ಮಂಗಳವಾರ, ಅಕ್ಟೋಬರ್ 19, 2021
24 °C
‘ಬೆಲೆ ಏರಿಕೆ ಅಪರಾಧಿಗಳು ನಾವೇ’ ಎಂದ ಕೆ.ಆರ್‌.ರಮೇಶ್‌ಕುಮಾರ್‌

ಅಕ್ಕಿ–ಬೇಳೆ ಮಾತ್ರವಲ್ಲ, ಜನರ ಬದುಕೇ ದುಬಾರಿ: ರಮೇಶ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಲೆ ಏರಿಕೆಯ ಅಪರಾಧಿಗಳು ನಾವು ಇಲ್ಲೇ ಇದ್ದೇವೆ. ಪೆಟ್ರೋಲ್‌, ಡೀಸೆಲ್‌, ಅಕ್ಕಿ, ಬೇಳೆ ಇತ್ಯಾದಿಗಳ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತೇವೆ. ಆದರೆ, ಜನ ಸಾಮಾನ್ಯರ ಒಟ್ಟಾರೆ ಬದುಕೇ ದುಬಾರಿಯಾಗಿದೆ. ಇದಕ್ಕೆ ಆಡಳಿತ ನಡೆಸಿದ ಎಲ್ಲ ಪಕ್ಷಗಳೂ ಕಾರಣ’ ಎಂದು ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ಬೆಲೆ ಏರಿಕೆ ಕುರಿತು ವಿಧಾನಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಪ್ರತಿ ನಿತ್ಯ ‘ಆಡಿ’ ಕಾರಿನಲ್ಲಿ ಬಂದು ಇಳಿಯುವ ನಾವು ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿದ್ದೇವೆ’ ಎಂದು ವ್ಯಂಗ್ಯವಾಡಿದರು.

‘ಉಕ್ಕು, ಸಿಮೆಂಟ್‌, ಖಾದ್ಯ ತೈಲದ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತೇವೆ. ಕಲ್ಯಾಣ ಮಂಟಪಗಳಲ್ಲಿ 2 ದಿನ ಮದುವೆ ನಡೆಸಲು ₹3 ಲಕ್ಷದಿಂದ ₹5 ಲಕ್ಷ ಆಗುತ್ತದೆ. ಈ ರೀತಿ ದುಬಾರಿ ಆಗಿದ್ದು, ಅವುಗಳ ಮೇಲೆ ಸರ್ಕಾರಕ್ಕೆ ಕಡಿವಾಣ ಇಲ್ಲವೆ, ಕಣ್ಣು ಮುಚ್ಚಿ ಕುಳಿತಿದೆಯೇ. ಈ ಸ್ಥಿತಿ ತಂದವರು ನಾವೇ (ಕಾಂಗ್ರೆಸ್‌,ಬಿಜೆಪಿ ಜೆಡಿಎಸ್‌) ಅಲ್ಲವೇ? ರಾಜಕಾರಣಿಗಳು ತಮ್ಮ ಮಕ್ಕಳನ್ನು ಅರಮನೆ ಬಿಟ್ಟು ಬೇರೆ ಕಡೆ ಮದುವೆ ಮಾಡುವುದು ತಮ್ಮ ಗೌರವಕ್ಕೆ ಧಕ್ಕೆ ಎಂಬ ಭಾವನೆ ಬೆಳೆಸಿಕೊಂಡಿಲ್ಲವೆ’ ಎಂದು ರಮೇಶ್‌ಕುಮಾರ್‌ ಪ್ರಶ್ನಿಸಿದರು.

‘1980 ರಲ್ಲಿ ಗುಂಡೂರಾಯರ ಸರ್ಕಾರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿ ಚೀಟಿ ಬರೆಸಲು ಶುಲ್ಕವನ್ನು ನಾಲ್ಕಾಣೆಯಿಂದ ಒಂದು ರೂಪಾಯಿಗೆ ಏರಿಕೆ ಮಾಡಿತು. ಇದನ್ನು ವಿರೋಧಿಸಿ ವ್ಯಾಪಕ ಹೋರಾಟ ನಡೆಯಿತು. ಈಗ ನಮ್ಮ ಮಾತಿಗೆ ಮತ್ತು ಬದುಕಿನ ಸ್ಥಿತಿಗೆ ಸಂಬಂಧವೇ ಇಲ್ಲದ ಕಾರಣ ನಮ್ಮ ಮಾತುಗಳಿಗೆ ಹೆಚ್ಚು ಗೌರವ ಬರುತ್ತಿಲ್ಲ’ ಎಂದು ಅವರು ಹೇಳಿದರು.

‘ಚುನಾವಣಾ ಆಯೋಗಕ್ಕೆ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರ ತೆಗೆದು ನೋಡಿದರೆ ನಮ್ಮ ಆಸ್ತಿ ಪಾಸ್ತಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಇಲ್ಲಿರುವ ಯಾರಿಗೂ ಬೆಲೆ ಏರಿಕೆ ಬಾಧಿಸಿಲ್ಲ’ ಎಂದರು.

‘ಇದಕ್ಕೆ ನಾವು ಮಾತ್ರ ಕಾರಣ ಅಲ್ಲ, ನಾವು ವ್ಯವಸ್ಥೆಯ ಪ್ರತಿಬಿಂಬವಾಗಿದ್ದೇವೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ವರದಿ ಉಲ್ಲೇಖ

‘ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ಬಂದ ವರದಿ ಪ್ರಕಾರ ‘ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ಟಿಕೆಟ್‌ ದರ ವಿಮಾನ ಟಿಕೆಟ್‌ ದರವನ್ನೂ ಮೀರಿಸುವಂತಿತ್ತು. ಟಿಕೆಟ್‌ಗೆ ₹5,000 ದಿಂದ ₹6,000 ಎಂದರೆ ಹುಡುಗಾಟವೇ, ಹಾಗಿದ್ದರೆ ಇದನ್ನು ನಿಯಂತ್ರಿಸಲು ಸಾರಿಗೆ ಇಲಾಖೆಗೆ ಸಾಧ್ಯವಿಲ್ಲವೇ? ಸರ್ಕಾರ ಎಲ್ಲದರ ಮೇಲೆ ಹತೋಟಿ ಹೊಂದಿದೆ ಎಂಬುದು ಕೇವಲ ಭ್ರಮೆ. ನಾವು ಸತ್ತಿದ್ದೇವೆ ಬದುಕಿಲ್ಲ’ ಎಂದು ರಮೇಶ್‌ಕುಮಾರ್ ಕಿಡಿಕಾರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು