ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ ಕಾಯಿನ್‌: ವಿದೇಶಿ ತನಿಖಾ ಸಂಸ್ಥೆಗಳಿಂದ ಕೋರಿಕೆ ಬಂದಿಲ್ಲ– ಕಮಲ್ ಪಂತ್

ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಸ್ಪಷ್ಟನೆ
Last Updated 13 ನವೆಂಬರ್ 2021, 16:53 IST
ಅಕ್ಷರ ಗಾತ್ರ

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣಭಾಗಿಯಾಗಿರುವ ಬಿಟ್‌ಕಾಯಿನ್‌ ಹ್ಯಾಕಿಂಗ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ವಿದೇಶಿ ತನಿಖಾ ಸಂಸ್ಥೆ ಅಥವಾ ಉದ್ಯಮ ಸಂಸ್ಥೆಗಳಿಂದ ಈವರೆಗೆ ಕೋರಿಕೆ ಬಂದಿಲ್ಲ ಎಂದು ನಗರ ಪೊಲೀಸ್ ಕಮಿಷನರ್‌ ಕಮಲ್‌ ಪಂತ್‌ ಹೇಳಿದ್ದಾರೆ.

‘ಬಿಟ್‌ಕಾಯಿನ್‌ ಹ್ಯಾಕಿಂಗ್‌ ಹಗರಣ’ದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಶನಿವಾರ ಸಂಜೆ ಸಭೆ ನಡೆಸಿದರು. ಆ
ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸ್ ಕಮಿಷನರ್‌, ‘ಶ್ರೀಕೃಷ್ಣ ಭಾಗಿಯಾಗಿರುವ ಪ್ರಕರಣ
ಗಳ ಕುರಿತು ಯಾವುದೇ ರಾಷ್ಟ್ರವೂ ಮಾಹಿತಿ ಕೋರಿಲ್ಲ. ಬೆಂಗಳೂರಿನಿಂದ ಹ್ಯಾಕಿಂಗ್‌ ನಡೆದಿದೆ ಎಂಬುದರ ಕುರಿತು ಮಾಹಿತಿಯನ್ನೂ ಹಂಚಿಕೊಂಡಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

14,682 ಬಿಟ್‌ಕಾಯಿನ್‌ಗಳನ್ನು ವರ್ಗಾವಣೆ ಮಾಡಿರುವ ಕುರಿತು ಬಿಟ್‌ಫಿನೆಕ್ಸ್‌ ಕಂಪನಿಗೆ ಮಾಹಿತಿ ಲಭಿಸಿ ವರ್ಷ ಕಳೆದರೂ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿಲ್ಲ. ಬಿಟ್‌ಕಾಯಿನ್‌ಗಳ ವರ್ಗಾವಣೆ ಬೆಂಗಳೂರಿನಿಂದ ನಡೆದಿದೆ ಎಂಬುದಕ್ಕೆ ಯಾವ ಆಧಾರಗಳೂ ಇಲ್ಲ ಎಂದು ಹೇಳಿದ್ದಾರೆ.

ಮಾದಕವಸ್ತು ಪ್ರಕರಣದಲ್ಲಿ 2020ರ ನವೆಂಬರ್‌ 4ರಂದು ಶ್ರೀಕಿಯನ್ನು ವಶಕ್ಕೆ ಪಡೆಯಲಾಗಿತ್ತು. ಆತನ ವಿಚಾರಣೆ ವೇಳೆ, ಹ್ಯಾಕಿಂಗ್‌ ಕುರಿತು ಮಾಹಿತಿ ಲಭ್ಯವಾಗಿತ್ತು. ಆತನ ಬಳಿ ಇದ್ದ ಬಿಟ್‌ಕಾಯಿನ್‌
ಗಳನ್ನು ವಶಕ್ಕೆ ಪಡೆಯಲು ಸರ್ಕಾರದ ಅನುಮತಿ ಪಡೆದು ಪ್ರತ್ಯೇಕ ವ್ಯಾಲೆಟ್‌ ತೆರೆಯಲಾಗಿತ್ತು. ಆರಂಭದಲ್ಲಿ 31.8 ಬಿಟ್‌ಕಾಯಿನ್‌ ಆರೋಪಿಯ ವ್ಯಾಲೆಟ್‌ನಲ್ಲಿದ್ದವು. ನಂತರ ತೆರೆದು ನೋಡಿದಾಗ 186.81 ಬಿಟ್‌ಕಾಯಿನ್‌ಗಳಿದ್ದವು. ಆದರೆ, ಖಾಸಗಿ ಕೀ ಲಭಿಸದ ಕಾರಣ ಅವುಗಳನ್ನು ಪೊಲೀಸ್ ವ್ಯಾಲೆಟ್‌ಗೆ ವರ್ಗಾಯಿಸಲು ಸಾಧ್ಯವಾಗಿರಲಿಲ್ಲ. ಇದನ್ನು ನ್ಯಾಯಾಲಯದ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.

ಬಿಟ್‌ಕಾಯಿನ್‌ ಮತ್ತು ಕ್ರಿಪ್ಟೋ ಕರೆನ್ಸಿ ಸರ್ವರ್‌ಗಳನ್ನು ಹ್ಯಾಕ್‌ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದ. ವಿಚಾರಣೆ ವೇಳೆ ಆತನ ಯಾವುದೇ ಹೇಳಿಕೆಗಳಿಗೂ ಆಧಾರಗಳು ಲಭಿಸಿರಲಿಲ್ಲ. ಆದರೂ, 2021ರ ಏಪ್ರಿಲ್‌ 28ರಂದು ಇಂಟರ್‌ಪೋಲ್‌ಗೆ ಮಾಹಿತಿ ನೀಡಲಾಗಿತ್ತು. ಜಾರಿನಿರ್ದೇಶನಾಲಯದೊಂದಿಗೂ ದಾಖಲೆಗಳನ್ನು ಹಂಚಿಕೊಳ್ಳಲಾಗಿತ್ತು ಎಂದಿದ್ದಾರೆ.

ಪೊಲೀಸರು ಅತ್ಯಂತ ವೃತ್ತಿಪರತೆಯಿಂದ ತನಿಖೆ ನಡೆಸಿದ್ದಾರೆ. ಯಾವ ಲೋಪಗಳೂ ಆಗಿಲ್ಲ. ಶ್ರೀಕೃಷ್ಣನಿಗೆ ಪೊಲೀಸ್‌ ವಶದಲ್ಲಿದ್ದಾಗ ಮಾದಕವಸ್ತು ನೀಡಲಾಗಿತ್ತು
ಎಂಬ ಆರೋಪದಲ್ಲಿ ಹುರುಳಿಲ್ಲ. ವೈದ್ಯಕೀಯ ತಪಾಸಣೆಯಲ್ಲೂ ಇದು ಸಾಬೀತಾಗಿದೆ. ಬಿಟ್‌ಕಾಯಿನ್‌ ಪ್ರಕರಣದ ತನಿಖೆ ವಿಚಾರದಲ್ಲಿ ಕೇಳಿಬರುತ್ತಿರುವ ಆರೋಪಗಳು ನಿರಾಧಾರ ಎಂದು ಕಮಿಷನರ್‌ ಕಮಲ್‌ ಪಂತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT