ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಗುತ್ತಿಗೆ ಮೀಸಲು ₹ 1 ಕೋಟಿ ಮಿತಿ ಹೆಚ್ಚಿಸಲು ಸುಗ್ರೀವಾಜ್ಞೆ

ಸಂಪುಟ ಸಭೆಯಲ್ಲಿ ನಿರ್ಧಾರ l 2023–24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ
Last Updated 25 ಮಾರ್ಚ್ 2023, 5:16 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದ ಕಾಮಗಾರಿಗಳ ಮಿತಿಯನ್ನು ₹ 1 ಕೋಟಿಗೆ ಹೆಚ್ಚಿಸಿ ಅವಕಾಶ ಕಲ್ಪಿಸಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

2023–24ನೇ ಸಾಲಿನ ಬಜೆಟ್‌ನಲ್ಲಿ ಅನುಸೂಚಿತ ಜಾತಿ (ಎಸ್‌ಸಿ) ಮತ್ತು ಅನುಸೂಚಿತ ವರ್ಗಗಳ (ಎಸ್‌ಟಿ) ಗುತ್ತಿಗೆದಾರ ರಿಗೆ ಸರ್ಕಾರದ ಗುತ್ತಿಗೆ ಕಾಮಗಾರಿ ಗಳಲ್ಲಿ ಗುತ್ತಿಗೆ ಮೀಸಲಾತಿ ಮಿತಿ ಯನ್ನು ₹ 1 ಕೋಟಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದರು.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಗುತ್ತಿಗೆ ಮೀಸಲಾತಿ ಮಿತಿ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲು ಅನುಮೋದನೆ ನೀಡಲಾಗಿದೆ.

ಸಂಪುಟ ಸಭೆಯ ಇತರ ತೀರ್ಮಾನಗಳು

l 2022–23ನೇ ಸಾಲಿನಿಂದ ಆರಂಭವಾಗಿರುವ ಪರಿಷ್ಕೃತ ಯಶಸ್ವಿನಿ ಯೋಜನೆಯಡಿ ಬರುವ ಕೆಲವು ಚಿಕಿತ್ಸೆಗಳಿಗೆ ಹಿಂದಿನ ಯಶಸ್ವಿನಿ ಯೋಜನೆಯ ದರಗಳನ್ನೇ ಅಳವಡಿಸಿಕೊಳ್ಳಲು ಜ. 24ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ

l ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀರಣ ಯೋಜನೆಯಡಿ ಒಟ್ಟು ₹ 66.99 ಕೋಟಿಗಳಿಗೆ ಹಾರ್ಡ್‌ವೇರ್‌ ಸಾಮಾಗ್ರಿಗಳನ್ನು ಖರೀದಿಸಲು ಅನುಮೋದನೆ

l ಅಂಗವಿಕಲ ಸರ್ಕಾರಿ ನೌಕರರಿಗೆ ಗುಂಪು–ಡಿ ಮತ್ತು ಗುಂಪು–ಸಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾವಕ್ಕೆ ಒಪ್ಪಿಗೆ

l ನೂತನ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರವನ್ನು ₹ 592.86 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ

l ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕುಕನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೈಗೊಂಡಿರುವ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗಳ ಮೂಲ ಅಂದಾಜು ₹ 9.50 ಕೋಟಿಗಳಿದ್ದು, ಪರಿಷ್ಕೃತ ಅಂದಾಜು ₹ 11.18 ಕೋಟಿಗೆ ಆಡಳಿತಾತ್ಮಕ ಅನುಮೋದನೆ

l ರಾಜ್ಯ ಏಳು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳನ್ನು ‘ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ (ಕೆಐಟಿ) ಆಗಿ ಉನ್ನತೀಕರಿಸಲು ಮತ್ತು ಬೆಂಗಳೂರು ಸರ್ಕಾರಿ ಎಸ್‌ಕೆಎಸ್‌ಜೆಐಟಿ ಸಂಸ್ಥೆಯ ಸಿವಿಲ್‌ ಕಾಮಗಾರಿಗಳನ್ನು ₹ 32.50 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ

l ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿ 10 ಮಾದರಿ ಎಸ್‌ಸಿ, ಎಸ್‌ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯ ಮೂಲ ಅಂದಾಜು ₹ 237.50 ಕೋಟಿಯಿದ್ದು, ಪರಿಷ್ಕೃತ ಅಂದಾಜು ₹ 347.35 ಕೋಟಿಗೆ ಅನುಮೋದನೆ

l ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 11 ಕ್ರಿಮಿನಲ್‌ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯುವುದು

l ನಬಾರ್ಡ್‌ ನೆರವಿನ ವಿಜಯಪುರ ಜಿಲ್ಲೆ ತಿಕೋಟ ತಾಲ್ಲೂಕಿನ ತೊರವಿ ಗ್ರಾಮದಲ್ಲಿ ಒಣದ್ರಾಕ್ಷಿ ಸಂಸ್ಕರಣೆಗೆ ಸಮುದಾಯ ಸೌಲಭ್ಯ ಕೇಂದ್ರದ ಜೊತೆ 10 ಸಾವಿರ ಟನ್‌ ಶೀತಲ ಘಟಕವನ್ನು ₹ 40.75 ಕೋಟಿ ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ

l ಕರ್ನಾಟಕ ಗೃಹ ಮಂಡಳಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿ, ಪುಲಿಮಂಚಿ ಹಾಗೂ ಸಸಿಮಾಕನಹಳ್ಳಿ ಗ್ರಾಮದ ಒಟ್ಟು 71 ಎಕರೆ 29 ಗುಂಟೆ ಜಮೀನುಗಳನ್ನು ಶೇ 50:50 ಅನುಪಾತದ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲು ಹಾಗೂ ಪ್ರತಿ ಎಕರೆಗೆ ₹ 15 ಲಕ್ಷ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಹಾಗೂ ₹ 113.77 ಕೋಟಿ ಮೊತ್ತದಲ್ಲಿ ವಸತಿ ಯೋಜನೆ ಕೈಗೊಳ್ಳಲು ಅನುಮೋದನೆ

l ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕು ಮತ್ತು ಹೋಬಳಿ ಅತ್ತಿಕೊಳ್ಳ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 26 ಎಕರೆ 28 ಗುಂಟೆ ಜಮೀನನ್ನು ಶೇ 50:50 ಅನುಪಾತದ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲು ಹಾಗೂ ಪ್ರತಿ ಎಕರೆಗೆ ₹ 10 ಲಕ್ಷ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಹಾಗೂ ₹ 43.36 ಕೋಟಿ ಮೊತ್ತದಲ್ಲಿ ವಸತಿ ಯೋಜನೆ ಕೈಗೊಳ್ಳಲು ಅನುಮೋದನೆ

l ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗೆ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕು ಇರಕಲಗಡ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು ಕ್ಷೇತ್ರ 25 ಎಕರೆ 15 ಗುಂಟೆ ಜಮೀನನ್ನು ಶೇ 60:40 ಅನುಪಾತದ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಭೂಮಾಲೀಕರಿಗೆ ನೀಡಲು ಹಾಗೂ ಯೋಜನೆ ವೆಚ್ಚ ₹ 27.50 ಕೋಟಿಗಳಿದ್ದು, ಪ್ರತಿ ಎಕರೆಗೂ ₹ 5 ಲಕ್ಷಗಳ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಒಪ್ಪಿಗೆ

l ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಗ್ರಾಹಕರಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಸರಬರಾಜು (ಪಿಎನ್‌ಜಿ) ಮತ್ತು ವಾಹನಗಳಿಗೆ ಕಂಪ್ರೆಸ್ಡ್‌ ನೈಸರ್ಗಿಕ ಅನಿಲ (ಸಿಎನ್‌ಜಿ) ಒದಗಿಸಲು, ‘ನಗರ ಅನಿಲ ವಿತರಣಾ ಜಾಲದ ಅಭಿವೃದ್ಧಿ ರಾಜ್ಯ ನೀತಿ’ಗೆ ಅನುಮೋದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT