ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ವಿತರಕರ ದಿನಾಚರಣೆ ಇಂದು

ನಿತ್ಯ ನಸುಕಿನಲ್ಲೇ ಮಳೆ, ಚಳಿ ಲೆಕ್ಕಿಸದೇ ದುಡಿಯುವ ಕಾಯಕ ಜೀವಿಗಳಿಗೆ ಸಲಾಂ
Last Updated 3 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿಯ ಕುಂದಾದಷ್ಟೇ ಸಿಹಿಯಾದ ವ್ಯಕ್ತಿತ್ವ ಉಳ್ಳವರು ನಮ್ಮ ಪತ್ರಿಕಾ ವಿತರಕರು. ಪ್ರತಿ ದಿನ ಸೂರ್ಯ ಉದಯಸುವ ಮುನ್ನ, ಮನೆಯ ಸದಸ್ಯರು ಎಚ್ಚರಗೊಳ್ಳುವ ಮೊದಲು ಮನೆ ಮುಂದೆ ಹಾಜರಾಗುತ್ತಾರೆ. ಜಗತ್ತಿನ ಸಮಗ್ರ ವಿಷಯಗಳನ್ನು ಹೊತ್ತ ಪತ್ರಿಕೆಗಳನ್ನು ಪ್ರತಿದಿನ ನಿಮ್ಮ ಮನೆಗೆ ತಲುಪಿಸುವ ಈ ಪತ್ರಿಕಾ ವಿತರಕರಿಗೆ ಕೃತಜ್ಞತೆ ಸಲ್ಲಿಸುವ ದಿನ ಇಂದು.

ಹೌದು. ಸೆಪ್ಟೆಂಬರ್‌ 4ರಂದು ಪತ್ರಿಕಾ ವಿತರಕರ ದಿನವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಂತೆಯೇ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲೂ ಈ ಸಂಭ್ರಮ ಆಚರಿಸಲಾಗುತ್ತಿದೆ.

ಬೆಳಗಾವಿ ನಗರ ಹೇಳಿಕೇಳಿ ಮೈಕೊರೆಯುವ ಚಳಿ, ನಿರಂತರ ಮಳೆಗೆ ಹೆಸರಾಗಿದೆ. ಎಂಥದ್ದೇ ಚಳಿ, ಮಳೆ, ಗಾಳಿ, ಬಿಸಿಲು, ಸಿಡಿಲಬ್ಬರದ ಸಂಕಷ್ಟದ ನಡುವೆಯೂ ನಿಮ್ಮ ಮನೆಯ ಮುಂದೆ ಪತ್ರಿಕೆಯನ್ನು ತಂದು ಇಡುವ ಇವರ ಸೇವೆಗೆ ಸಾಟಿ ಇನ್ನೊಂದಿಲ್ಲ. ಪೊಲೀಸರು, ಸೈನಿಕರಿಗೆ ಯಾವುದೇ ಹಬ್ಬ–ಉತ್ಸವಗಳಲ್ಲಿ ರಜೆ ಇಲ್ಲ ಎಂಬುದು ನಿಮಗೆ ಗೊತ್ತು. ಆದರೆ, ನಮ್ಮ ಹೆಮ್ಮೆಯ ಪತ್ರಿಕಾ ವಿತರಕರೂ ‘ನಾಡಿನ ಸೈನಿಕ’ರಂತೆಯೇ ಅವಿರತ ದುಡಿಯುತ್ತಾರೆ ಎಂಬುದನ್ನು ಬಹಳ ಮಂದಿ ಗಮನಿಸಿಲ್ಲ.

ಭೌತಿಕ ಅಭಿವೃದ್ಧಿ, ಶೈಕ್ಷಣಿಕ, ಆರ್ಥಿಕ ಹಾಗೂ ಪ್ರವಾಸೋದ್ಯಮ ಸೇರಿದಂತೆ ಎಲ್ಲ ರಂಗಗಳಲ್ಲೂ ಬೆಳಗಾವಿ ಜಿಲ್ಲೆ ದಾಪುಗಾಲು ಇಡುತ್ತಿದೆ. ಅದರಲ್ಲೂ ರಾಜಕೀಯವಾಗಿ ‘ಶಕ್ತಿಕೇಂದ್ರ’ ಎಂದೇ ಪರಿಗಣಿಸಲಾಗಿದೆ. ಇಲ್ಲಿನ ಪ್ರತಿ ದಿನದ ವಿದ್ಯಮಾನಗಳು ದೇಶದ ಗಮನ ಸೆಳೆಯುತ್ತವೆ. ಅವೆಲ್ಲವನ್ನೂ ನಿಮ್ಮ ಮನೆಗೆ ನಿಯಮಿತವಾಗಿ ತಲುಪಿಸುವ ಈ ಪತ್ರಿಕಾ ವಿತರಕರ ಸೇವೆ ನಿಜಕ್ಕೂ ಶ್ಲಾಘನೀಯ.

ಬೇಡಿಕೆಗಳೇನು?: ‘ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ಮಾಡಿಸಬೇಕು. ಪ್ರತಿ ದಿನ ಓಡಾಡಲು ಸೈಕಲ್‌ ಕೊಡಬೇಕು. ಗೌರವ ಧನ ಮಂಜೂರು ಮಾಡಬೇಕು’ ಎಂಬುದೂ ಸೇರಿದಂತೆ ಕೆಲವು ಪ್ರಾಥಮಿಕ ಬೇಡಿಕೆಗಳನ್ನೂ ಅವರು ಸರ್ಕಾರದ ಮುಂದಿಟ್ಟಿದ್ದಾರೆ.

‘ಪ್ರತಿ ನಸುಕಿನಲ್ಲಿ ಊರು ಅಲೆದು ಪತ್ರಿಕೆ ಹಂಚುವ ಸಂದರ್ಭದಲ್ಲಿ ಅವಘಡ ಸಂಭವಿಸಿದ ಸಾಕಷ್ಟು ಉದಾಹರಣೆಗಳಿವೆ. ಇಂಥ ಸಂದರ್ಭದಲ್ಲಿ ವಿಮೆ ಇದ್ದರೆ ಧೈರ್ಯ ಬರುತ್ತದೆ’ ಎಂಬುದು ಮಂಜು, ಸಂಜಯ ಕದಂ, ರಾಜೀವ್‌ ಭೋಸಲೆ ಅವರ ಅನಿಸಿಕೆ.

‘ಜೀವನ ಕಟ್ಟಿಕೊಳ್ಳಲು ಬಡ್ಡಿ ರಹಿತ ಸಾಲ ನೀಡಬೇಕು. ಈಗಾಗಲೇ ಪೌರಕಾರ್ಮಿಕರಿಗೆ ಇಂಥ ಸೌಕರ್ಯ ನೀಡಲಾಗಿದೆ. ಅವರಂತೆಯೇ ನಾವೂ ದುಡಿಯುತ್ತೇವೆ. ನಾವೂ ಶ್ರಮಿಕರೇ ಆಗಿದ್ದೇವೆ. ಹಾಗಾಗಿ, ನಮ್ಮನ್ನೂ ಕಾರ್ಮಿಕರು ಎಂದು ಪರಿಗಣಿಸಬೇಕು. ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯ ಒದಗಿಸಬೇಕು’ ಎಂದೂ ನಂದಗಡಕರ, ಪ್ರಭಾಕರ ಧಾಮನೆ, ಮಾರುತಿ ಧಾಮನೆ, ಪ್ರವೀಣ ಶಹಾಪೂರಕರ್‌ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT