ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ‘ಕ್ರೀಡಾ ಪ್ರಶಸ್ತಿಗಳಿಗೆ ರಾಜಕಾರಣಿಗಳ ಹೆಸರಿಡುವುದು ತಪ್ಪಲ್ಲ’

Last Updated 27 ಆಗಸ್ಟ್ 2021, 4:26 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ರೀಡಾ ಪ್ರಶಸ್ತಿ, ಕ್ರೀಡಾಂಗಣ ಹಾಗೂ ಇತರ ಸಂಸ್ಥೆಗಳಿಗೆ ರಾಜಕೀಯ ಧುರೀಣರ ಹೆಸರು ಇಡುವುದರಲ್ಲಿ ತಪ್ಪೇನಿಲ್ಲ. ಈಗಾಗಲೇ ಇಟ್ಟಿರುವ ಹೆಸರುಗಳನ್ನು ಬದಲಿಸುವುದು ಸರಿಯಲ್ಲ. ಆ ಮೂಲಕ ಆ ನೇತಾರರನ್ನು ಅವಮಾನಿಸಬಾರದು. ಕ್ರೀಡೆ ಮತ್ತು ಸೇನೆಯಲ್ಲಿ ರಾಜಕೀಯ ಬೆರೆಸುವುದೂ ತಪ್ಪು...

‘ಕ್ರೀಡಾ ಪ್ರಶಸ್ತಿ, ಸ್ಟೇಡಿಯಂಗಳಿಗೆ ರಾಜಕಾರಣಿಗಳ ಹೆಸರು ಬೇಕೆ?’ ಎಂಬ ವಿಷಯದ ಕುರಿತು ಗುರುವಾರ ನಡೆದ ‘ಪ್ರಜಾವಾಣಿ ಸಂವಾದ’ದಲ್ಲಿ ಮೂಡಿಬಂದ ಅಭಿಪ್ರಾಯಗಳಿವು.

‘ಭಾರತದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡಾ ಸಂಸ್ಥೆಗಳು ರಾಜಕಾರಣಿಗಳ ಕಪಿಮುಷ್ಠಿಯಲ್ಲಿವೆ. ಕ್ರೀಡಾ ಜ್ಞಾನವೇ ಇಲ್ಲದ ಅವರು ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದು ಎಷ್ಟು ಸರಿ. ಕ್ರೀಡಾ ಸಂಸ್ಥೆಗಳನ್ನು ಮುನ್ನಡೆಸುವ ಹೊಣೆ ಕ್ರೀಡಾಪಟುಗಳಿಗೆ ಏಕೆ ನೀಡಬಾರದು’ ಎಂಬ ಮಾತುಗಳೂ ವ್ಯಕ್ತವಾದವು.

‘ಹೊಸ ಯೋಜನೆ, ಪ್ರಶಸ್ತಿಗಳಿಗೆ ಕ್ರೀಡಾ ದಿಗ್ಗಜರ ಹೆಸರಿಡಿ’

‘ರಾಜೀವ್‌ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಿದ್ದರು. ಹೀಗಾಗಿ ಅವರು ಹುತಾತ್ಮರಾದ ನಂತರ ಪಿ.ವಿ.ನರಸಿಂಹರಾವ್‌ ಅವರು ಖೇಲ್‌ ರತ್ನ ಪ್ರಶಸ್ತಿಗೆ ರಾಜೀವ್‌ ಹೆಸರಿಟ್ಟಿದ್ದರು. ಅಟಲ್‌ ಬಿಹಾರಿ ವಾಜಪೇಯಿ ಅವರು ಈ ದೇಶ ಕಂಡ ಉತ್ತಮ ಪ್ರಧಾನಿ. ಅವರ ಹೆಸರನ್ನೂ ಹಲವು ಸಂಸ್ಥೆಗಳಿಗೆ ಇಡಲಾಗಿದೆ. ಅದಕ್ಕೆ ನಮ್ಮ ವಿರೋಧವೇನಿಲ್ಲ. ಅವರ ಹೆಸರು ಬದಲಿಸುವ ಕೆಲಸಕ್ಕೂ ನಾವು ಕೈ ಹಾಕಲಿಲ್ಲ’.

‘ಕ್ರೀಡಾ ದಿಗ್ಗಜರಿಗೆ ಗೌರವ ನೀಡಬೇಕು. ಅದು ಎಲ್ಲರ ಅಪೇಕ್ಷೆ. ಮುಂದೆ ರೂಪಿಸಬಹುದಾದ ಯೋಜನೆಗಳಿಗೆ ಅವರ ಹೆಸರನ್ನು ಇಡಬಹುದಲ್ಲವೇ. ಇನ್ನು ಮುಂದೆ ಪ್ರಶಸ್ತಿ, ವಿಮಾನ ನಿಲ್ದಾಣ, ರಸ್ತೆಗಳಿಗೆ ನಾಮಕರಣ ಮಾಡುವಾಗ ಸೂಕ್ತ ಮಾನದಂಡಗಳನ್ನು ಅನುಸರಿಸಬೇಕು. ಅದಕ್ಕಾಗಿಯೇ ಹೊಸ ಮಾರ್ಗಸೂಚಿ ರೂಪಿಸುವುದು ಉತ್ತಮ’.

‘ಗುಜರಾತ್‌ನ ಸರ್ದಾರ್‌ ಪಟೇಲ್‌ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರಿಟ್ಟಿಲ್ಲವೇ. ಆ ಕ್ರೀಡಾಂಗಣಕ್ಕೆ ಮರು ನಾಮಕರಣ ಮಾಡಿದ್ದೇಕೆ. ಅವೆಲ್ಲವನ್ನೂ ಬದಿಗಿಟ್ಟು, ನಿರ್ದಿಷ್ಟವಾಗಿ ಒಂದು ಕುಟುಂಬದತ್ತ ಬೊಟ್ಟು ಮಾಡುವುದು ಎಷ್ಟು ಸರಿ’.

–ಸಲೀಂ ಅಹ್ಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ.

***

‘ಕ್ರೀಡೆಗೆ ಹೆಚ್ಚಿನ ಮನ್ನಣೆ ಸಿಗಲಿ’

‘ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡಿದ್ದು ಸರಿಯಲ್ಲ.ಕ್ರೀಡೆಗೆ ನಮ್ಮ ದೇಶದಲ್ಲಿ ದೊಡ್ಡ ಅನ್ಯಾಯವಾಗುತ್ತಿದೆ. ಚೀನಾದಲ್ಲಿ ಕ್ರೀಡಾ ಚಟುವಟಿಕೆಗಳಿಗಾಗಿಯೇ ₹3 ಲಕ್ಷ ಕೋಟಿ ಮೊತ್ತ ಮೀಸಲಿಡಲಾಗುತ್ತದೆ. ಹೋದ ವರ್ಷ ನಮ್ಮಲ್ಲಿ ₹350 ಕೋಟಿ ಮೊತ್ತ ನೀಡಲಾಗಿತ್ತು. 140 ಕೋಟಿ ಜನಸಂಖ್ಯೆ ಇರುವ ಭಾರತವು ಒಲಿಂಪಿಕ್ಸ್‌ನಂತಹ ಮಹಾಕೂಟಗಳಲ್ಲಿ ಎಷ್ಟು ಪದಕಗಳನ್ನು ಗೆಲ್ಲುತ್ತಿದೆ ಎಂಬುದರ ಆತ್ಮಾವಲೋಕನವೂ ಆಗಬೇಕು’.

‘2019–20ರಲ್ಲಿ ₹2,300 ಕೋಟಿ ಇದ್ದ ಕ್ರೀಡಾ ಬಜೆಟ್‌, ಒಲಿಂಪಿಕ್ಸ್‌ ವರ್ಷದಲ್ಲಿ ₹1,600 ಕೋಟಿಗೆ ಇಳಿಯಿತು. ಇದು ಸರಿಯಲ್ಲ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕ್ರೀಡೆಗೆ ಎಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಕ್ರೀಡೆ ಮತ್ತು ಶಿಕ್ಷಣ ಜೊತೆ ಜೊತೆಯಾಗಿ ಸಾಗಬೇಕು. ಪ್ರಸ್ತುತ ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಕ್ರೀಡಾ ಬೆಳವಣಿಗೆಯಿಂದ ದೇಶದ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು’.

–ಕೆ.ಸಿ.ರಘು, ನೀತಿ ವಿಶ್ಲೇಷಕ.

***

‘ಎಲ್ಲದಕ್ಕೂ ಒಂದೇ ಕುಟುಂಬಕ್ಕೆ ಸೇರಿದವರಹೆಸರಿಡುವುದು ಎಷ್ಟು ಸರಿ’

‘ಕ್ರೀಡಾಂಗಣ, ಪ್ರಶಸ್ತಿಗಳಿಗೆ ಮಾದರಿ ರಾಜಕಾರಣಿಗಳ ಹೆಸರಿಡುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಎಲ್ಲಾ ಪ್ರಶಸ್ತಿ, ಕ್ರೀಡಾಂಗಣ, ಯೋಜನೆಗಳಿಗೆ ಒಂದೇ ಕುಟುಂಬಕ್ಕೆ ಸೇರಿದವರ ಹೆಸರುಗಳನ್ನಷ್ಟೇ ಇಡುವುದು ಒಪ್ಪತಕ್ಕದ್ದಲ್ಲ. ಮಹಾತ್ಮ ಗಾಂಧೀಜಿ, ಸರ್ದಾರ್‌ ಪಟೇಲ್‌ ಅವರ ಹೆಸರುಗಳು ಮೂಲೆ ಗುಂಪಾಗುತ್ತಿವೆ. ಪಿ.ವಿ.ನರಸಿಂಹರಾವ್‌ ಅವರ ಹೆಸರನ್ನು ಜನ ಮರೆತೇ ಬಿಟ್ಟಿದ್ದಾರೆ’.

‘ಈಗಾಗಲೇ ಇಟ್ಟಿರುವ ಹೆಸರುಗಳನ್ನು ಬದಲಿಸುವುದು ಎಷ್ಟು ಸರಿ ಎಂಬುದರ ಬಗ್ಗೆ ಚರ್ಚೆಯಾಗಲಿ. ದೇಶದ ಹಿರಿಮೆ ಹೆಚ್ಚಿಸಿದ ಅನೇಕ ಕ್ರೀಡಾಪಟುಗಳಿದ್ದಾರೆ. ಸಮಾಜದ ಏಕತೆ ಹಾಗೂ ಅಭಿವೃದ್ಧಿಗಾಗಿ ಸಾವಿರಾರು ಮಂದಿ ದುಡಿದಿದ್ದಾರೆ. ಅವರಿಗೂ ಗೌರವ ಸಲ್ಲಬೇಕಲ್ಲವೆ?. 600ಕ್ಕೂ ಹೆಚ್ಚು ಸಂಘ ಸಂಸ್ಥೆಗಳು, ಪ್ರಶಸ್ತಿಗಳು, ಕ್ರೀಡಾಂಗಣಗಳಿಗೆ ಕುಟುಂಬವೊಂದನ್ನು ಪ್ರತಿನಿಧಿಸುವ ಮೂವರು ರಾಜಕಾರಣಿಗಳ ಹೆಸರನ್ನು ಇಡಲಾಗಿದೆ. ರಾಜೀವ್‌ ಗಾಂಧಿ ಅವರ ಹೆಸರಿನಲ್ಲಿರುವ ಪ್ರಶಸ್ತಿಯೊಂದರ ಹೆಸರು ಬದಲಿಸುವುದರಲ್ಲಿ ತಪ್ಪೇನಿಲ್ಲ’.

–ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಬಿಜೆಪಿ ರಾಜ್ಯ ವಕ್ತಾರ.

***

‘ಕ್ರೀಡೆ ಹೆಸರಿನಲ್ಲಿ ರಾಜಕಾರಣ ಸಲ್ಲ’

‘ಖೇಲ್‌ ರತ್ನ ಗೌರವಕ್ಕೆ ಧ್ಯಾನ್‌ಚಂದ್‌ ಹೆಸರಿಟ್ಟಿರುವುದು ಸ್ವಾಗತಾರ್ಹ. ವಿಶ್ವ ಮಟ್ಟದಲ್ಲಿ ಛಾಪು ಮೂಡಿಸಿರುವ ಕ್ರೀಡಾಪಟುಗಳ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಅರ್ಥಪೂರ್ಣ. ಕ್ರೀಡೆಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ನಿಲ್ಲಬೇಕು. ರಾಜೀವ್‌, ಇಂದಿರಾ, ವಾಜಪೇಯಿ ಇವರೆಲ್ಲಾ ದೊಡ್ಡ ನಾಯಕರು. ಎಲ್ಲರೂ ಅವರನ್ನು ಪೂಜಿಸುತ್ತಾರೆ. ನಾವು ಕೂಡ ಅವರನ್ನು ಗೌರವಿಸುತ್ತೇವೆ’

‘ಈಗ ಪ್ರತಿಯೊಂದಕ್ಕೂ ಲಾಬಿ ನಡೆಯುತ್ತಿದೆ. ಕ್ರೀಡಾಪಟುಗಳ ಸಾಧನೆ ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಆಗುತ್ತಲೇ ಇಲ್ಲ. ಕ್ರೀಡಾಪಟುಗಳ ಆಯ್ಕೆಯ ವಿಚಾರದಲ್ಲೂ ಪಾರದರ್ಶಕತೆ ಇಲ್ಲ. ಕ್ರೀಡೆಯಲ್ಲಿ ರಾಜಕಾರಣಿಗಳು ಇರಲಿ. ಆದರೆ ಕ್ರೀಡೆಯೇ ರಾಜಕಾರಣವಾಗಬಾರದು’.

–ಎಂ.ಕೆ.ಆಶಾ, ಅಂತರರಾಷ್ಟ್ರೀಯ ಅಥ್ಲೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT