮಕರಣ ಪ್ರವೀಣ ಎಂದು ಸಾಬೀತುಪಡಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತರಾತುರಿ ಯಾಕೆ: ‘ನೂತನ ಶಿಕ್ಷಣ ನೀತಿಯ ವ್ಯವಸ್ಥೆಗೆ ಅನುಕೂಲವಾಗುವ ಯಾವ ಕ್ರಮಗಳನ್ನೂ ಸರ್ಕಾರ ಕೈಗೊಂಡಿಲ್ಲ. ಅದಕ್ಕೂ ಮೊದಲೇ ನೀತಿ ಜಾರಿಗೆ ತರಾತುರಿ ಯಾಕೆ’ ಎಂದು ಮಹೇಶಪ್ಪ ಪ್ರಶ್ನಿಸಿದರು.

‘ಒಂದಕ್ಕೊಂದು ಸಂಬಂಧವೇ ಇಲ್ಲದ ಈ ನೀತಿ, ನಮ್ಮನ್ನು ಇನ್ನು 20 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲಿದೆ. ಅಲ್ಲದೆ, ಜನರನ್ನು ಬಡವರನ್ನಾಗಿ ಮಾಡಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು