ಭಾನುವಾರ, ಅಕ್ಟೋಬರ್ 24, 2021
29 °C

ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಮಸೂದೆ ಮಂಡಿಸಿದ ರಾಜ್ಯ ಸರ್ಕಾರ​

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಂಜನಗೂಡು ತಾಲ್ಲೂಕಿನ ದೇವಸ್ಥಾನವೊಂದನ್ನು ಕೆಡವಿದ ಘಟನೆಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಸರ್ಕಾರದ ನಿಯಮಕ್ಕೆ ಒಳಪಟ್ಟ ಎಲ್ಲ ಅನಧಿಕೃತ ‘ಧಾರ್ಮಿಕ ಕಟ್ಟಡ’ಗಳನ್ನು ಉಳಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಸೋಮವಾರ ಮಸೂದೆಯನ್ನು ಮಂಡಿಸಿದೆ.

ನಂಜನಗೂಡು ತಾಲ್ಲೂಕಿನ ಮಹದೇವಮ್ಮ ದೇವಸ್ಥಾನ ಕೆಡವಿದ ವಿಷಯ ಸಂಘ ಪರಿವಾರ, ಬಿಜೆಪಿ ಶಾಸಕರು ಮತ್ತು ಸಂಸದರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರೂ ದೇವಸ್ಥಾನ ಕೆಡವಿದ ಬಗ್ಗೆ ಆಕ್ಷೇಪ ವ್ಯಕ್ತ‍ಪಡಿಸಿದ್ದರು. ದಾವಣಗೆರೆಯಲ್ಲಿ ನಡೆದ ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲೂ ಈ ವಿಷಯದ ಮೇಲೆ ವಿಸ್ತೃತವಾಗಿ ಚರ್ಚೆ ನಡೆದಿತ್ತು.

ಈ ಪ್ರಕರಣವನ್ನು ಸೌಹಾರ್ದವಾಗಿ ಇತ್ಯರ್ಥಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಹಿರಿಯ ನಾಯಕರು ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ ಸಚಿವ ಸಂಪುಟ ಸಭೆ ನಡೆಸಿ, ‘ಧಾರ್ಮಿಕ ಕಟ್ಟಡ’ಗಳನ್ನು ರಕ್ಷಿಸಲು ಮಸೂದೆ ಮಂಡನೆಗೆ ತೀರ್ಮಾನಿಸಲಾಯಿತು. ಇದರ ಮೇಲೆ ಉಭಯ ಸದನಗಳಲ್ಲೂ ಚರ್ಚೆ ನಡೆಯಬೇಕಾಗಿದೆ.

ಸುಪ್ರೀಂಕೋರ್ಟ್‌ 2009ರಲ್ಲಿ ನೀಡಿರುವ ಆದೇಶದಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು, ಇಲ್ಲವೇ ಸ್ಥಳಾಂತರಿಸಬೇಕು ಎಂದು ತಿಳಿಸಿತ್ತು.

ಮಸೂದೆ ಮಂಡನೆ: ‘ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಮಸೂದೆ 2021’ ಅನ್ನು ವಿಧಾನಸಭೆ
ಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು.

ಇದರ ಸಾರಂಶ ಹೀಗಿದೆ– ರಾಜ್ಯದಲ್ಲಿರುವ ಎಲ್ಲ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲಾಗುವುದು. ಆದರೆ, ಭವಿಷ್ಯದಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವುದನ್ನು ಮಸೂದೆ ನಿರ್ಬಂಧಿಸಿದೆ.

ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದರೂ, ಸರ್ಕಾರದ ನಿಯಮಗಳಿಗೆ ಅನುಸಾರ ಧಾರ್ಮಿಕ ಕಟ್ಟಡಗಳಿದ್ದರೆ ಅವುಗಳನ್ನು ತೆರವುಗೊಳಿಸುವಂತಿಲ್ಲ. ಸರ್ಕಾರದ ನಿಯಮಗಳಿಗೆ ಒಳಪಡದ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬಹುದು.

‘ಧಾರ್ಮಿಕ ಕಟ್ಟಡ’ ಗಳು ವ್ಯಾಪ್ತಿಗೆ, ದೇವಸ್ಥಾನ, ಚರ್ಚ್‌, ಮಸೀದಿ, ಗುರುದ್ವಾರ, ಬೌದ್ಧ ವಿಹಾರ ಇತ್ಯಾದಿ ಸೇರಿವೆ. ಇದರ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರದ ಅನುಮತಿ ಪಡೆಯದೇ ನಿರ್ಮಿಸಲಾಗಿದ್ದರೆ, ಅವುಗಳನ್ನು ಉಳಿಸಿಕೊಳ್ಳಲಾಗುವುದು. ಒಂದು ವೇಳೆ ಸುಪ್ರೀಂಕೋರ್ಟ್‌ ನಿರ್ದೇಶನ ಮೇರೆಗೆ ಕ್ರಮ ಜರುಗಿಸಿದರೂ, ಅಂತಹ ಧಾರ್ಮಿಕ ಕಟ್ಟಡಗಳಿಗೆ ‘ಒಳ್ಳೆಯ ನಂಬಿಕೆಯಿಂದ ತೆಗೆದುಕೊಂಡ ಕ್ರಮ’ ಎಂಬ ಕಾರಣದಿಂದ ರಕ್ಷಣೆಯನ್ನು ನೀಡುವ ಅಂಶವನ್ನೂ ಮಸೂದೆ ಒಳಗೊಂಡಿದೆ. ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡ ಬಳಿಕ ಕಾನೂನು ಜಾರಿಗೆ ಬರಲಿದೆ.

ಪ್ರತಿಭಟನೆ: ಮಹದೇವಮ್ಮ ದೇವಸ್ಥಾನ ಕೆಡವಿದ್ದ ಬಗ್ಗೆ ಕೆಲವು ಹಿಂದೂಪರ ಸಂಘಟನೆಗಳು ಹೋರಾಟ ನಡೆಸಿದ್ದವು. ಮೈಸೂರು ಸಂಸದ ಪ್ರತಾಪ ಸಿಂಹ ಅವರೂ ಆಕ್ರೋಶ ವ್ಯಕ್ತಪಡಿಸಿ, ಮುಖ್ಯಮಂತ್ರಿಯವರ ಜತೆ ಮಾತುಕತೆ ನಡೆಸಿ, ದೇವಸ್ಥಾನದ ಪುನರ್‌ ನಿರ್ಮಾಣಕ್ಕೂ ಆಗ್ರಹಿಸಿದ್ದರು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಚಿಕ್ಕಮಗಳೂರಿಗೆ ಭೇಟಿ ನೀಡಿದಾಗ ಕೆಲವು ಸಂಘಟನೆಗಳಿಂದ ಪ್ರತಿಭಟನೆ ಬಿಸಿ ಎದುರಿಸಿದ್ದರು. ಹಿಂದೂ ಮಹಾಸಭಾ ಸಂಘಟನೆಯು ಮುಖ್ಯಮಂತ್ರಿಯಗೇ ಬೆದರಿಕೆ ಹಾಕಿತ್ತು.

ಇದರ ಬೆನ್ನಲ್ಲೇ ದೇವಸ್ಥಾನಗಳನ್ನು ತೆರವುಗೊಳಿಸುವ ಕಾರ್ಯವನ್ನು ತಕ್ಷಣವೇ ನಿಲ್ಲಿಸುವಂತೆ ಮುಖ್ಯಮಂತ್ರಿ
ಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ನಂಜನಗೂಡು ತಾಲ್ಲೂಕಿನ ದೇವಸ್ಥಾನ ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.

ನಂಜನಗೂಡಿನ ದೇಗುಲ ಮರುನಿರ್ಮಾಣಕ್ಕೆ ಅನುದಾನ?
ನಂಜನಗೂಡಿನ ಮಹದೇವಮ್ಮ ದೇವಸ್ಥಾನದ ಮರು ನಿರ್ಮಾಣಕ್ಕೆ ₹20 ಲಕ್ಷ ಅನುದಾನ ನೀಡುವಂತೆ ನಂಜನಗೂಡು ಶಾಸಕ ಹರ್ಷವರ್ಧನ್‌, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಕಡತವನ್ನು ಮಂಡಿಸಿ ಮುಂದಿನ ಕ್ರಮ ಕೈಗೊಳ್ಳಲು ಮನವಿ ಪತ್ರದ ಮೇಲೆ ಬೊಮ್ಮಾಯಿ ಟಿಪ್ಪಣಿ ಬರೆದಿದ್ದಾರೆ. ಗ್ರಾಮಸ್ಥರು ನೀಡಿರುವ ಜಾಗದಲ್ಲಿ ದೇವಸ್ಥಾನ ಮರು ನಿರ್ಮಾಣ ಮಾಡಲು ಈ ಅನುದಾನ ನೀಡುವಂತೆ ಹರ್ಷವರ್ಧನ್ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು