ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ

ಬೆಂಗಳೂರು: ರಾಜ್ಯದಲ್ಲಿ ಕೋಳಿ ಮೊಟ್ಟೆ ಮತ್ತು ಮಾಂಸ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಸಾರ್ವಜನಿಕರು ಆತಂಕಪಡದೇ ಕೋಳಿ ಮೊಟ್ಟೆ ಮತ್ತು ಮಾಂಸ ಸೇವಿಸಬಹುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಶುಕ್ರವಾರ ಹಕ್ಕಿ ಜ್ವರ ನಿಯಂತ್ರಣಜ್ಜೆ ಸಂಬಂಧಿಸಿದ ರಾಜ್ಯಮಟ್ಟದ ಕಾರ್ಯಪಡೆ ಸಭೆಯನ್ನು ಆನ್ಲೈನ್ ಮೂಲಕ ನಡೆಸಿದ ಅವರು, ‘ಕೇರಳದಲ್ಲಿ ಹಕ್ಕಿ ಜ್ವರ ಇರುವ ಕಾರಣಕ್ಕೆ ಆ ರಾಜ್ಯಕ್ಕೆ ಸೀಮಿತವಾಗಿ ಕೋಳಿಗಳ ಪೂರೈಕೆ ಮತ್ತು ತರಿಸಿಕೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿದೆ. ಬೇರೆ ಯಾವ ರಾಜ್ಯಕ್ಕೂ ಈ ನಿರ್ಬಂಧ ಅನ್ವಯಿಸುವುದಿಲ್ಲ. ಜನರು ಯಾವುದೇ ಭೀತಿ ಇಲ್ಲದೆ ಮೊಟ್ಟೆ, ಮಾಂಸ ಸೇವಿಸಬಹುದು’ ಎಂದರು.
ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೋಳಿ ಮತ್ತು ಇತರ ಸ್ಥಳೀಯ ಪಕ್ಷಿಗಳ ಸಾವಿನ ಪ್ರಕರಣಗಳ ಮೇಲೆ ನಿಗಾ ಇಡಲಾಗಿದೆ. ರಾಜ್ಯದಾದ್ಯಂತ ಮೃಗಾಲಯಗಳು ಹಾಗೂ ಪಕ್ಷಿಧಾಮಗಳಲ್ಲಿ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ. ಹಕ್ಕಿ ಜ್ವರ ರಾಜ್ಯದಲ್ಲಿ ಹರಡದಂತೆ ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಶುಸಂಗೋಪನೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ಆಯುಕ್ತ ಎಚ್. ಬಸವರಾಜೇಂದ್ರ, ನಿರ್ದೇಶಕ ಡಾ.ಬಿ.ಎಸ್. ಶಿವರಾಮ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.