ಬುಧವಾರ, ಮೇ 25, 2022
30 °C

ನನ್ನನ್ನೂ ದೇವಸ್ಥಾನದ ಒಳಗೆ ಬಿಡಲ್ಲ: ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರಟಗೆರೆ (ತುಮಕೂರು): ‘ರಾಜ್ಯದ ಹಿರಿಯ ರಾಜಕಾರಣಿಯಾಗಿರುವ ನನ್ನನ್ನೂ ಇಂದಿಗೂ ದೇವಸ್ಥಾನದ ಒಳಗೆ ಸೇರಿಸುವುದಿಲ್ಲ’ ಎಂದು  ಶಾಸಕ ಡಾ.ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು. 

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಸ್ಪೃಶ್ಯತೆಯ ಕಹಿ ಅನುಭವವನ್ನು ಬಿಚ್ಚಿಟ್ಟರು .

‘ಪಿಎಚ್‌.ಡಿ ಮಾಡಿದ್ದೇನೆ. ವಿದೇಶಗಳಿಗೆ ಹೋಗಿ ಬಂದಿದ್ದೇನೆ. ಹಿಂದೆ ಸಚಿವನಾಗಿದ್ದೆ, ಈಗ ಶಾಸಕನಾಗಿದ್ದೇನೆ. ರಾಜ್ಯದಲ್ಲಿ ಹಿರಿಯ ರಾಜಕಾರಣಿಯಾಗಿದ್ದೇನೆ. ಆದರೂ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವುದಿಲ್ಲ’ ಎಂದು ಹೇಳಿದರು.

‘ದೇವಸ್ಥಾನಗಳಿಗೆ ಹೋದರೆ ಸ್ವಲ್ಪ ನಿಂತುಕೊಳ್ಳಿ, ಅಲ್ಲಿಗೆ ಮಂಗಳಾರತಿ ತರುತ್ತೇವೆ ಎನ್ನುತ್ತಾರೆ. ದೇವಸ್ಥಾನದ ಒಳಕ್ಕೆ ಹೋಗುವ ಮೊದಲೇ ನನ್ನ ಹತ್ತಿರ ಮಂಗಳಾರತಿ ತರುತ್ತಾರೆ. ದೇವರ ಬಳಿ ಹೋಗಲು ಬಿಡುವುದಿಲ್ಲ. ದೇವಸ್ಥಾನದ ಒಳಗೆ ಬರುತ್ತಾರೆ ಎಂಬ ಆತಂಕದಿಂದ ಮಂಗಳಾರತಿಯನ್ನು ದೇವಸ್ಥಾನದಿಂದ ಹೊರಕ್ಕೆ ಹಿಡಿದುಕೊಂಡು ಓಡಿ ಬರುತ್ತಾರೆ. ಇಂತಹ ದಯನೀಯ ಸ್ಥಿತಿ ಈ ಸಮಾಜದಲ್ಲಿ ಇನ್ನೂ ಜೀವಂತ ಇದೆ’ ಎಂದು ವಿಷಾದಿಸಿದರು.

‘ಪ್ರಪಂಚದ ಯಾವುದೇ ದೇಶದಲ್ಲೂ ಇಂತಹ ಕೀಳುಮಟ್ಟದ ಜಾತಿ ವ್ಯವಸ್ಥೆ ಕೇಳಿಲ್ಲ, ನೋಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಎಂದು ದೊಡ್ಡದಾಗಿ ಹೇಳುತ್ತಾರೆ. ಜತೆಯಲ್ಲಿ ಹುಟ್ಟಿದ ಪರಿಶಿಷ್ಟರನ್ನು ಹೊರಗಿಡುತ್ತಾರೆ. ಇದು ಯಾವ ಸಂಸ್ಕೃತಿ’ ಎಂದು ಪರಮೇಶ್ವರ ಖಾರವಾಗಿ ಪ್ರಶ್ನಿಸಿದರು.

‘ನಾಯಿ ಕೆರೆಯಲ್ಲಿ ನೀರು ಕುಡಿಯುತ್ತದೆ. ಆದರೆ, ಪರಿಶಿಷ್ಟ ಜಾತಿಯವರು ಕೆರೆ ನೀರು ಮುಟ್ಟುವಂತಿಲ್ಲ. ಅಂತಹ ಪರಿಸ್ಥಿತಿಯನ್ನು ಇಂದಿಗೂ ನೋಡುತ್ತಿದ್ದೇವೆ. ಅಂತರ್ಜಾತಿ ವಿವಾಹ ಮಾಡಿಸಿದರೆ ಜಾತೀಯತೆ ತೊಲಗುತ್ತದೆ ಎಂಬ ಕಾರಣಕ್ಕೆ ಬಸವಣ್ಣನವರು ಆ ಕಾಲಕ್ಕೆ ಅಂತರ್ಜಾತಿ ವಿವಾಹ ಮಾಡಿಸಿದರು. ಆದರೆ ಈಗ ಅಂತರ್ಜಾತಿ ವಿವಾಹವಾದರೆ ನೇಣು ಹಾಕುವುದನ್ನು ಕಣ್ಣಾರೆ ಕಂಡಿದ್ದೇವೆ. ಮರ್ಯಾದೆಗೇಡು ಹತ್ಯೆ ನಡೆಯುತ್ತಿವೆ. ಸಮಾನತೆ ಬಗ್ಗೆ ಮಾತನಾಡುವ ನಾವು ಈ ಬಗ್ಗೆ ಯೋಚನೆ ಮಾಡಬೇಕಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು