ಮಂಗಳವಾರ, ಸೆಪ್ಟೆಂಬರ್ 29, 2020
25 °C

ಖಾಸಗಿ ಬಸ್ ಪ್ರಯಾಣದರ ಶೇ 15ರಷ್ಟು ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್ ಸಂಚಾರ–ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಟೇಜ್ ಕ್ಯಾರೇಜ್ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ (ಬೆಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಮತ್ತು ಮಂಗಳೂರು) ಮೊದಲ ಎರಡು ಕಿಲೋ ಮೀಟರ್‌ಗೆ‌(ಸ್ಟೇಜ್–1) ₹8, ಎರಡನೇ ಹಂತಕ್ಕೆ ₹5.75 ಮತ್ತು ನಂತರದ ಹಂತಗಳಿಗೆ ₹3.50 ದರ ನಿಗದಿ ಮಾಡಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಒಂದೂವರೆ ಪಟ್ಟು ದರ ಅನ್ವಯವಾಗಲಿದೆ.

ನಗರ ವ್ಯಾಪ್ತಿಯಲ್ಲಿ ಸಂಚರಿಸುವ ರಾಜ್ಯ ಸಾರಿಗೆ ನಿಗಮಗಳ ಬಸ್‌ಗಳ ಪ್ರಯಾಣದರ ನಿಗದಿ ಮಾಡುವುದನ್ನು ನಿಗಮಗಳ ವಿವೇಚನೆಗೆ ಬಿಡಲಾಗಿದೆ.

ಇತರ ಮಾರ್ಗಗಳ ಸಾಮಾನ್ಯ ಸೇವೆ ಬಸ್‌ಗಳ ಕನಿಷ್ಠ ಪ್ರಯಾಣ ದರ ಮೊದಲ ಹಂತಕ್ಕೆ(6.5 ಕಿ.ಮೀ) ₹9.50, ನಂತರದ ಪ್ರತಿ ಕಿಲೋ ಮೀಟರ್‌ಗೆ ₹1 ದರ ನಿಗದಿ ಮಾಡಲಾಗಿದೆ. ಸೂಪರ್ ಡಿಲಕ್ಸ್ (ಕುಷನ್ ಆಸನ ಮತ್ತು ಹೆಡ್‌ರೆಸ್ಟ್‌ ಇರುವ) ಬಸ್‌ಗಳಿಗೆ ಮೊದಲ ಹಂತಕ್ಕೆ ಕನಿಷ್ಠ ಪ್ರಯಾಣ ದರ ₹13, ಹೈಟೆಕ್‌ ಬಸ್‌ಗಳ(ಸುಖಾಸೀನ) ಮೊದಲ ಹಂತದ ಪ್ರಯಾಣದ ದರ ₹14 ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ ₹1.60 ನಿಗದಿ ಮಾಡಲಾಗಿದೆ.

ವಾರಂತ್ಯ ಮತ್ತು ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆ ಇದ್ದರೆ ನಿಗದಿಪಡಿಸಿದ ದರಕ್ಕಿಂತ ಎರಡು ಪಟ್ಟು ದರ ವಿಧಿಸಲು ಅವಕಾಶ ನೀಡಲಾಗಿದೆ. ಖಾಸಗಿ ಬಸ್‌ ಆಪರೇಟರ್‌ಗಳು ಮತ್ತು ರಾಜ್ಯ ಸಾರಿಗೆ ನಿಗಮಗಳ ಅಂತರ ನಗರ ಹವಾನಿಯಂತ್ರಿತ ಬಸ್‌ಗಳ ಪ್ರಯಾಣದರವನ್ನು ಬೇಡಿಕೆ ಆಧರಿಸಿ ನಿಗದಿಪಡಿಸುವುದನ್ನು ಅವರ ವಿವೇಚನೆಗೆ ಬಿಡಲಾಗಿದೆ. ಪ್ರಯಾಣದರ ಅಲ್ಲದೇ ಟೋಲ್ ಶುಲ್ಕವನ್ನೂ ಪ್ರಯಾಣಿಕರಿಂದಲೇ ಪಡೆಯಲು ಅವಕಾಶ ನೀಡಲಾಗಿದೆ. 

‘ಎರಡು ತಿಂಗಳ ಹಿಂದೆ ಸರ್ಕಾರ ಘೋಷಣೆ ಮಾಡಿದ್ದಂತೆ ಅಧಿಸೂಚನೆಯನ್ನು ಈಗ ಹೊರಡಿಸಿದೆ. ಕೋವಿಡ್ ಸಂದರ್ಭದಲ್ಲಿ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದೊಯ್ಯಬೇಕಿರುವ ಕಾರಣ ದರ ಹೆಚ್ಚಳಕ್ಕೆ ಕೇಳಿದ್ದ ಅವಕಾಶವನ್ನು ನೀಡಿಲ್ಲ’ ಎಂದು ಕರ್ನಾಟಕ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು