ಭಾನುವಾರ, ಮೇ 29, 2022
21 °C
ವಿಜಯಕ್ಕೆ ತಾಂತ್ರಿಕ ಅಂಶವೇ ಆಧಾರ – ಕಾನೂನು ತಜ್ಞರ ಅಭಿಮತ

ರಾಘವೇಶ್ವರ ಶ್ರೀಗಳ ವಿರುದ್ಧದ ಅರ್ಜಿಗಳ ವಜಾ

ಬಿ.ಎಸ್.ಷಣ್ಮುಖಪ್ಪ‍ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ’ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯನ್ನು ಅತ್ಯಾಚಾರ ಆರೋಪದಿಂದ ಕೈಬಿಟ್ಟ, ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂತ್ರಸ್ತೆ ರಾಮಕಥಾ ಗಾಯಕಿ ಮತ್ತು ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್‌ ತೀರ್ಪಿನಲ್ಲಿ ತಾಂತ್ರಿಕ ಅಂಶಗಳೇ ಮೇಲುಗೈ ಪಡೆದಿವೆಯೇ...? ಹೌದು ಎನ್ನುತ್ತಾರೆ ಕಾನೂನು ತಜ್ಞರು. 

ನಾಡಿನಾದ್ಯಂತ ತೀವ್ರ ಸಂಚಲನ ಉಂಟು ಮಾಡಿದ್ದ ಈ ಪ್ರಕರಣದಲ್ಲಿ ಇತ್ತೀಚೆಗೆ ಹೈಕೋರ್ಟ್‌ ನೀಡಿದ ತೀರ್ಪನ್ನು ವಿಶ್ಲೇಷಿಸಿರುವ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ’ಹೈಕೋರ್ಟ್‌ನ ಪೂರ್ವ ನಿದರ್ಶನಗಳು ಹಾಗೂ ಸುಪ್ರೀಂ ಕೋರ್ಟ್‌ ತೀರ್ಪುಗಳಲ್ಲಿ ತಾಂತ್ರಿಕ ಅಂಶಗಳಿಗೇ ದಕ್ಕಿದ್ದ ಜಯ ಈ ಪ್ರಕರಣಕ್ಕೂ ಆನೆಬಲ ತುಂಬಿತು. ಹೀಗಾಗಿ, ಪುನರ್ ಪರಿಶೀಲನಾ ಅರ್ಜಿಗಳು ವಜಾಗೊಂಡಿವೆ‘ ಎಂದು ವಿವರಿಸಿದ್ದಾರೆ.

ಘಟನಾವಳಿ: ’ನನ್ನ ತಾಯಿಯ ಮೇಲೆ ಸ್ವಾಮೀಜಿಯಿಂದ ಅತ್ಯಾಚಾರ ನಡೆದಿದೆ‘ ಎಂದು ಆರೋಪಿಸಿ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ ಶಾಸ್ತ್ರಿ ಪುತ್ರಿ ಅಂಶುಮತಿ ಅವರು ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ 2014ರ ಆಗಸ್ಟ್‌ 26ರಂದು ದೂರು ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆ–1860 (ಐಪಿಸಿ) ಕಲಂ 354 ಎ ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಂತರ ಅದನ್ನು ಬೆಂಗಳೂರಿನ ಗಿರಿನಗರ ಠಾಣೆಗೆ ವರ್ಗಾಯಿಸಿದ್ದರು.

ಗಿರಿನಗರ ಠಾಣೆಯ ಪೊಲೀಸರು ಐಪಿಸಿ ಕಲಂ 376(2)(ಎಫ್‌) ಅಡಿಯಲ್ಲಿ ತನಿಖೆ ನಡೆಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಸಿಐಡಿ, ಆರೋಪಿಯ ವಿರುದ್ಧ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ‌ಅಂತಿಮ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್‌ ಕೋರ್ಟ್, ’ಪ್ರಕರಣವು ಸೆಷನ್ಸ್‌ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ’ ಎಂದು ತೀರ್ಮಾನಿಸಿತ್ತು. ಇದರಿಂದ ಪ್ರಕರಣ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.

ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸೆಷನ್ಸ್‌ ನ್ಯಾಯಾಲಯ ದೋಷಾರೋಪ ಹೊರಿಸುವ ಮುನ್ನವೇ, ಆರೋಪಿ ಸ್ವಾಮೀಜಿಯು ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌‍ಪಿಸಿ) ಕಲಂ 227ರ ಅಡಿಯಲ್ಲಿ ಅರ್ಜಿ ಸಲ್ಲಿಸಿ, ’ದೋಷಾರೋಪಣೆಗೆ ಗುರಿಪಡಿಸುವ ಮುನ್ನವೇ ನನ್ನನ್ನು ಬಿಡುಗಡೆ ಮಾಡಬೇಕು. ಅದಕ್ಕಾಗಿ ನಾನು ಸಲ್ಲಿಸಿರುವ ಅರ್ಜಿಯ ಮೇಲಿನ ವಾದ ಮಂಡನೆಗೆ ಅವಕಾಶ ನೀಡಬೇಕು‘ ಎಂದು ಕೋರಿದ್ದರು. ಈ ಅರ್ಜಿಗೆ ಪ್ರಾಸಿಕ್ಯೂಷನ್‌ ತಕರಾರು ಸಲ್ಲಿಸಿತು.

ಈ ಹಂತದಲ್ಲಿ ಸ್ವಾಮೀಜಿ ಸೆಷನ್ಸ್‌ ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ಅರ್ಜಿಯನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್‌ ಮೆಟ್ಟಿಲೇರಿದರು. ಸಂತ್ರಸ್ತೆಯ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತು. ಹೈಕೋರ್ಟ್‌ ಆದೇಶವನ್ನು ಸಂತ್ರಸ್ತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಆದರೆ, ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿರಲಿಲ್ಲ. ಇದರಿಂದಾಗಿ ಅರ್ಜಿ ವಿಚಾರಣೆಗೆ ಬಾಕಿ ಇದ್ದಂತೆಯೇ 54ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್, ’ಪ್ರಕರಣದ ವಿಚಾರಣೆಗೆ ಯಾವುದೇ ತಡೆಯಾಜ್ಞೆ ಇಲ್ಲ’ ಎಂಬ ಕಾರಣಕ್ಕೆ ಆರೋಪಿ ಸಲ್ಲಿಸಿದ್ದ ಅರ್ಜಿಯ ಮೇಲಿನ ವಾದವನ್ನು ಆಲಿಸಿದರು. ಪ್ರಾಸಿಕ್ಯೂಷನ್ ತಕರಾರನ್ನು ಪರಿಗಣಿಸದೆ 2016ರ ಮಾರ್ಚ್ 31ರಂದು ಆದೇಶ ನೀಡಿ, ಸ್ವಾಮೀಜಿ ವಿರುದ್ಧ ಅಂತಿಮ ವರದಿಯಲ್ಲಿ ಹೊರಿಸಲಾಗಿದ್ದ ಆರೋಪದಿಂದ ಬಿಡುಗಡೆಗೊಳಿಸಿದ್ದರು.

ಸ್ವಾಮೀಜಿಯನ್ನು ಬಿಡುಗಡೆಗೊಳಿಸಿದ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್‌, ಹೈಕೋರ್ಟ್‌ನಲ್ಲಿ ಪ್ರತ್ಯೇಕ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದರು. ಈ ಅರ್ಜಿಗಳನ್ನು ಸಂಯೋಜಿಸಿ ವಿಚಾರಣೆ ನಡೆಸಿದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ವಿ.ಶ್ರೀಶಾನಂದ, 2021ರ ಡಿಸೆಂಬರ್ 29ರಂದು ತೀರ್ಪು ಪ್ರಕಟಿಸಿ, ಈ ಎರಡೂ ಕ್ರಿಮಿನಲ್‌ ಪುನರ್ ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿದ್ದಾರೆ.

ವಾದ: ಹೈಕೋರ್ಟ್‌ನಲ್ಲಿ ಸಂತ್ರಸ್ತೆಯ ಪರ ಹಿರಿಯ ವಕೀಲ ಎಂ.ಟಿ.ನಾಣಯ್ಯ, ’ಸೆಷನ್ಸ್‌ ನ್ಯಾಯಾಧೀಶರು ಆರೋಪಿಯನ್ನು ದೋಷಾರೋಪಣೆ ಹೊರಿಸುವ ಹಂತದ ಪೂರ್ವದಲ್ಲಿಯೇ ಕೈ ಬಿಟ್ಟಿದ್ದಾರೆ. ಸಾಕ್ಷಿಗಳ ಹೇಳಿಕೆ ಮತ್ತು ವೈಜ್ಞಾನಿಕ ವರದಿಗಳನ್ನು ಆಳವಾಗಿ ಪರಿಗಣಿಸಿಲ್ಲ. ಅಪರಾಧ ನಿರೂಪಿಸಲು ಪ್ರಾಸಿಕ್ಯೂಷನ್‌ಗೆ ಮುಕ್ತ ಅವಕಾಶ ನೀಡಿಲ್ಲ. ಸ್ವಾಮೀಜಿಯನ್ನು ನಿರ್ದೋಷಿ ಎಂದು ಸಾರಿರುವ ಸೆಷನ್ಸ್‌ ನ್ಯಾಯಾಧೀಶರ ಆದೇಶ ಕಾನೂನಿಗೆ ಸಂಪೂರ್ಣ ವಿರುದ್ಧವಾಗಿದೆ‘ ಎಂದು ವಾದ ಮಂಡಿಸಿದ್ದರು.

ಪ್ರಾಸಿಕ್ಯೂಷನ್‌ ಪರ ವಕೀಲರು, ’ಸಿಆರ್‌ಪಿಸಿ ಕಲಂ 227ರ, ಅಡಿಯಲ್ಲಿ ಸ್ವಾಮೀಜಿಯ ಅರ್ಜಿಯನ್ನು ಇತ್ಯರ್ಥಗೊಳಿಸುವಾಗ ನ್ಯಾಯಾಧೀಶರು, ಸಿಐಡಿ ನೀಡಿದ ಅಂತಿಮ ವರದಿಯಲ್ಲಿ ಮೆಲ್ನೋಟಕ್ಕೆ ಆರೋಪಿ ವಿರುದ್ಧ ಮಾಡಲಾದ ಆರೋಪಗಳು ನಿಜವೆಂದು ಸಾಬೀತುಪಡಿಸುವ ಅಂಶಗಳು ಲಭ್ಯ ಇವೆಯೇ ಎಂಬುದನ್ನು ಮಾತ್ರ ನೋಡಬೇಕಿತ್ತು. ಆದರೆ, ಈ ಕ್ರಮವನ್ನು ಕೈಬಿಟ್ಟು, ಅವರು ಪ್ರಕರಣದ ’ಕಿರು ವಿಚಾರಣೆ’ (ಮಿನಿ ಟ್ರಯಲ್‌) ನಡೆಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯನ್ನು ಕಡೆಗಣಿಸಿ ಪ್ರಾಸಿಕ್ಯೂಷನ್‌ಗೆ ಧಕ್ಕೆಯಾಗುವಂತಹ ತೀರ್ಮಾನ ಪ್ರಕಟಿಸಿದ್ದಾರೆ. ಅತ್ಯಾಚಾರದಂತಹ ಗುರುತರ ಆರೋಪ ಎದುರಿಸುತ್ತಿದ್ದ ಪ್ರತಿಷ್ಠಿತ ಮಠದ ಸ್ವಾಮೀಜಿಯನ್ನು ಪ್ರಕರಣದಿಂದ ಕೈಬಿಡಬಾರದಿತ್ತು‘ ಎಂದು ಪ್ರತಿಪಾದಿಸಿದ್ದರು.

ಪ್ರತಿವಾದ: ಇದಕ್ಕೆ ಪ್ರತಿಯಾಗಿ ಸ್ವಾಮೀಜಿ ಪರ ವಾದಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌, ’ಇದು ಸಂತ್ರಸ್ತೆಯ ಮಗಳು ಸಲ್ಲಿಸಿದ್ದ ದೂರು. ಈ ದೂರಿನ ಆಧಾರದಲ್ಲಿ ಪ್ರಕರಣ ಸೆಷನ್ಸ್‌ ನ್ಯಾಯಾಲಯದಲ್ಲಿತ್ತು. ಹೀಗಾಗಿ ಇದು ಮೂರನೇ ವ್ಯಕ್ತಿಯಿಂದ ಸಲ್ಲಿಸಲಾದ ದೂರು ಎಂದೇ ಪರಿಗಣಿತವಾಗತಕ್ಕದ್ದು. ಅಂತೆಯೇ, ಸಿಐಡಿಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ನೇರವಾಗಿ ಸಲ್ಲಿಸುವ ಅಧಿಕಾರವಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಧಿಕಾರವನ್ನೂ ಪ್ರಾಸಿಕ್ಯೂಷನ್‌ ಹೊಂದಿರುವುದಿಲ್ಲ. ಇವೆಲ್ಲಾ ಸಿಆರ್‌ಪಿಸಿ ಅಡಿಯಲ್ಲಿ ಕಾನೂನಿಗೆ ವಿರುದ್ಧವಾದ ಅಂಶಗಳು‘ ಎಂದು ಬಲವಾಗಿ ಪ್ರತಿವಾದ ಮಂಡಿಸಿದ್ದರು.

’ದೂರುದಾರ ಸಂತ್ರಸ್ತೆಗೆ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಕಾನೂನಿನ ಅಡಿಯಲ್ಲಿ ಅವಕಾಶವೇ ಇರುವುದಿಲ್ಲ. ಸಿಆರ್‌ಪಿಸಿ ಕಲಂ 301 ಹಾಗೂ 302ರ ಅನುಸಾರ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್‌ ಫಿರ್ಯಾದಿಗೆ ಸಹಕಾರ ನೀಡುತ್ತದೆ. ಅಂತೆಯೇ, ಮ್ಯಾಜಿಸ್ಟ್ರೇಟ್‌ ಮುಂದೆ ನಡೆಯುವ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಸಹಾಯ ಮಾಡಲು ವಕೀಲರನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಕಲ್ಪಿಸುತ್ತದೆ. ಇದರ ಹೊರತು ಸೆಷನ್ಸ್‌ ನ್ಯಾಯಾಧೀಶರು ಹೊರಡಿಸುವ ಆದೇಶಗಳನ್ನು ಪ್ರಶ್ನಿಸಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವ ಅಧಿಕಾರ ನೀಡುವುದಿಲ್ಲ‘ ಎಂದು ನಾಗೇಶ್‌ ವಿವರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.