ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬದಲಾವಣೆ ಕುರಿತ ಯತ್ನಾಳ ಹೇಳಿಕೆ ಸಂಬಂಧ ಸೂಕ್ತ ಸಂದರ್ಭದಲ್ಲಿ ನಿರ್ಧಾರ: ರವಿ

Last Updated 20 ಅಕ್ಟೋಬರ್ 2020, 7:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬದಲಾವಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ನನಗೆ ಜವಾಬ್ದಾರಿಯ ಅರಿವಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯತ್ನಾಳ ಅವರು ಆಗಾಗ ಇಂತಹ ಹೇಳಿಕೆ ನೀಡುತ್ತಿರುತ್ತಾರೆ. ಸೂಕ್ತ ಸಮಯದಲ್ಲಿ ಪಕ್ಷವು ಯತ್ನಾಳರ ಬಗೆಗೆ ನಿರ್ಧಾರ ತೆಗೆದುಕೊಳ್ಳಲಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದರು.

‘ಕೋವಿಡ್‌–19 ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಹಾಗಾಗಿ, ಶಾಸಕರ ನಿರೀಕ್ಷೆಗೆ ತಕ್ಕಷ್ಟು ಅನುದಾನ ಬಿಡುಗಡೆ ಸಾಧ್ಯವಾಗಿಲ್ಲ. ಈ ನಡುವೆಯೂ ಆದ್ಯತೆ ಮೇರೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಪ್ರವಾಹ ಸಂತ್ರಸ್ಥರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ಉಳಿದುಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಕೇಂದ್ರದಿಂದಲೂ ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ಪರಿಹಾರ ಬಂದಿದೆ. ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ’ ಎಂದರು.

‘ಮನೆ ಬಿದ್ದವರಿಗೆ ಮರು ನಿರ್ಮಾಣಕ್ಕಾಗಿ ₹5 ಲಕ್ಷ ಬಿಡುಗಡೆ ಮಾಡಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮನೆಗಳ ನಿರ್ಮಾಣದ ಪ್ರಗತಿಯ ವರದಿ ಬಂದಿಲ್ಲ. ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಲಾಗುವುದು. ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೂ ತರಲಾಗುವುದು ಎಂದು ಹೇಳಿದರು.

ಸುಧಾರಣಾ ಪರ್ವ: ಹೊಸ ಶಿಕ್ಷಣ ನೀತಿ, ಜಿಎಸ್‌ಟಿ, ಅಯೋದ್ಯೆ ರಾಮ ಮಂದಿರ ನಿರ್ಮಾಣ, ಒಂದು ದೇಶ ಒಂದು ಪಡಿತರ ಸೇರಿದಂತೆ ಹಲವು ಕ್ರಾಂತಿಕಾರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಕೇಂದ್ರ ಸರ್ಕಾರ ಸುಧಾರಣಾ ಪರ್ವವನ್ನೇ ಅರಂಭಿಸಿದೆ ಎಂದು ಅವರು ತಿಳಿಸಿದರು.

ರಾಷ್ಟ್ರದ ಹಿತಕ್ಕಾಗಿ ನೀಡುತ್ತಿರುವ ಆಡಳಿತವನ್ನು ದೇಶದ ಜನತೆಯೂ ಚುನಾವಣೆಗಳಲ್ಲಿ ಬೆಂಬಲಿಸುತ್ತಾ ಬಂದಿದ್ದಾರೆ. ಪ್ರತಿಪಕ್ಷಗಳಿಗೆ ಟೀಕಿಸಲು ವಿಷಯಗಳೇ ಇಲ್ಲದಂತಾಗಿದೆ ಎಂದರು.

ಮುಂದಿನ ವರ್ಷ ತಮಿಳುನಾಡು, ಕೇರಳದಲ್ಲಿ ಚುನಾವಣೆ ನಡೆಯಲಿವೆ. ಸರ್ಕಾರ ರಚನೆಯಲ್ಲಿ ಬಿಜೆಪಿ ಮುಖ್ಯ ಪಾತ್ರವಹಿಸಲಾಗಿದೆ ಎಂದು ಹೇಳಿದರು.

ಎಂಬಿಪಿ, ವಿನಯ್‌ ಸೇರ್ಪಡೆ ಚರ್ಚೆಯಾಗಿಲ್ಲ

ಹುಬ್ಬಳ್ಳಿ: ಕಾಂಗ್ರೆಸ್‌ ಶಾಸಕ ಎಂ.ಬಿ. ಪಾಟೀಲ, ಮಾಜಿ ಶಾಸಕ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿಲ್ಲ ಎಂದು ಸಚಿವ ಸಿ.ಟಿ. ರವಿ ಹೇಳಿದರು.

ಇಂತಹ ವಿಷಯಗಳಲ್ಲಿ ನಿರ್ಧಾರವನ್ನು ಸ್ಥಳೀಯ ಘಟಕಗಳೊಂದಿಗೆ ಚರ್ಚಿಸಿಯೇ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT