ಭಾನುವಾರ, ಅಕ್ಟೋಬರ್ 2, 2022
18 °C

ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್‌ ಸೃಷ್ಟಿ: ಸಚಿವ ಪ್ರಲ್ಹಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ರಾಜ್ಯ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್‌ ಆಗಾಗ ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಮುನ್ನೆಲೆಗೆ ತಂದು ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆಯಿಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹಾಗೂ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಹೈಕಮಾಂಡ್‌ ಮುಂದೆಯೂ ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವ ಇಲ್ಲ. ಜಗದೀಶ ಶೆಟ್ಟರ್‌ ಪಕ್ಷದ ಹಿರಿಯ ನಾಯಕರಾಗಿರುವುದರಿಂದ, ಮುಖ್ಯಮಂತ್ರಿ ಬದಲಾವಣೆ ವದಂತಿ ಎದ್ದಾಗ ಅವರ ಹೆಸರು ಕೇಳಿ ಬರುತ್ತದೆ. 2023ರ ವಿಧಾನಸಭಾ ಚುನಾವಣೆಯವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದರು.

‘ಸಿ.ಎಂ. ಹುದ್ದೆ ಖಾಲಿಯಿಲ್ಲ’: ‘ನಾನು ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಸುದ್ದಿಯ ಮೂಲ ನನಗೂ ತಿಳಿದಿಲ್ಲ. ಆ ಕುರಿತು ನನ್ನ ಜೊತೆ ರಾಷ್ಟ್ರೀಯ ನಾಯಕರು ಚರ್ಚೆಯೂ ನಡೆಸಿಲ್ಲ. ಅಷ್ಟಕ್ಕೂ, ಮುಖ್ಯಮಂತ್ರಿ ಹುದ್ದೆ ಖಾಲಿಯೂ ಇಲ್ಲ. ವೈಯಕ್ತಿಕ ಪ್ರವಾಸದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ದೆಹಲಿ, ಕಾಶಿಗೆ ತೆರಳಿದ್ದು ಬಿಟ್ಟರೆ, ಇತ್ತೀಚೆಗೆ ಎಲ್ಲಿಯೂ ಹೋಗಿಲ್ಲ. ಶೆಟ್ಟರ್‌ ದೆಹಲಿಗೆ ತೆರಳಿದ್ದಾರೆ, ಹೈಕಮಾಂಡ್‌ ಭೇಟಿ ಮಾಡಿದ್ದಾರೆ ಎಂದೆಲ್ಲ ಸುದ್ದಿ ಬರುತ್ತಿದೆ. ಪಕ್ಷದ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ವಿಶೇಷವೇನಲ್ಲ. ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿದ್ದರೆ ವಿಶೇಷ ಎನ್ನಬಹುದಿತ್ತು’ ಎಂದು ಶಾಸಕ ಜಗದೀಶ ಶೆಟ್ಟರ್‌ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು