ಶುಕ್ರವಾರ, ಮೇ 27, 2022
22 °C
ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅಭಿಪ್ರಾಯ

ಪದೇ ಪದೇ ಚುನಾವಣೆಗಳಿಂದ ರಾಜಕಾರಣಿಗಳ ಮೇಲಿನ ವಿಶ್ವಾಸಕ್ಕೆ ಧಕ್ಕೆ: ಪ್ರಲ್ಹಾದ ಜೋಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪದೇ ಪದೇ ಚುನಾವಣೆ ನಡೆಸುತ್ತಿರುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ರಾಜಕಾರಣಿಗಳ ಮೇಲೆ ನಾಗರಿಕರು ಇಟ್ಟಿರುವ ನಂಬಿಕೆ ಕಡಿಮೆಯಾಗುತ್ತಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಅಭಿಪ್ರಾಯಪಟ್ಟರು.

ಭಾರತೀಯ ವಿಕಾಸ ಕೇಂದ್ರ–ಕರ್ನಾಟಕ ಹಮ್ಮಿಕೊಂಡಿದ್ದ ‘ಒಂದು ರಾಷ್ಟ್ರ–ಒಂದು ಚುನಾವಣೆ’ ಕುರಿತ ಸಂವಾದ ಹಾಗೂ ದುಂಡು ಮೇಜಿನ ಸಭೆಯ ಕೃತಿ ಲೋಕಾರ್ಪಣೆ ಮಾಡಿ ಅವರು ಶನಿವಾರ ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಬೇಕಾದರೆ, ಒಂದು ದೇಶ–ಒಂದು ಚುನಾವಣೆಯ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏನೇ ಹೇಳಿದರೂ ಅದಕ್ಕೆ ವಿರೋಧ ವ್ಯಕ್ತಪಡಿಸುವ ವರ್ಗವೊಂದಿದೆ. ವಿರೋಧ ಪಕ್ಷದವರು ಚರ್ಚೆಗೆ ಮುನ್ನವೇ ಮೋದಿ ನಿಲುವು ಹಾಗೂ ಯೋಜನೆಗಳನ್ನು ಟೀಕಿಸುವ ಪ್ರವೃತ್ತಿ  ಬೆಳೆಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಪ್ರಜಾಪ್ರಭುತ್ವವು ಈಗ ಪರಿಪಕ್ವಗೊಂಡಿದೆ. ಜನರ ಕೈಗೆ 10 ಮತಪತ್ರ ಕೊಟ್ಟರೂ ವಿವೇಚಿಸಿ ಮತ ಹಾಕುತ್ತಾರೆ. ಭಾರತವನ್ನು ಶತಮಾನದ ರಾಷ್ಟ್ರವನ್ನಾಗಿ ರೂಪಿಸಬೇಕು. ಅದಕ್ಕೆ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು. 

ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ, ‘ಪ್ರತಿ ವಿಚಾರದಲ್ಲೂ ನಾವು ಪ್ರತ್ಯೇಕತೆಯನ್ನು ಕಾಣುತ್ತಾ ಬಂದಿದ್ದೇವೆ. ಅದನ್ನೇ ಪೋಷಿಸಿ ತಮಗೆ ಬೇಕಾದ ಕೆಲಸ ಸಿದ್ಧಿಸಿಕೊಳ್ಳುವವರನ್ನೂ ನೋಡಿದ್ದೇವೆ. ಅನೇಕತೆಯನ್ನು ಏಕತೆಯ ಸ್ತೋತ್ರದಲ್ಲಿ ಪೋಣಿಸಬೇಕು. ಆಗ ಭಾರತಕ್ಕೆ ಜಗತ್ತಿನಲ್ಲಿ ಮನ್ನಣೆ ಸಿಗಲಿದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು’ ಎಂದರು.

ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ಬಳ್ಳಿ ಹಾಗೂ ಭಾರತೀಯ ವಿಕಾಸ ಕೇಂದ್ರ–ಕರ್ನಾಟಕದ ಪ್ರಧಾನ ಸಂಚಾಲಕ ಎಂ.ಆರ್‌.ವೆಂಕಟೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು