ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಣಿಗಲ್‌ ಬಳಿ ಏಕಮುಖ ಸಂಚಾರ: ಸಿ.ಸಿ. ಪಾಟೀಲ

ವಿವಿಧ ಘಟ್ಟ ಪ್ರದೇಶ, ಹೆದ್ದಾರಿ ಸ್ಥಿತಿ ಕುರಿತು ಲೋಕೋಪಯೋಗಿ ಸಚಿವರ ಸಭೆಯಲ್ಲಿ ಚರ್ಚೆ
Last Updated 19 ಜುಲೈ 2022, 17:02 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಜಿಲ್ಲೆ ಶಿರಾಡಿ ಘಾಟಿಯ ದೋಣಿಗಲ್‌ ಬಳಿ ಭೂಕುಸಿತ ಆಗಿದ್ದು, ರಸ್ತೆ ದುರಸ್ತಿ ಆಗುವವರೆಗೆ ಅಲ್ಲಿ ವಾಹನಗಳಿಗೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮಂಗಳವಾರ ತಿಳಿಸಿದರು.

ಇತ್ತೀಚಿಗೆ ಮಳೆ, ಭೂಕುಸಿತದಿಂದಾದ ರಾಷ್ಟ್ರೀಯ ಹೆದ್ದಾರಿ ಮತ್ತು ಘಟ್ಟ ಪ್ರದೇಶಗಳಲ್ಲಿನ ಸ್ಥಿತಿ ಬಗ್ಗೆ ಅಧಿಕಾರಿಗಳ ಜತೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು, ‘ಸುಮಾರು ಎರಡೂವರೆ ಕಿ.ಮೀ ರಸ್ತೆ ಏಕಮುಖ ಸಂಚಾರ ವ್ಯವಸ್ಥೆಗೆ ಒಳಪಡಲಿದೆ’ ಎಂದರು.

ಬೆಂಗಳೂರಿನಿಂದ ಮಂಗಳೂರು ಕಡೆ ಹೋಗುವ ವಾಹನಗಳು ಶಿರಾಡಿ ಘಾಟಿಯ ಈಗಿನ ರಸ್ತೆಯಲ್ಲೇ ಹೋಗಲು ಅವಕಾಶ ನೀಡಲಾಗುವುದು.ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಬರುವ ವಾಹನಗಳು ದೋಣಿಗಲ್‌ ಹತ್ತಿರದ ಕಪ್ಪಳ್ಳಿ–ಕೆಸಗಾನಹಳ್ಳಿ ಮಾರ್ಗವಾಗಿ ಇರುವ ಹಳೆ ರಸ್ತೆ ಬಳಸಬೇಕು. ಇದನ್ನು ತಾತ್ಕಾಲಿಕವಾಗಿ ವಿಸ್ತರಿಸಿ ಪರ್ಯಾಯ ರಸ್ತೆ ಮಾಡಲಾಗುವುದು ಎಂದರು.

ಏಕಮುಖ ಸಂಚಾರಕ್ಕೆ ಕೂಡಲೇ ಆದೇಶ ಮಾಡಲು ಹಾಸನ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ದೋಣಿಗಲ್‌ ಬಳಿ ಕಾರ್ಮಿಕರು, ರಸ್ತೆನಿರ್ಮಾಣದ ಕಚ್ಚಾ ಸಾಮಗ್ರಿಗಳು, ಯಂತ್ರೋಪಕರಣಗಳು ಸಿದ್ಧವಾಗಿಟ್ಟುಕೊಂಡು ತ್ವರಿತ ಕಾಮಗಾರಿಗೆ ಸೂಚಿಸಲಾಗಿದೆ ಎಂದರು.

‘ಏಕಮುಖ ಸಂಚಾರ ತಾತ್ಕಾಲಿಕವಾಗಿರಲಿದೆ. ದೋಣಿಗಲ್‌ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನುಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಶಿರಾಡಿ ಘಾಟಿ ರಸ್ತೆ ದುರಸ್ತಿ ತಡವಾಗಿದೆ ಎಂದು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ಹಲವು ಕಾರಣಗಳಿವೆ. ಈ ವಿಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ತಿಳಿಸಿದ್ದೇವೆ. ಅಗತ್ಯವಿದ್ದರೆ ಕೇಂದ್ರ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರನ್ನೂ ಭೇಟಿ ಮಾಡಿ ಕಾಮಗಾರಿ ತ್ವರಿತಗೊಳಿಸಲು ಒತ್ತಡ ಹೇರಲಾಗುವುದು’ ಎಂದು ಪಾಟೀಲ ತಿಳಿಸಿದರು.

ಈ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು 2023ರ ಮಾರ್ಚ್‌ಗೆ ಸಮಯ ವಿಸ್ತರಿಸಲಾಗಿದೆ. 39 ಕಿ.ಮೀ ಉದ್ದದ ರಸ್ತೆಯಲ್ಲಿ 20 ಕಿ.ಮೀ ರಾಷ್ಟ್ರೀಯ ಹೆದ್ದಾರಿ ವಲಯದ ವಶದಲ್ಲಿದ್ದು, ಉತ್ತಮವಾಗಿದೆ. 19 ಕಿ.ಮೀ (ಮಾರನಹಳ್ಳಿಯಿಂದ ಸಕಲೇಶಪುರ ಭಾಗ) ವ್ಯಾಪ್ತಿಯಲ್ಲಿ ಕಾಮಗಾರಿ ಕುಂಠಿತವಾಗಿದೆ. ಇದಕ್ಕೆ ₹200 ಕೋಟಿ ಬೇಕಿದ್ದು, ಜಿಎಸ್‌ಟಿ ವಿನಾಯ್ತಿ ನೀಡಿ, ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದೂ ಹೇಳಿದರು.

ಘಾಟ್‌ ರಸ್ತೆಗಳ ಸ್ಥಿತಿ, ದುರಸ್ತಿಗೆ ಬೇಕಾದ ಮೊತ್ತ

* ಸಂಪಾಜೆ, ಅರೆಬೈಲ್‌, ಆಗುಂಬೆ, ಗೇರುಸೊಪ್ಪೆ, ಮಾಲ್‌ ಘಾಟ್‌ ಪ್ರದೇಶಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ 63 ಕಡೆ ಭೂಕುಸಿತ ಮತ್ತು ಮುಚ್ಚಿ ಹೋಗಿರುವ ಚರಂಡಿ ತೆರವು ಮಾಡಲಾಗಿದೆ. ಇವೆಲ್ಲ ಘಾಟ್‌ಗಳ ಹಾನಿಗೊಳಗಾದ ರಸ್ತೆ ಶಾಶ್ವತವಾಗಿ ಪುನರ್‌ಸ್ಥಾಪನೆಗೆ ₹157 ಕೋಟಿ ಹಾಗೂ ತಾತ್ಕಾಲಿಕ ಪುನರ್‌ ಸ್ಥಾಪನೆಗೆ ₹ 10 ಕೋಟಿ ಬೇಕಾಗುತ್ತದೆ

* ಆಗುಂಬೆ ಘಾಟ್‌ನಲ್ಲಿ ಒಂದೆಡೆ ದೊಡ್ಡ ಭೂಕುಸಿತ ಮತ್ತು 45 ಕಡೆ ಸಣ್ಣ ಪ್ರಮಾಣದ ಭೂಕುಸಿತವಾಗಿದೆ. ಈ ರಸ್ತೆಯ ಶಾಶ್ವತ ಮರುಸ್ಥಾಪನೆಗೆ ₹55 ಕೋಟಿ, ತಾತ್ಕಾಲಿಕ ಪುನರ್‌ಸ್ಥಾಪನೆಗೆ ₹7 ಕೋಟಿ ಬೇಕಾಗುತ್ತದೆ.

* ಕೊಡಗು ಜಿಲ್ಲೆ ಸಂಪಾಜೆ ಘಾಟ್‌ನಲ್ಲಿ 12 ಕಡೆಗಳಲ್ಲಿ ಭೂಕುಸಿತವಾಗಿದೆ. ಇದರ ಶಾಶ್ವತ ಪುನರ್‌ ಸ್ಥಾಪನೆಗೆ ₹10 ಕೋಟಿ, ತಾತ್ಕಾಲಿಕ ಪುನರ್‌ ಸ್ಥಾಪನೆಗಾಗಿ ₹1.50 ಕೋಟಿ ಬೇಕಾಗುತ್ತದೆ.

* ಗೇರುಸೊಪ್ಪ ಘಾಟ್‌ನಲ್ಲಿ ಕಿ.ಮೀ 239.80ರಲ್ಲಿ ಭೂಕುಸಿತವಾಗಿದೆ. ಶಾಶ್ವತ ಪುನರ್‌ ಸ್ಥಾಪನೆಗಾಗಿ ₹ 80 ಲಕ್ಷ ಮತ್ತು ತಾತ್ಕಾಲಿಕವಾಗಿ ₹30 ಲಕ್ಷ ಬೇಕಾಗುತ್ತದೆ.

* ಅರೆಬೈಲು ಘಾಟ್‌ನಲ್ಲಿ ನಾಲ್ಕು ಕಡೆ ಕುಸಿತವಾಗಿದೆ. ಶಾಶ್ವತ ಪುನರ್‌ಸ್ಥಾಪನೆಗೆ ₹ 4 ಕೋಟಿ ಮತ್ತು ತಾತ್ಕಾಲಿಕ ಪುನರ್‌ ಸ್ಥಾಪನೆಗೆ ₹1.3 ಕೋಟಿ ಬೇಕಾಗುತ್ತದೆ.

ಕೊಡಗಿನಲ್ಲಿ ಮಣ್ಣು ಕುಸಿತ; ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಇಲ್ಲಿನ 2ನೇ ಮೊಣ್ಣಂಗೇರಿಯ ರಾಮನಕೊಲ್ಲಿ ಬಳಿ ಮಣ್ಣು ಕುಸಿತವಾಗಿದೆ.

2018ರಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದ ಕಡೆಯೇ ಮತ್ತೆ ಕುಸಿದಿದ್ದು, ಗುಡ್ಡದಿಂದ ಹರಿಯುವ ತೊರೆಯು ಮಣ್ಣು ಹಾಗೂ ಮರದದಿಮ್ಮಿಗಳನ್ನು ಕೊಚ್ಚಿಕೊಂಡು ಬಂದಿದೆ. ನಿರ್ಮಾಣ ಹಂತದಲ್ಲಿದ್ದ ರಾಮನಕೊಲ್ಲಿ ಸೇತುವೆಗೂ ಹಾನಿಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ತೆರಳಿ ಪರಿಶೀಲನೆ ನಡೆಸಿದರು. ಇಲ್ಲಿರುವ ಕುಟುಂಬದವರನ್ನು ಕಾಟಕೇರಿಯ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಆಶ್ರಯ ಕಲ್ಪಿಸಲು ನಿರ್ಧರಿಸಲಾಗಿದೆ.

ಇದಕ್ಕೂ ಮುನ್ನ, ‘ಭಾರಿ ಶಬ್ದದೊಂದಿಗೆ ಜಲಸ್ಫೋಟ ಸಂಭವಿಸಿದೆ’ ಎಂಬ ಸಂದೇಶಗಳು ವಾಟ್ಸ್ಆ್ಯಪ್‌ನಲ್ಲಿ ಹರಿದಾಡಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಪರಿಣತ ಅನನ್ಯ ವಾಸುದೇವ್, ‘ಇಲ್ಲಿ ತೀರಾ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ರಾಮನಕೊಲ್ಲಿಗೆ ಸೇರುವ ತೊರೆಯು ಈಚೆಗೆ ಸುರಿದ ಮಳೆಯಿಂದ ಸಹಜವಾಗಿಯೇ ತುಂಬಿ ಹರಿಯುತ್ತಿದೆ. ಆತಂಕದ ಪರಿಸ್ಥಿತಿ ಇಲ್ಲ’ ಎಂದು ತಿಳಿಸಿದರು.

ಗುಡುಗು ಸಹಿತ ಮಳೆ ಇಂದು: (ಬೆಂಗಳೂರು ವರದಿ): ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬುಧವಾರ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಮಳೆ ಪ್ರಮಾಣವು ಮುಂದಿನ ದಿನಗಳಲ್ಲಿ ತಗ್ಗಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT