ಶುಕ್ರವಾರ, ಅಕ್ಟೋಬರ್ 7, 2022
28 °C
ಕಾರ್ಯಕ್ರಮದ ಸಂಪೂರ್ಣ ವರದಿ

ಮೈಸೂರು: ಉತ್ಸಾಹದ ಯೋಗ ದಿನ– 45 ನಿಮಿಷ ವಿವಿಧ ಆಸನಗಳನ್ನು ಮಾಡಿದ ಪ್ರಧಾನಿ ಮೋದಿ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಮೈಸೂರು; ನಗರದ ಅರಮನೆ ಆವರಣವು ಮಂಗಳವಾರ ಮುಂಜಾನೆ ಐತಿಹಾಸಿಕ ಯೋಗಾಭ್ಯಾಸಕ್ಕೆ ಸಾಕ್ಷಿಯಾಯಿತು.
'ಮಾನವೀಯತೆಗಾಗಿ ಯೋಗ' ಘೋಷ ವಾಕ್ಯದಡಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ‌ ಅವರು, ಸ್ವತಃ ಯೋಗಾಭ್ಯಾಸ ಮಾಡಿ ಇಡೀ ವಿಶ್ವ ಮೈಸೂರಿನತ್ತ ನೋಡುವಂತೆ ಮಾಡಿದರು. 

ಅರಮನೆಗಳ ನಗರಿ ಯೋಗ ನಗರಿಯೂ ಹೌದು  ಎಂಬುದಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಯೋಗಪಟುಗಳು ಸಾಕ್ಷಿಯಾದರು.

ಬೆಳಗಿನ ಜಾವ 4 ಗಂಟೆಯಿಂದಲೇ ಯೋಗಾಭ್ಯಾಸಿಗಳು ನಗರದ ಎಲ್ಲ ಮೂಲೆಗಳಿಂದಲೂ ಅರಮನೆಯತ್ತ ನಡೆದು‌ ಬಂದರು. ಬಾಲಕ-ಬಾಲಕಿಯರು, ಯುವಜನ,‌ ಮಧ್ಯ ವಯಸ್ಕರು,‌ ವೃದ್ಧರು ಸೇರಿದಂತೆ ವಿವಿಧ ವಯೋಮಾನದವರ ಉತ್ಸಾಹ ಎದ್ದು ಕಂಡಿತು.
ಹಕ್ಕಿ‌ಚಿಲಿಪಿಲಿ, ತಂಗಾಳಿ, ಚಳಿಯ ವಾತಾವರಣದ ನಡುವೆ ಅರಮನೆ ಮುಂಭಾಗದ ವಿಶಾಲ ಆವರಣದಲ್ಲಿ ಯೋಗಾಭ್ಯಾಸಿಗಳು ಸೂರ್ಯಾಭಿಮುಖವಾಗಿ ಕುಳಿತು ಕಾಯುತ್ತಿರುವಾಗ,‌ ಬೆಳಿಗ್ಗೆ  6.34 ಕ್ಕೆ ಪ್ರಧಾನಿ ಮೋದಿ ವೇದಿಕೆಗೆ ಬಂದರು.

'ಕೆಲವು‌ ವರ್ಷಗಳ ಹಿಂದೆ ಯೋಗ ಮನೆಗಳಲ್ಲಿ, ಅಧ್ಯಾತ್ಮ ಕೇಂದ್ರಗಳಲ್ಲಷ್ಟೇ ಇತ್ತು. ಈಗ ವಿಶ್ವದ ಮನೆ ಮನೆಗೂ ತಲುಪಿದೆ. ಯೋಗ ಈಗ ಸಹಜ, ಸ್ವಾಭಾವಿಕ, ಮಾನವೀಯ ಚೈತನ್ಯದ ಸಂಕೇತವಾಗಿದೆ. ಕೊರೊನಾ ಆತಂಕದ ಎರಡು  ವರ್ಷಗಳ ಬಳಿಕ ಯೋಗದ ಪರ್ವ ಆರಂಭವಾಗಿದೆ ' ಎಂದು ಮೋದಿ ಹೇಳಿದರು.

'ಯೋಗ ಈಗ ವ್ಯಕ್ತಿಗಷ್ಟೇ ಅಲ್ಲ, ಸಮಾಜಕ್ಕೆ, ಇಡೀ ವಿಶ್ವದ ಮಾನವಕುಲಕ್ಕಾಗಿ ಎಂಬಂತೆ ಇದೆ. ಈ ಬಾರಿಯ ಘೋಷ ವಾಕ್ಯವೂ ಮಾನವೀಯತೆಗಾಗಿ ಯೋಗ ಎಂಬುದೇ ಆಗಿದೆ.  ವಿಶ್ವದ ಎಲ್ಲ ನಾಗರಿಕರಿಗೆ ಎಲ್ಲ ಭಾರತೀಯರ ಪರವಾಗಿ ಅಭಿನಂದನೆಗಳನ್ನು ಹೇಳುವೆ' ಎಂದರು.

' ಯೋಗವು ವ್ಯಕ್ತಿಗೆ, ಸಮಾಜಕ್ಕೆ, ವಿಶ್ವಕ್ಕೆ ಶಾಂತಿಯನ್ನು ತರುತ್ತದೆ. ಇದೊಂದು ಅಧ್ಯಾತ್ಮಿಕ ತತ್ವ. ಯಥ್ ಪಿಂಡೆ, ತಥ್ ಬ್ರಹ್ಮಾಂಡೆ ಎಂಬಂತೆ, ವಿಶ್ವ ನಮ್ಮಿಂದಲೇ ಆರಂಭವಾಗುತ್ತದೆ. ಎಲ್ಲದ್ದರ ಬಗ್ಗೆ ಜಾಗೃತಿ ಮೂಡಿಸುತ್ತದೆ. ಕೋಟ್ಯಂತರ ಜನರಲ್ಲಿ ಆಂತರಿಕ. ಶಾಂತಿ ಮೂಡಿಸುವ ಮೂಲಕ ಜಾಗತಿಕ ಶಾಂತಿಯನ್ನೂ ಮೂಡಿಸುತ್ತದೆ. ಯೋಗ ನಮ್ಮೆಲ್ಲರ ಸಮಸ್ಯೆ ನಿವಾರಕ' ಎಂದು‌ ಬಣ್ಣಿಸಿದರು.
'ಸ್ವಾತಂತ್ರ್ಯದ‌ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಚಾರಿತ್ರಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆದಿದೆ. ಇತಿಹಾಸದಲ್ಲಿ ವಿಶೇಷ ಸ್ಥಾನವುಳ್ಳ ಮೈಸೂರು ಅರಮನೆ ಆವರಣದಲ್ಲಿ ನಡೆದಿರುವ ಅಭ್ಯಾಸವು ದೇಶದ ವೈವಿಧ್ಯತೆಯನ್ನು ಯೋಗದ ಒಂದೇ ಸೂತ್ರದಲ್ಲಿ ಕೂಡಿಸುತ್ತದೆ' ಎಂದರು.

' ಇಡೀ‌ ವಿಶ್ವ ಇಂದು ಯೋಗ ವೃತ್ತದಲ್ಲಿ ಒಂದಾಗಿದೆ. ವಿವಿಧ ದೇಶಗಳಲ್ಲಿ‌ ಮೇಲೇಳುವ ಸೂರ್ಯನ ಜೊತೆಗೆ, ಸೂರ್ಯಕಿರಣಗಳ‌ ಜೊತೆ ಜನ ಯೋಗದ ಮೂಲಕ ಒಂದಾಗುತ್ತಿದ್ದಾರೆ. ಯೋಗ ಜೀವನ ಶೈಲಿಯಷ್ಟೇ ಅಲ್ಲ. ಇದು ಜೀವನದ ದಾರಿ. ನಮ್ಮ ಹೃದಯ ಯೋಗದಿಂದ ಶುರುವಾದರೆ ಅದಕ್ಕಿಂತ ಒಳ್ಳೆಯ ಆರಂಭ ಇನ್ನೊಂದು ಇರಲು ಸಾಧ್ಯವಿಲ್ಲ' ಎಂದರು.

'ಯೋಗವನ್ನು ಅರಿಯುವುದಷ್ಟೇ ಅಲ್ಲ, ಅದನ್ನು ಜೀವಿಸಬೇಕು. ಆತ್ಮೀಯವನ್ನಾಗಿಸಿಕೊಳ್ಳಬೇಕು. ಯೋಗದಿನ ಮಾತ್ರವಲ್ಲ. ಎಲ್ಲ ದಿನವೂ ಯೋಗದ ಮೂಲಕ ಸ್ವಾಸ್ಥ್ಯ, ಸುಖ ಮತ್ತು ಶಾಂತಿಯನ್ನು ಅನುಭವಿಸಬೇಕು' ಎಂದು‌ ಸಲಹೆ ನೀಡಿದರು.

'ಯೋಗ ಕ್ಷೇತ್ರದಲ್ಲಿ ಯುವಜನರು ಹೊಸ ಚಹರೆಗಳೊಂದಿಗೆ ಬರುತ್ತಿದ್ದಾರೆ. ಆಯುಷ್ ಸಚಿವಾಲಯವು ಅಂಥವರಿಗಾಗಿ ಸ್ಟಾರ್ಟ್ ಅಪ್ ಗಳನ್ನು ರೂಪಿಸಿದೆ' ಎಂದು ತಿಳಿಸಿದರು.

ನಂತರ ಅವರು ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಯೋಗಾಭ್ಯಾಸ ಮಾಡಿದರು. ನಿಂತು, ಕುಳಿತು ಮತ್ತು ಮಲಗಿ ಮಾಡುವ ಹಲವು ಆಸನಗಳನ್ನು ಹಾಗೂ ಪ್ರಾಣಾಯಾಮವನ್ನು ಅವರು ನಿರಾಯಾಸವಾಗಿ ಮಾಡಿದ್ದನ್ನು ಕಂಡು ನೆರೆದವರು ಹುಬ್ಬೇರಿಸಿದರು. 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸರ್ಬಾನಂದ್ ಸೋನಾವಲ್, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್,
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಂ.ವಿ.ರಾಜೀವ ಅವರೂ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

Koo App
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಇಂದು ಮುಖ್ಯಮಂತ್ರಿ @bsbommai ಅವರು ಮೈಸೂರಿನ ಅರಮನೆ ಮುಂಭಾಗದಲ್ಲಿ ನಡೆದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಭಾಗವಹಿಸಿದರು. ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಆಯುಷ್ ಸಚಿವ ಸರಬಾನಂದ ಸೋನೋವಾಲ್, ರಾಜಮಾತೆ ಪ್ರಮೋದಾದೇವಿ ಒಡೆಯರ್, ಯುವರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಸಚಿವರಾದ ಎಸ್ ಟಿ ಸೋಮಶೇಖರ್, ಡಾ. ಕೆ. ಸುಧಾಕರ ಭಾಗವಹಿಸಿದ್ದರು.

- CM of Karnataka (@CMOKarnataka) 21 June 2022

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು