ಸೋಮವಾರ, ಮಾರ್ಚ್ 1, 2021
29 °C
ಅಬಕಾರಿಗೆ ಎಂಟಿಬಿ ನಕಾರ?

ಸಂಪುಟ ಸಭೆಗೆ ಗೈರಾದ ಮಂತ್ರಿಗಳು: ನಾಲ್ವರು ಸಚಿವರ ‘ಬಂಡಾಯ’?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಪುಟ ವಿಸ್ತರಣೆಯ ಕುದಿ ಆರುವ ಮುನ್ನವೇ, ಸಂಪುಟಕ್ಕೆ ಹೊಸದಾಗಿ ಸೇರಿದವರಿಗೆ ಖಾತೆ ಹಂಚಿಕೆ ಹಾಗೂ ಕೆಲವು ಸಚಿವರ ಖಾತೆ ಬದಲಾವಣೆಯ ವಿಷಯ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಮತ್ತೆ ತಲೆಬೇನೆ ತಂದಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನೂತನ ಸಚಿವರಿಗೆ ಗುರುವಾರ ಬೆಳಿಗ್ಗೆ ಖಾತೆ ಹಂಚಿಕೆ ಮಾಡಿದರು. ಕೆಲವರ ಬಳಿ ಇದ್ದ ಪ್ರಮುಖ ಖಾತೆಗಳನ್ನು ಕಿತ್ತು ಬೇರೆಯವರಿಗೆ ಕೊಟ್ಟರು. ಇದರಿಂದ ಸಿಟ್ಟಿಗೆದ್ದು ಸಚಿವರು ತಮ್ಮ ಅಸಹನೆಯನ್ನು ಹೊರಹಾಕಿದರು. ಅತೃಪ್ತಿ ಶಮನಗೊಳಿಸಿ, ಅವರನ್ನು ಓಲೈಸಲು ಮುಖ್ಯಮಂತ್ರಿ ಯತ್ನಿಸಿದರೂ ಸಂಜೆ ನಡೆದ ಸಂಪುಟ ಸಭೆಗೆ ಗೈರಾಗುವ ಮೂಲಕ ಸಚಿವರೇ ‘ಪರೋಕ್ಷ’ವಾಗಿ ಬಂಡಾಯ ಸಾರಿದ್ದಾರೆ.

ಸಚಿವರಾದ ಜೆ.ಸಿ.ಮಾಧುಸ್ವಾಮಿ, ಡಾ.ಕೆ.ಸುಧಾಕರ್‌, ಕೆ.ಗೋಪಾಲಯ್ಯ ಮತ್ತು ಎಂ.ಟಿ.ಬಿ ನಾಗರಾಜು ಅವರು ಸಂಪುಟ ಸಭೆಗೆ ಹಾಜರಾಗಲಿಲ್ಲ. ನಾರಾಯಣಗೌಡ ತಡವಾಗಿ ಬಂದರು.

‘ಅತೃಪ್ತರ ಜತೆ ಮುಖ್ಯಮಂತ್ರಿ ಮಾತನಾಡಿ, ಅವರನ್ನು ಸಮಾಧಾನಪಡಿಸಲಿದ್ದಾರೆ. ಇಂತಹ ಸ್ಥಿತಿಯನ್ನು ನಿಭಾಯಿಸುವ ಶಕ್ತಿ ನಾಯಕತ್ವ ಮತ್ತು ಪಕ್ಷಕ್ಕೆ ಇದೆ. ಕೆಲವರು ಮೊದಲೇ ತಿಳಿಸಿ ಸಭೆಗೆ ಬಂದಿರಲ್ಲಿಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಸಮಜಾಯಿಷಿಯನ್ನೇನೋ ನೀಡಿದರು.

ಕಂದಾಯ ಸಚಿವ ಆರ್‌.ಅಶೋಕ ಅವರು, ಸಂಪುಟ ಸಭೆಯ ಸಭಾಂಗಣದಿಂದ ಹೊರಬಂದು ಅತೃಪ್ತ ಸಚಿವರ ಜತೆ ದೂರವಾಣಿಯಲ್ಲಿ ಮಾತನಾಡಿ, ‘ಅಸಮಾಧಾನ ಬಿಟ್ಟು ಸಂಪುಟ ಸಭೆಗೆ ಹಾಜರಾಗಬೇಕು’ ಎಂದು ಪರಿಪರಿಯಾಗಿ ಮನವಿ ಮಾಡುತ್ತಿದುದು ಕಂಡು ಬಂದಿತು. ಆದರೆ, ಅತೃಪ್ತರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕಾಣಿಸಲಿಲ್ಲ.

ಕೆಲವು ಸಚಿವರ ಕಾರ್ಯ ನಿರ್ವಹಣೆಯ ಬಗ್ಗೆ ದೂರುಗಳು ಕೇಳಿ ಬಂದ ಕಾರಣ ಅವರ ಖಾತೆ ಬದಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ಹೇಳಿವೆ.

ಕಣ್ಣೀರಿಟ್ಟ ಸಚಿವರು: ಖಾತೆ ಕಿತ್ತುಕೊಂಡ ಕಾರಣಕ್ಕೆ ಮುನಿಸಿಕೊಂಡಿರುವ ಜೆ.ಸಿ ಮಾಧುಸ್ವಾಮಿ, ತುಮಕೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಗೈರಾದರೆ, ಇತ್ತ ಆಹಾರ ಖಾತೆ ಕಳೆದುಕೊಂಡ ಕೆ. ಗೋಪಾಲಯ್ಯ, ವೈದ್ಯಕೀಯ ಶಿಕ್ಷಣ ಖಾತೆ ಕಳೆದುಕೊಂಡ ಡಾ.ಕೆ. ಸುಧಾಕರ್‌ ಅವರ ನಿವಾಸದಲ್ಲಿ ಕಣ್ಣೀರಿಟ್ಟರು.

ಪೌರಾಡಳಿತ ಮತ್ತು ರೇಷ್ಮೆ ಖಾತೆ ಕಳೆದುಕೊಂಡ ಕೆ.ಸಿ. ನಾರಾಯಣ ಗೌಡ ಮತ್ತು ವಸತಿ ಬದಲು ಅಬಕಾರಿ ಖಾತೆ ಸಿಕ್ಕಿದ್ದಕ್ಕೆ ಅತೃಪ್ತಿಗೊಂಡಿರುವ ಎಂ.ಟಿ.ಬಿ ನಾಗರಾಜು ಕೂಡಾ ಸುಧಾಕರ್‌ ಮನೆಯಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಸಂಪುಟ ಸಭೆಗೂ ಮುನ್ನ ಗೋಪಾಲಯ್ಯ ಮತ್ತು ಎಂ.ಟಿ.ಬಿ ನಾಗರಾಜು ಅವರನ್ನು ಬಸವರಾಜ ಬೊಮ್ಮಾಯಿ ಮತ್ತು ಆರ್‌. ಅಶೋಕ ಅವರು ಮುಖ್ಯಮಂತ್ರಿ ನಿವಾಸಕ್ಕೆ ಕರೆದೊಯ್ದರು.

ಅಲ್ಲಿ ಮಾತನಾಡಿದ ಗೋಪಾಲಯ್ಯ, ‘ಆಹಾರ ಸಚಿವನಾಗಿ 11 ತಿಂಗಳು ಆತ್ಮಸಾಕ್ಷಿಗೆ ತೃಪ್ತಿ ನೀಡುವಂತೆ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟು ಕೊಟ್ಟ ಖಾತೆ ನಿಭಾಯಿಸುತ್ತೇನೆ’ ಎಂದರು.

‘ಅಬಕಾರಿ ಖಾತೆ ಕೊಟ್ಟಿದ್ದಕ್ಕೆ ಬೇಸರವಾಗಿದೆ ಎಂದು ಮುಖ್ಯಮಂತ್ರಿ ಬಳಿ ಹೇಳಿದ್ದೇನೆ. ಪಕ್ಷದ ವಿಚಾರವನ್ನು ಆಂತರಿಕವಾಗಿ ಬಗೆಹರಿಸೋಣವೆಂದಿದ್ದಾರೆ. ಅವರು ಹೇಳಿದಂತೆ ನಡೆಯುತ್ತೇನೆ’ ಎಂದು ನಾಗರಾಜ್ ಪ್ರತಿಕ್ರಿಯಿಸಿದರು.

ವಾರದ ಬಳಿಕ ಖಾತೆ ಹಂಚಿಕೆ: ಸಂಪುಟ ವಿಸ್ತರಣೆ ನಡೆದು ವಾರದ ಬಳಿಕ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಬೆಂಗಳೂರು ಅಭಿವೃದ್ಧಿ ಮತ್ತು ಇಂಧನ ಖಾತೆಯ ಮೇಲೆ ಹಲವರು ಕಣ್ಣಿಟ್ಟಿದ್ದರೂ, ಆ ಎರಡೂ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಮುಖ್ಯಮಂತ್ರಿ, ಖಾತೆಗಳ ಮರು ಹಂಚಿಕೆ ಮಾಡಿದ್ದಾರೆ.

ಈ ವೇಳೆ, ಕೆಲವು ಮಹತ್ವದ ಬದಲಾವಣೆ ಮಾಡಿದ್ದಾರೆ. ಮಾಧುಸ್ವಾಮಿ ಬಳಿ ಇದ್ದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಹೆಚ್ಚುವರಿಯಾಗಿ ನೀಡಿದರೆ, ಸಣ್ಣ ನೀರಾವರಿಯನ್ನು ಸಿ.ಪಿ ಯೋಗೇಶ್ವರ್‌ಗೆ ನೀಡಿದ್ದಾರೆ. ಡಾ. ಕೆ ಸುಧಾಕರ್‌ ಬಳಿ ಆರೋಗ್ಯ ಮಾತ್ರ ಉಳಿಸಿ,  ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿಗೆ ವಹಿಸಿದ್ದಾರೆ. ಕೆ. ಗೋಪಾಲಯ್ಯ ಅವರ ಬಳಿ ಇದ್ದ ಆಹಾರ ಖಾತೆಯನ್ನು ಉಮೇಶ್ ಕತ್ತಿಗೆ ನೀಡಿ, ಬದಲಾಗಿ ತೋಟಗಾರಿಕೆ ಹಾಗೂ ಸಕ್ಕರೆ ಖಾತೆ ನೀಡಿದ್ದಾರೆ. ಕೆ.ಸಿ. ನಾರಾಯಣಗೌಡರಿಗೆ ಯುವಜನಸೇವೆ ಹಾಗೂ ಕ್ರೀಡೆ, ಹಜ್ ಮತ್ತು ವಕ್ಫ್ ಖಾತೆ ನೀಡಿ ಅವರ ಬಳಿ ಇದ್ದ ಪೌರಾಡಳಿತ ಮತ್ತು ರೇಷ್ಮೆ ಖಾತೆಯನ್ನು ಆರ್‌. ಶಂಕರ್‌ ಅವರಿಗೆ ನೀಡಲಾಗಿದೆ.

ಮೂವರು ಉಪ ಮುಖ್ಯಮಂತ್ರಿಗಳು (ಗೋವಿಂದ ಕಾರಜೋಳ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ), ಹಿರಿಯ ಸಚಿವರಾದ ಜಗದೀಶ ಶೆಟ್ಟರ್‌, ಆರ್‌. ಅಶೋಕ, ಕೆ.ಎಸ್‌. ಈಶ್ವರಪ್ಪ, ಬಿ. ಶ್ರೀರಾಮುಲು, ಎಸ್‌. ಸುರೇಶ್‌ಕುಮಾರ್‌ ಮತ್ತು ವಿ. ಸೋಮಣ್ಣ ಅವರ ಖಾತೆಯಲ್ಲಿ ಬದಲಾವಣೆ ಮಾಡಿಲ್ಲ.

ಸುಧಾಕರ್‌ ಮನೆಯಲ್ಲಿ ಸಭೆ: ಖಾತೆ ಹಂಚಿಕೆಯಾಗುತ್ತಿದ್ದಂತೆ ಡಾ. ಸುಧಾಕರ್ ನಿವಾಸಕ್ಕೆ ಗೋಪಾಲಯ್ಯ ಮತ್ತು ಎಂಟಿಬಿ ನಾಗರಾಜು ತೆರಳಿದ್ದಾರೆ. ಅಲ್ಲಿ, ‘ಆಹಾರ ಖಾತೆ ಸಿಕ್ಕಿದ್ದಕ್ಕೆ ಖುಷಿ ಪಟ್ಟಿದ್ದೆ. ಆದರೆ, ಇದ್ದಕ್ಕಿದ್ದಂತೆ ನನ್ನ ಇಷ್ಟದ ಇಲಾಖೆಯನ್ನೇ ತೆಗೆದಿದ್ದಾರೆ’ ಎಂದು ಗೋಪಾಲಯ್ಯ ಅಸಮಾಧಾನ ತೋಡಿಕೊಂಡಿದ್ದಾರೆ. ‘ಹಿಂದೆ ವಸತಿ ಸಚಿವನಾಗಿದ್ದೆ. ಅಲ್ಲಿ ಮನೆ ಕೊಡುವುದು, ಕೆಲವು ಕಾಮಗಾರಿ ಮಾಡುವುದು ಇತ್ತು. ಅಬಕಾರಿ ಖಾತೆಯಲ್ಲಿ ನಾನು ಮಾಡುವಂಥದ್ದು ಏನೂ ಇಲ್ಲ. ಆ ಖಾತೆ ಬೇಡವೆಂದು ಮುಖ್ಯಮಂತ್ರಿಗೆ ಹೇಳಿದ್ದೇನೆ.’ ಎಂದು ಎಂಟಿಬಿ ನಾಗರಾಜು ಹೇಳಿದ್ದಾರೆ ಎಂದು ಗೊತ್ತಾಗಿದೆ.

ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಸುಲಭದ ಕೆಲಸವಲ್ಲ’

‘ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ, ಎಲ್ಲರನ್ನೂ ತೃಪ್ತಿಪಡಿಸುವಂಥದ್ದು ಸುಲಭದ ಕೆಲಸವಲ್ಲ’ ಎಂದು ಯಡಿಯೂರಪ್ಪ ಹೇಳಿದರು.

‘ಇದ್ದುದನ್ನು ನೋಡಿಕೊಂಡು, ಜವಾಬ್ದಾರಿ ಹಂಚಿದ್ದೇನೆ. ಕೆಲಸ ಮಾಡಲಿ. ಸ್ವಲ್ಪ ದಿನ ಆದಮೇಲೆ ಇಲಾಖೆ ಸರಿ ಬರದಿದ್ದರೆ ಇನ್ಯಾವುದಾದರೂ ಒಳ್ಳೆಯ ಇಲಾಖೆ ಕೊಡೋಣ’ ಎಂದು ಅವರು, ಅಸಮಾಧಾನಿತ ಸಚಿವರಿಗೆ ಸಲಹೆ ನೀಡಿದರು.

‘ಮಾಧುಸ್ವಾಮಿ, ಗೋಪಾಲಯ್ಯ ಸೇರಿದಂತೆ ಯಾರಿಗೂ  ಬೇಸರ ಇಲ್ಲ. ಖಾತೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆದಾಗ ಅಸಮಾಧಾನ ಆಗಿದೆ. ಕರೆದು ಮಾತನಾಡಿದ್ದೇನೆ’ ಎಂದರು.

ಅತೃಪ್ತ ಶಾಸಕರ ಸಭೆ

ಸಚಿವ ಸಂಪುಟ ಸೇರಲು ಅವಕಾಶ ಸಿಗದ ಬಿಜೆಪಿಯ ಅತೃಪ್ತ ಶಾಸಕರ ಸಿಟ್ಟು ಇನ್ನೂ ಮುಂದುವರಿದಿದ್ದು, ಗುರುವಾರವೂ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ರಾಜೂಗೌಡ, ಶಂಕರಪಾಟೀಲ ಮುನ್ನೇನಕೊಪ್ಪ, ಶಿವರಾಜ ಪಾಟೀಲ, ಪ್ರೊ. ಲಿಂಗಣ್ಣ, ಮಾಡಾಳು ವಿರೂಪಾಕ್ಷಪ್ಪ ಪಾಲ್ಗೊಂಡಿದ್ದರು. ಚುನಾವಣೆಯಲ್ಲಿ ಸೋತವರು ಹಾಗೂ ಹಗರಣದ ಆರೋಪ ಹೊತ್ತವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ. ಈ ಬಗ್ಗೆ ತಮ್ಮ ತಕರಾರು ಮುಂದುವರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.

ಸಭೆ ಬಗ್ಗೆ ಮಾಹಿತಿ ತಿಳಿದ ಮುಖ್ಯಮಂತ್ರಿ ಯಡಿಯೂರಪ್ಪ, ಶುಕ್ರವಾರ ಭೇಟಿಯಾಗಲು ಈ ಶಾಸಕರಿಗೆ ಸೂಚಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಹಸ್ತಕ್ಷೇಪ ಇಲ್ಲ: ವಿಜಯೇಂದ್ರ

ಕಲಬುರ್ಗಿ: ‘ನೂತನ ಸಚಿವರಿಗೆ ಖಾತೆ ಹಂಚಿಕೆ ಮತ್ತು ಹತ್ತು ಜನ ಸಚಿವರ ಖಾತೆ ಬದಲಾವಣೆಯಲ್ಲಿ ನನ್ನ ಹಸ್ತಕ್ಷೇಪ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

‘ಮುಖ್ಯಮಂತ್ರಿ ಅವರಿಗೆ ಸಾಕಷ್ಟು ಆಡಳಿತ ಅನುಭವ ಇದ್ದು, ಅವರು ಎಲ್ಲರೊಂದಿಗೆ ಚರ್ಚೆ ಮಾಡಿ ಸಚಿವರ ಅಸಮಾಧಾನ ಸರಿಪಡಿಸುತ್ತಾರೆ’ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪ ಅವರ ಮೂರ್ನಾಲ್ಕು ದಶಕಗಳ ರಾಜಕೀಯ ಹೋರಾಟ ಮತ್ತು ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಸರ್ಕಾರದಲ್ಲಿ ಯಾರ ಹಸ್ತಕ್ಷೇಪದ ಅಗತ್ಯವೂ ಬೀಳುವುದಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು