ಬುಧವಾರ, ಸೆಪ್ಟೆಂಬರ್ 29, 2021
20 °C

ಸಂಭ್ರಮವಿಲ್ಲದ ಸಾಧನಾ ಪರ್ವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದರಿಂದ ಆಯೋಜಿಸಿದ್ದ ‘ಸಾಧನಾ ಪರ್ವ’ ಸಮಾರಂಭದಲ್ಲಿ ಸಂಭ್ರಮವೇ ಮಾಯವಾಗಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದಾಗಿ ಪ್ರಕಟಿಸುತ್ತಿದ್ದಂತೆ ಅಲ್ಲಿ ಸೇರಿದ್ದ ಸಚಿವರು ಮತ್ತು ಶಾಸಕರು ಒಂದು ಕ್ಷಣ ದಿಗ್ಭ್ರಾಂತರಾದರು.

ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಸೇರಿದ್ದ ಕೆಲ ಸಚಿವರು, ಶಾಸಕರು ರಾಜೀನಾಮೆ ನೀಡುವ ಬಗ್ಗೆ ಆರಂಭದಲ್ಲಿ ಸಂದೇಹ ಹೊಂದಿದ್ದರು. ‘ವರಿಷ್ಠರಿಂದ ಸಂದೇಶ ಬಾರದಿದ್ದರೆ, ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ’ ಎಂದಿದ್ದ ಯಡಿಯೂರಪ್ಪ ಅಷ್ಟು ಸುಲಭದಲ್ಲಿ ರಾಜೀನಾಮೆ ನೀಡುತ್ತಾರೆಯೇ ಎಂಬುದು ಅವರ ಹಲವು ಸಚಿವರ ಮತ್ತು ಶಾಸಕರ ಸಂಶಯಕ್ಕೆ ಕಾರಣವಾಗಿತ್ತು.

ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಲಕ್ಷಣ ಸವದಿ ಅವರನ್ನು ವೇದಿಕೆಯಲ್ಲಿ ಜತೆಗೇ ಕೂರಿಸಿಕೊಂಡಿದ್ದರು. ಎಲ್ಲವೂ ಯಾಂತ್ರಿಕವಾಗಿಯೇ ನಡೆದವು. ಎರಡು ವರ್ಷಗಳ ಸಾಧನೆಯ ಬಗ್ಗೆ ಜನ ಸಾಮಾನ್ಯರ ಅಭಿಪ್ರಾಯಗಳು ಮತ್ತು ಉದ್ಯಮಿಗಳ ಸಂದೇಶದ ವಿಡಿಯೋ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು.

ಭಾಷಣದ ಕೊನೆಗೆ ರಾಜೀನಾಮೆ ಪ್ರಕಟಿಸಿ ‘ಎಲ್ಲರೂ ಒಟ್ಟಿಗೆ ಊಟ ಮಾಡೋಣ ಬನ್ನಿ’ ಎಂದು ಶಾಸಕರು ಮತ್ತು ಸಚಿವರನ್ನು ಆಹ್ವಾನಿಸಿದರು. ಮೂವರು ಡಿಸಿಎಂಗಳು ಮತ್ತು ಶೆಟ್ಟರ್‌ ಜತೆಗೆ ಕುಳಿತು ಊಟದ ಶಾಸ್ತ್ರ ಮುಗಿಸಿ ರಾಜಭವನದತ್ತ ತೆರಳಿದರು.

ಹಿರಿಯ ಸಚಿವರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಎಸ್‌. ಸುರೇಶ್‌ ಕುಮಾರ್‌ ಮುಂತಾದವರು ಈ ಬೆಳವಣಿಗೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ಧರಿರಲಿಲ್ಲ.

ಕಾರ್ಯಕ್ರಮದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಕಾಣಿಸಿಕೊಳ್ಳಲಿಲ್ಲ. ಯಡಿಯೂರಪ್ಪ ಅವರ ಕಟು ಟೀಕಾಕಾರರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಅವರೂ ಇರಲಿಲ್ಲ. ಸರ್ಕಾರಿ ನೌಕರರು ಮತ್ತು ಮಾಧ್ಯಮಕ್ಕೆ ಧನ್ಯವಾದ ಹೇಳಿದರು.

‘ಎರಡನೇ ವರ್ಷ ತುಂಬಿದ್ದಕ್ಕೇ ಯಾರೂ ಹಾರ– ತುರಾಯಿ ಹಾಕುವುದು, ಸನ್ಮಾನ ಮಾಡುವುದು ಬೇಡ’ ಎಂದು ಯಡಿಯೂರಪ್ಪ ತಾಕೀತು ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು