ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿ ಆಡಳಿತ: ಇಲಾಖೆಗಳಿಗೆ ಶ್ರೇಯಾಂಕ

ಆಡಳಿತ ಸುಧಾರಣೆಗೆ ಸಿ.ಎಂ ಬೊಮ್ಮಾಯಿ ಸೂಚನೆ
Last Updated 10 ಜನವರಿ 2022, 15:39 IST
ಅಕ್ಷರ ಗಾತ್ರ

ಬೆಂಗಳೂರು: ಜನಸ್ನೇಹಿ ಆಡಳಿತದ ದೃಷ್ಟಿಯಿಂದ ಎಲ್ಲ ಇಲಾಖೆಗಳಿಗೂ ಶ್ರೇಯಾಂಕ ನೀಡುವುದಕ್ಕೆ ಪೂರಕವಾಗಿ ಮಾನದಂಡಗಳನ್ನು ನಿಗದಿಪಡಿಸಲು ಮುಂದಿನ ವರದಿಯಲ್ಲಿ ಸಲಹೆಗಳನ್ನು ನೀಡುವಂತೆ ರಾಜ್ಯ ಆಡಳಿತ ಸುಧಾರಣಾ ಆಯೋಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಆಡಳಿತ ಸುಧಾರಣೆ ಕುರಿತು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯ ಭಾಸ್ಕರ್‌, ವಿವಿಧ ಸಚಿವರು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು, ಆಯೋಗದ ಮುಂದಿನ ವರದಿಯಲ್ಲಿ ಕೇಂದ್ರೀಕರಿಸಬೇಕಾದ ವಿಷಯಗಳ ಬಗ್ಗೆ ಸಮಾಲೋಚಿಸಿದರು.

ಕಡತ ವಿಲೇವಾರಿಯ ಹಂತಗಳನ್ನು ಕಡಿಮೆ ಮಾಡಬೇಕು. ಕಡತ ವಿಲೇವಾರಿಯಲ್ಲಿ ಕೇಂದ್ರೀಕೃತ ವ್ಯವಸ್ಥೆ ಬದಲಾಗಿ ವಿಕೇಂದ್ರೀಕೃತ ವ್ಯವಸ್ಥೆ ರೂಪಿಸುವಂತೆ ಸಲಹೆ ನೀಡಬೇಕು. ಸಾರ್ವಜನಿಕರಿಗೆ ಸುಲಭವಾಗಿ ಸರ್ಕಾರಿ ಸೇವೆಗಳನ್ನು ಒದಗಿಸುವುದಕ್ಕೆಪೂರಕವಾಗಿ ನಿರ್ಧಾರ ಕೈಗೊಳ್ಳಯವ ಹಂತಗಳನ್ನು ಕಡಿಮೆ ಮಾಡಬೇಕು. ಕೆಳಹಂತದ ಅಧಿಕಾರಿಗಳಿಗೆ ಹೆಚ್ಚು ಅಧಿಕಾರ ನೀಡಬೇಕು. ಕಂದಾಯ ಇಲಾಖೆಯ ಕೆಲವು ಹೊಣೆಗಳನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

ಜಂಟಿ ಕಾರ್ಯದರ್ಶಿಗಳು ಮತ್ತು ಉಪ ಕಾರ್ಯದರ್ಶಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಬೃಹತ್‌ ನೀರಾವರಿ ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕಾರವನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಬೇಕು. ಲೋಕೋಪಯೋಗಿ, ಜಲ ಸಂಪನ್ಮೂಲ ಇಲಾಖೆಯ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಬದಲಾವಣೆಗಳನ್ನು ತರಬೇಕು ಎಂದರು.

ಕಾಯ್ದೆಗಳಲ್ಲಿ ಬದಲಾವಣೆ ತರುವುದು, ಪುನರಾವರ್ತಿತ ಕಾಯ್ದೆಗಳನ್ನು ಗುರುತಿಸುವುದು, ಸರ್ಕಾರಿ ಯೋಜನೆಗಳು ಮತ್ತು ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಿದ್ದು, ಬ್ಯಾಂಕ್‌ ಖಾತೆಗಳಲ್ಲೇ ಉಳಿದಿರುವ ಮೊತ್ತವನ್ನು ತ್ವರಿತವಾಗಿ ಬಳಕೆ ಮಾಡುವುದಕ್ಕೂ ಸಲಹೆಗಳನ್ನು ನೀಡಬೇಕು ಎಂದು ಸೂಚಿಸಿದರು.

ಸಚಿವರಾದ ಆರಗ ಜ್ಞಾನೇಂದ್ರ, ಬೈರತಿ ಬಸವರಾಜ, ಡಾ.ಕೆ. ಸುಧಾಕರ್‌, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಯೋಜನಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಪಿ. ಹೇಮಲತಾ, ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಮುನೀಶ್‌ ಮೌದ್ಗಿಲ್‌ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT