ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ–ಉಬರ್ ವಿರುದ್ಧ ಬಲವಂತದ ಕ್ರಮ ಸಲ್ಲ: ಹೈಕೋರ್ಟ್

Last Updated 14 ಅಕ್ಟೋಬರ್ 2022, 18:53 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪ್ ಆಧಾರಿತ ಆಟೊರಿಕ್ಷಾ ಸೇವೆಗೆ ನ್ಯಾಯಯುತ ದರ ನಿಗದಿಗೆ 15 ದಿನಗಳ ಕಾಲಾವಕಾಶ ನೀಡಿರುವ ಹೈಕೋರ್ಟ್, ಅಲ್ಲಿಯವರೆಗೂ ಅಗ್ರಿಗೇಟರ್‌ಗಳ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಓಲಾ, ಉಬರ್ ಮತ್ತು ರ್‍ಯಾಪಿಡೊ ಕಂಪನಿಯವರು ಆ್ಯಪ್ ಆಧಾರಿತ ಆಟೊರಿಕ್ಷಾ ಪ್ರಯಾಣಿಕರ ಸೇವೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಆಟೊರಿಕ್ಷಾ ಸೇವೆ ಸ್ಥಗಿತಗೊಳಿಸಲು ಸೂಚಿಸಿ ಸರ್ಕಾರ ಹೊರಡಿಸಿರುವ ಆದೇಶ ಕಾನೂನುಬಾಹಿರ ಹಾಗೂ ಏಕಪಕ್ಷೀಯವಾಗಿದೆ. ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ದರ ಪಡೆಯಲಾಗುತ್ತಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳೂ ಇಲ್ಲ’ ಎಂದು ಪ್ರತಿಪಾದಿಸಿದರು.

ಇದನ್ನು ಅಲ್ಲಗಳೆದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ಬಹುತೇಕ ಅಗ್ರಿಗೇಟರ್‌ಗಳು ಪರವಾನಗಿ ಪಡೆಯದೇ ಕಾರ್ಯಚರಣೆ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಸಾರ್ವಜನಿಕರು ನೀಡಿರುವ ದೂರುಗಳ ಆಧಾರದ ಮೇಲೆ ಸರ್ಕಾರವು ಇದೇ 6 ಮತ್ತು 11ರಂದು ಆದೇಶ ಹೊರಡಿಸಿದೆ. ಸರ್ಕಾರ ದರ ನಿಗದಿಪಡಿಸಿ 2021ರ ನವೆಂಬರ್ 6ರಂದೇ ಆದೇಶ ಹೊರಡಿಸಿದೆ. ಅದರಲ್ಲಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚಿನ ದರವನ್ನು ಅರ್ಜಿದಾರ ಅಗ್ರಿಗೇಟರ್‌ಗಳು ಸಂಗ್ರಹಿಸುತ್ತಿದ್ದಾರೆ. ಮುಂದಿನ 12ರಿಂದ 15 ದಿನಗಳಲ್ಲಿ ಸರ್ಕಾರ ದರ ನಿಗದಿಪಡಿಸಲು ಸಿದ್ಧವಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಸದ್ಯ ತಾತ್ಕಾಲಿಕ ಪರಿಹಾರ ವ್ಯವಸ್ಥೆ ಮುಂದುವರಿಯಲಿ. ಅಲ್ಲಿಯವರೆಗೂ ಸರ್ಕಾರ ಮತ್ತು ಅದರ ಪ್ರತಿನಿಧಿಗಳು ಅಗ್ರಿಗೇಟರ್‌ಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು. ದರ ನಿಗದಿ ವೇಳೆ ಸರ್ಕಾರ ಎಲ್ಲಾ ಪಾಲುದಾರರ ಅಹವಾಲು ಆಲಿಸಬೇಕು. ಮಧ್ಯಂತರ ಪರಿಹಾರ ರೂಪದಲ್ಲಿ ಅರ್ಜಿದಾರರು ರಾಜ್ಯ ಸರ್ಕಾರ ನಿಗದಿಪಡಿಸಿರುವ ದರವನ್ನು ಪಾಲಿಸಬಹುದು. ಅದಕ್ಕೆ ಹೆಚ್ಚುವರಿ ಶೇ 10ರಷ್ಟು ಮತ್ತು ಆನ್ವಯಿಕ ತೆರಿಗೆಯನ್ನು ಸಂಗ್ರಹಿಸಬಹುದು’ ಎಂದು ನಿರ್ದೇಶಿಸಿತು.

‘ಆಟೊರಿಕ್ಷಾ ಸೇವೆ ಒದಗಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 6ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT