ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಗಳಿಂದ ಚಿತ್ರಕಲೆಗೆ ಸಿಗದ ರಾಜ್ಯೋತ್ಸವ ಪ್ರಶಸ್ತಿ

ಹಿರಿಯ ಕಲಾವಿದ ಪ.ಸ.ಕುಮಾರ್ ಬೇಸರ
Last Updated 30 ನವೆಂಬರ್ 2022, 5:53 IST
ಅಕ್ಷರ ಗಾತ್ರ

ಧಾರವಾಡ: ‘ಚಿತ್ರಕಲೆ ಕ್ಷೇತ್ರದಿಂದ ಸರ್ಕಾರ ಯಾರನ್ನೂ ಸರಿಯಾಗಿ ಗುರುತಿಸದ ಕಾರಣ ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರದ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲ’ ಎಂದುಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಜೀವಮಾನ ಸಾಧನೆಗೆ ನೀಡುವ ‘ಕುಂಚ ಕಲಾ ತಪಸ್ವಿ’ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತಪಿ.ಸಂಪತ್ ಕುಮಾರ್ (ಪ.ಸ.ಕುಮಾರ್) ಬೇಸರ ವ್ಯಕ್ತಪಡಿಸಿದರು.

ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ₹1ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಸರ್ಕಾರಿ ದಾಖಲೆಯಲ್ಲಿ ಪ್ರಶಸ್ತಿ ನೀಡಲಾಗಿದೆ. ಆದರೆ ಅರ್ಹ ಕಲಾವಿದರಿಗೆ ಅದು ದೊರೆತಿಲ್ಲ.ಸರ್ಕಾರದ ಮಟ್ಟದಲ್ಲಿ ಕಲೆಗೆ ಬೆಲೆ ಕಡಿಮೆಯಾಗುತ್ತಿದೆ. ಮನುಷ್ಯನಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಬಹಳಾ ಮುಖ್ಯ. ಇತರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡುವ ಸರ್ಕಾರಗಳು, ಸಂಸ್ಖೃತಿ ಇಲಾಖೆಯನ್ನು ನಿರ್ಲಕ್ಷಿಸುತ್ತಿವೆ’ ಎಂದರು.

‘ಧಾರವಾಡದ ಮಣ್ಣು ಸಾಂಸ್ಕೃತಿಕವಾಗಿ ಗಟ್ಟಿಯಾದ ನೆಲೆಯಾಗಿದೆ. ಇಂಥ ಸ್ಥಳದಲ್ಲಿ ಹಾಲಭಾವಿ ಅವರ ಹೆಸರಿನ ಪ್ರಶಸ್ತಿ ಪಡೆದಿದ್ದು ಖಷಿ ಕೊಟ್ಟಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರಾದಾನ ಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ‘ಇತ್ತೀಚಿನ ದಿನಗಳಲ್ಲಿ ಸಂಘ- ಸಂಸ್ಥೆಗಳು ನೀಡುವ ಪ್ರಶಸ್ತಿಗಳ ಹಾವಳಿ ಹೆಚ್ಚಾಗಿದೆ. ಇಲ್ಲಿ ಪ್ರಶಸ್ತಿಯನ್ನು ಪಡೆಯುವುದು ಮುಖ್ಯವಲ್ಲ. ಅದರ ಮೌಲ್ಯವನ್ನು ಹೆಚ್ಚಿಸಬೇಕಿದೆ’ ಎಂದರು.

‘ನಾಗರಿಕತೆಗೆ ಮಹಿಳೆಯ ಕೊಡುಗೆ ಅನನ್ಯವಾಗಿದೆ. ಹೀಗಾಗಿ ಯಾವುದೇ ಪ್ರಶಸ್ತಿ ಆಯ್ಕೆಯಲ್ಲಿ ಮಹಿಳೆಯರನ್ನು ಪರಿಗಣಿಸುವುದು ಅಗತ್ಯ. ಕಲಾವಿದರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಮಾಜದಲ್ಲಿ ಅವರನ್ನು ಗೌರವದಿಂದ ಕಾಣಬೇಕು. ಚಿತ್ರಕಲಾ ಕ್ಷೇತ್ರದಲ್ಲಿ ಗುರು- ಶಿಷ್ಯ ಪರಂಪರೆ ಮುಂದುವರೆಯಬೇಕು‘ ಎಂದು ಹೇಳಿದರು.

ಧಾರವಾಡದ ಎಫ್‌.ವಿ.ಚಿಕ್ಕಮಠ ಅವರು ₹50ಸಾವಿರ ನಗದು ಪುರಸ್ಕಾರ ಹೊಂದಿದ ಕುಂಚ ಕಲಾಶ್ರೀ ಪ್ರಶಸ್ತಿಯನ್ನು, ತಲಾ ₹25ಸಾವಿರ ನಗದು ಪುರಸ್ಕಾರ ಹೊಂದಿದ ಯುವ ಕುಂಚ ಕಲಾಶ್ರೀ ಪ್ರಶಸ್ತಿಯನ್ನು ಚಿಕ್ಕಮಗಳೂರಿನ ಲಕ್ಷ್ಮೀ ಮೈಸೂರು, ಮುಂಬೈನ ಸತೀಶ ಪಾಟೀಲ ಅವರಿಗೆ ಪ್ರದಾನ ಮಾಡಲಾಯಿತು.

ಚಂದ್ರಕಾಂತ ಬೆಲ್ಲದ,ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಬಿ. ಮಾರುತಿ, ಬಿ.ಎಚ್. ಕುರಿಯವರ, ಬಿ.ಎಂ. ಪಾಟೀಲ, ಕುಮಾರ ಬೆಕ್ಕೇರಿ, ಪ್ರೊ. ಎಸ್.ಸಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT