ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ: ನ್ಯಾಯದಾನ ವಿಳಂಬ ಆಗದಿರಲಿ

Last Updated 29 ಆಗಸ್ಟ್ 2021, 0:31 IST
ಅಕ್ಷರ ಗಾತ್ರ

ಬೆಂಗಳೂರು: ‘ಅತ್ಯಾಚಾರವು ಪಿಡುಗಿನ ರೀತಿಯಲ್ಲಿ ವ್ಯಾಪಿಸುತ್ತಿದೆ. ವಿಕೃತ ಮನಸ್ಥಿತಿಯವರು ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ನ್ಯಾಯಿಕ ಪ್ರಕ್ರಿಯೆಯಲ್ಲಿರುವ ಲೋಪಗಳು ಹಾಗೂ ನ್ಯಾಯಾಲಯದ ಕೆಲ ತೀರ್ಪುಗಳಿಂದಾಗಿ ಇಂತಹ ಚಟುವಟಿಕೆಗಳು ಹೆಚ್ಚುತ್ತಿವೆ. ರಾಜಕಾರಣಿಗಳು ಪೊಲೀಸ್‌ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದೂ ಇದಕ್ಕೆ ಕಾರಣ...

‘ಅತ್ಯಾಚಾರ: ಏಕೆ ಹೆಚ್ಚುತ್ತಿದೆ? ತಡೆಯುವುದು ಹೇಗೆ? ವಿಷಯದ ಕುರಿತು ಶನಿವಾರ ನಡೆದ ‘ಪ್ರಜಾವಾಣಿ ಸಂವಾದ’ದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿವು. ‘ವರ್ಮಾ ಸಮಿತಿ ಹಾಗೂ ಉಗ್ರಪ್ಪ ಸಮಿತಿ ನೀಡಿರುವ ವರದಿಗಳನ್ನು ಅಂಗೀಕರಿಸುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು. ಅತ್ಯಾಚಾರಿಗಳಿಗೆ ಅತ್ಯಂತ ಕಠಿಣವಾದ ಶಿಕ್ಷೆಯಾಗಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಮಾನತೆಯ ಪಾಠ ಹೇಳಿಕೊಡಬೇಕು. ಅತ್ಯಾಚಾರ ಪ್ರಕರಣಗಳು ನಡೆದಾಗ ಪಕ್ಷಾತೀತವಾಗಿ ಧ್ವನಿ ಎತ್ತುವ ಕೆಲಸ ಆಗಬೇಕು’ ಎಂಬ ಸಲಹೆಗಳೂ ಮೂಡಿಬಂದವು.ಪೂರ್ಣ ಸಂವಾದವೀಕ್ಷಿಸಲು ಕ್ಲಿಕ್ ಮಾಡಿ.

‘ಸಂತ್ರಸ್ತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ’

‘ಸಂತ್ರಸ್ತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಅವರಿಗೆ ಕಟ್ಟುಪಾಡು ಹಾಗೂ ನಿರ್ಬಂಧಗಳನ್ನು ವಿಧಿಸುವ ಮನಸ್ಥಿತಿಯು ಪರೋಕ್ಷವಾಗಿ ಅತ್ಯಾಚಾರ ಪ್ರಕರಣಗಳಿಗೆ ದಾರಿ ಮಾಡಿಕೊಡುತ್ತಿದೆ. ಅಪರಾಧಿಗಳು ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಾದರೆ ಬೇಗನೆ ಶಿಕ್ಷೆಯಾಗುತ್ತದೆ. ಪ್ರಭಾವಿಗಳ ವಿಚಾರದಲ್ಲಿ ಮೃದು ಧೋರಣೆ ತಳೆಯಲಾಗುತ್ತದೆ. ಇದು ವ್ಯವಸ್ಥೆಯ ಮನಸ್ಥಿತಿಯ ಪ್ರತಿಬಿಂಬ’.

‘ನಿರ್ದಿಷ್ಟವಾಗಿ ಒಂದು ಇಲಾಖೆಯತ್ತ ಬೊಟ್ಟು ಮಾಡುವ ಬದಲು ಇಡಿ ವ್ಯವಸ್ಥೆಯನ್ನೇ ಬದಲಿಸಬೇಕು. ಅತ್ಯಾಚಾರದ ಆರೋಪ ಹೊತ್ತಿರುವ ವ್ಯಕ್ತಿಗೆ ಜನಪ್ರತಿನಿಧಿಗಳೇ ಶಾಲು ಹೊದಿಸಿ ಸನ್ಮಾನ ಮಾಡಿ ಬಂದಿರುವುದನ್ನು ನೋಡಿದ್ದೇವೆ. ಈ ಮೂಲಕ ಸಮಾಜಕ್ಕೆ ಅವರು ರವಾನಿಸುವ ಸಂದೇಶವೇನು. ಅತ್ಯಾಚಾರದ ಆರೋಪಿ ಯಾರೇ ಆಗಿದ್ದರು ಆತನನ್ನು ನ್ಯಾಯಾಲಯದ ಕಟಕಟೆಗೆ ಎಳೆದುತರಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು’.

–ಕೆ.ಎಸ್‌.ವಿಮಲಾ,ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ

*********

‘ರಾಜಕೀಯ ಹಸ್ತಕ್ಷೇಪ ನಿಲ್ಲಲಿ’

‘ ಅತ್ಯಾಚಾರದಂತಹ ಪ್ರಕರಣಗಳು ನಡೆದ ಬಳಿಕ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬಾಲಿಶ ಹಾಗೂ ಅಪ್ರಬುದ್ಧ ಹೇಳಿಕೆ ನೀಡುವುದು ನಿಲ್ಲಬೇಕು’.

‘ಅಪರಾಧಿಗಳನ್ನು ಪತ್ತೆ ಮಾಡುವುದು ಅಷ್ಟೇನು ಕಷ್ಟವಲ್ಲ. ಆದರೆ ಅಪರಾಧ ತಡೆಗಟ್ಟುವ ಕೆಲಸ ಆಗಬೇಕು. ಸಾರ್ವಜನಿಕರಿಗೆ ಪೊಲೀಸರ ಮೇಲೆ ನಂಬಿಕೆ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ಅಧಿಕಾರಿಗಳು ಈಗ ಸ್ಥಳೀಯ ರಾಜಕಾರಣಿಗಳ ಶಿಫಾರಸಿನ ಆಧಾರದಲ್ಲಿ ಹುದ್ದೆ ಪಡೆಯುತ್ತಿದ್ದಾರೆ. ಹೀಗಾಗಿ ಅವರ ಮರ್ಜಿಯಲ್ಲೇ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಪೊಲೀಸರು ಅಪರಾಧ ಲೋಕದ ಮೇಲಿನ ನಿಯಂತ್ರಣ
ಕಳೆದುಕೊಳ್ಳುತ್ತಾರೆ’.

‘ಅಸ್ಸಾಂನಲ್ಲಿ ನಡೆದ ಪ್ರಕರಣವೊಂದರಲ್ಲಿ ಅಲ್ಲಿನ ಹೈಕೋರ್ಟ್‌ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು. ಐಐಟಿ ಓದುತ್ತಿರುವ ಆ ಆರೋಪಿ ದೇಶದ ಆಸ್ತಿ ಎಂದು ನ್ಯಾಯಾಲಯವೇ ಹೇಳಿದ್ದು ದೊಡ್ಡ ದುರಂತ. ಸಾಕ್ಷಿದಾರರನ್ನು ಹತ್ಯೆ ಮಾಡಿರುವ, ಫಿರ್ಯಾದುದಾರರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆಗಳೂ ನಡೆದಿವೆ. ಇದು ತಪ್ಪಬೇಕಾದರೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು’.

–ಬಿ.ಕೆ.ಶಿವರಾಂ,ನಿವೃತ್ತ ಪೊಲೀಸ್‌ ಅಧಿಕಾರಿ.

*******

‘ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದು’

‘ಮೈಸೂರಿನಲ್ಲಿ ನಡೆದ ಪ್ರಕರಣವು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಹೆಣ್ಣಿನ ಬಗ್ಗೆ ಕಾಮುಕ ಯೋಚನೆ ಮೂಡಿದರೆ ಅದೊಂದು ಮಾನಸಿಕ ಅಪರಾಧ. ಹೆಣ್ಣನ್ನು ತಾಯಿ ಎಂದು ಆರಾಧಿಸುವ ದೇಶ ನಮ್ಮದು. ಇಂತಹ ಅಮಾನವೀಯ ಕೃತ್ಯಗಳನ್ನು ಈ ದೇಶ ಎಂದಿಗೂ ಒಪ್ಪಿಲ್ಲ’.

‘ಅತ್ಯಾಚಾರಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಅವರಿಗೆ ಉಗ್ರ ಶಿಕ್ಷೆಯಾಗಲಿ. ಕಾನೂನಿನಲ್ಲಿ ಏನಾದರು ಲೋಪಗಳಿದ್ದರೆ ಸರಿಪಡಿಸುವ ಕೆಲಸ ಆಗಬೇಕು. ಲಕ್ಷಾಂತರ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಅವುಗಳು ಶೀಘ್ರವಾಗಿ ಇತ್ಯರ್ಥವಾಗಬೇಕು’.

‘ಬಿಜೆಪಿ ಅಧಿಕಾರದಲ್ಲಿರುವಾಗಲೇ ಅಸಾರಾಂ ಬಾಪು ಸೇರಿದಂತೆ ಕೆಲ ಸ್ವಾಮೀಜಿಗಳನ್ನು ಜೈಲಿಗೆ ಹಾಕಲಾಗಿದೆ. ಅತ್ಯಾಚಾರಿಗೆ ಜಾತಿ, ಧರ್ಮ ಇಲ್ಲ. ಅತ್ಯಚಾರಿ ಅತ್ಯಾಚಾರಿಯೇ. ಉಗ್ರಪ್ಪ ಸಮಿತಿ ನೀಡಿರುವ ವರದಿಯನ್ನು ಸದನದಲ್ಲಿ ಮಂಡಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ’.

ಗೋ.ಮಧುಸೂದನ್‌,ಬಿಜೆಪಿ ಮುಖಂಡ

******

‘ಕಾನೂನು ಬಿಗಿಗೊಳಿಸಬೇಕು’

‘ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾದರೆ ಮೊದಲು ಕಾನೂನು ಬಿಗಿಗೊಳಿಸಬೇಕು. ಇದು ಆಡಳಿತಾರೂಢ ಸರ್ಕಾರಗಳ ಜವಾಬ್ದಾರಿ. ಅತಿ ಸುರಕ್ಷಿತ ನಗರಿ ಎಂಬ ಹಣೆಪಟ್ಟಿ ಹೊಂದಿರುವ ಮೈಸೂರಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ದುರಂತ. ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಎಂಬ ತಾರತಮ್ಯ ಇದೆ. ಸಂಪ್ರದಾಯದ ಕಟ್ಟುಪಾಡುಗಳ ಬೇಲಿಯೊಳಗೆಹೆಣ್ಣು ಮಕ್ಕಳನ್ನು ಬಂದಿಸುತ್ತಿದ್ದೇವೆ. ಇಂತಹ ಬೆಳವಣಿಗೆಗಳನ್ನು ಗಮನಿಸಿದರೆ ನಮ್ಮಲ್ಲಿ ತಾಲಿಬಾನ್‌ ಆಡಳಿತ ಇದೆಯೇ ಎಂಬ ಅನುಮಾನ ಮೂಡುತ್ತದೆ’.

‘ಮೈಸೂರಿನ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ಪೊಲೀಸರು 17 ಗಂಟೆ ತಡ ಮಾಡಿದ್ದಾರೆ. ಸರ್ಕಾರದ ನೀತಿ ಹಾಗೂ ನಿರ್ಲಕ್ಷ ಇಂತಹ ಪ್ರಕರಣಗಳು ಹೆಚ್ಚಲು ಕಾರಣ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಪತ್ರಕರ್ತರೊಬ್ಬರು 20 ದಿನಗಳ ಹಿಂದೆಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಆಗ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ’.

–ಪುಷ್ಪಾ ಅಮರನಾಥ್‌, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT