ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರು, ಅಧಿಕಾರಿಗಳ ಮಧ್ಯೆ ಸಮನ್ವಯವೇ ಇಲ್ಲ: ಎಚ್‌.ಡಿ.ಕುಮಾರಸ್ವಾಮಿ ಟೀಕೆ

Last Updated 20 ನವೆಂಬರ್ 2021, 21:12 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯಿಂದಾಗಿ ಇಡೀ ರಾಜ್ಯವೇ ನಡುಗಡ್ಡೆಯಂತಾಗಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ‘ಸಚಿವರು–ಅಧಿಕಾರಿಗಳ ಮಧ್ಯೆ ಸಮನ್ವಯವೇ ಇಲ್ಲ’ ಎಂದು ದೂರಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಮಹಾಮಳೆ ತಂದೊಡ್ಡಿರುವ ಪ್ರವಾಹದಂತಹ ಪರಿಸ್ಥಿತಿಯಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಬೆಳೆದಿರುವ ಫಸಲು ಕೈಗೆ ಸಿಗದೇ ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ. ಸಚಿವರು, ಶಾಸಕರು ಶಂಖ ಊದಿಕೊಂಡು ಊರೂರು ತಿರುತ್ತಿದ್ದಾರೆ. ಅಧಿಕಾರಿಗಳು ತಮಗೇಕೆ ಈ ಉಸಾಬರಿ ಎಂದು ಸುಮ್ಮನಾಗಿದ್ದಾರೆ’ ಎಂದು ಕಟಕಿಯಾಡಿದರು.

ಸಾಧನೆಯ ಆಧಾರದ ಮೇಲೆ ಶಂಖ ಊದಿದರೆ ಪರಿಷತ್‌ ಚುನಾವಣೆಯ ಮೇಲೆ ಪರಿಣಾಮ ಆಗುವುದಿಲ್ಲ. ಎಲ್ಲಿ ಬೇಕಾದರೂ ಕುಳಿತುಕೊಂಡು ಗೆಲ್ಲುವ ಕಲೆ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

‘ಕುಮಾರಸ್ವಾಮಿ ಅವರ ರೀತಿ ತಾವು ದಿನಕ್ಕೆರಡು ಬಾರಿ ಕ್ಯಾಮರಾ ಮುಂದೆ ಬರಲು ಆಗುತ್ತದೆಯೇ’ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಟೀಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನನ್ನ ಪ್ರಕಾರ ಇಂತಹ ಗೃಹ ಸಚಿವರು ಈವರೆಗೆ ಬರಲೇ ಇಲ್ಲ. ಪಾಪ ಅವರು; ಜನರ ಕಷ್ಟ ಕೇಳಲು ನಿದ್ದೆ ಕೂಡ ಮಾಡುತ್ತಿಲ್ಲ ಅನಿಸುತ್ತಿದೆ. ಅವರ ಶಿವಮೊಗ್ಗ ಜಿಲ್ಲೆ ಹೇಗಿದೆ, ಅಡಿಕೆ ಬೆಳೆಗಾರರು ಹೇಗಿದ್ದಾರೆ, ಅವರ ಕಷ್ಟ ಸುಖ ವಿಚಾರ ಮಾಡಿದ್ದೀರಾ ಜ್ಞಾನೇಂದ್ರ ಅವರೇ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

‘ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸಂದೇಶ್ ನಾಗರಾಜ್ ಮತ್ತು ಸಿ.ಆರ್. ಮನೋಹರ್ ಮತ್ತೆ ಪಕ್ಷಕ್ಕೆ ವಾಪಸ್ ಬರುವ ವಿಚಾರ ನನ್ನ ಮುಂದೆ ಇಲ್ಲ. ನಮ್ಮ ಮೇಲೆ ನಂಬಿಕೆ ಇಲ್ಲ ಅಂತ ಹೋದವರು ಅವರು’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT