ಮಂಗಳವಾರ, ನವೆಂಬರ್ 29, 2022
28 °C

ಪಿಎಸ್‌ಐ ಹಗರಣ: ಎಡಿಜಿಪಿ ಅಮೃತ್ ಪೌಲ್ ನೇಮಕ ಮಾಡಿದ್ದೇ ಬೊಮ್ಮಾಯಿ‌ –ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪೌಲ್‌ ಅವರು ನೇಮಕವಾಗಿದ್ದೇ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ. ಪೌಲ್‌ ಬಗ್ಗೆ ದೂರುಗಳಿದ್ದರೂ, ಪ್ರಮುಖ ಹುದ್ದೆ ನೀಡಿದ್ದರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.

ಕಲಾಪ ಮುಂದೂಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದ ಅವರು, ‍ಪಿಎಸ್‌ಐ ಹಗರಣ ಬಯಲಿಗೆ ಎಳೆದದ್ದೇ ಕಾಂಗ್ರೆಸ್. ಸಿಐಡಿ ದಾಳಿ ನಂತರ ಪೌಲ್‌ ಅವರನ್ನು ವರ್ಗಾವಣೆ ಮಾಡಿದ್ದರು. ಒತ್ತಡ ಹೆಚ್ಚಾದ ಮೇಲೆ ಬಂಧಿಸಿದರು’ ಎಂದರು.

‘ಇಲ್ಲಿಯವರೆಗೂ ಎಜಿಡಿಪಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸಿಆರ್‌ಪಿಸಿ 164ರ ಹೇಳಿಕೆ ಕೊಡಿಸಿಲ್ಲ. ಅವರ ಮಂಪರು ಪರೀಕ್ಷೆ ಆಗಬೇಕು. ಆಗ ಇದರ ಹಿಂದೆ ಇರುವ  ರಾಜಕಾರಣಿಗಳ ಹೆಸರು ಬಯಲಿಗೆ ಬರುತ್ತದೆ’ ಎಂದರು.

‘ಬಿಜೆಪಿ ಶಾಸಕ ಬಸವರಾಜ ದಢೇಸೂಗುರ್‌ ಅವರು ಆಡಿಯೊದಲ್ಲಿನ ಧ್ವನಿ ನನ್ನದೆ, ನಾನು ₹ 15 ಲಕ್ಷ ತೆಗೆದುಕೊಂಡಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾನೆ. ಲಂಚ ಕೊಟ್ಟವರನ್ನೇ ಹೆದರಿಸಿದ್ದಾನೆ. ಅವನ ವಿಚಾರಣೆ ಮಾಡಿಲ್ಲ. ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಈ ಹಗರಣದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ಮಗನ ಕೈವಾಡವಿದೆ ಎಂದು ಹೇಳಿದ್ದಾರೆ. ಕೈವಾಡವಿರುವುದು ಯಡಿಯೂರಪ್ಪ ಅವರ ಮಗನಾ? ದೇವೇಗೌಡ, ಸಿದ್ದರಾಮಯ್ಯನ ಮಗನಾ’ ಎಂದು ಪ್ರಶ್ನಿಸಿದರು.

ಲಂಚದ ಹಣವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ದಢೇಸೂಗುರ್‌ ಹೇಳಿದ್ದಾರೆ. ಈಗ ಯಾವ ಸರ್ಕಾರ ಇದೆ? ಹಣಕೊಟ್ಟಿರುವುದು ಮುಖ್ಯಮಂತ್ರಿಗಾ? ಗೃಹ ಸಚಿವರಿಗಾ? ಹಗರಣದಲ್ಲಿ 92 ಜನರ ಬಂಧನವಾಗಿದೆ. ಆದರೆ, ಅವರಲ್ಲಿ ಒಬ್ಬ ರಾಜಕಾರಣಿಯೂ ಇಲ್ಲವೇ ಎಂದು ಕುಟುಕಿದರು.

ಓದಿ... ಭಾರತ್‌ ಜೋಡೊ ಯಾತ್ರೆ: ಕಾಂಗ್ರೆಸ್‌ ಶಾಸಕರ ಸಂಕಟ, ಮೊಗಸಾಲೆಯಲ್ಲಿ ಗೊಣಗಾಟ

‘ಸ್ಕ್ಯಾಮ್‌ ರಾಮಯ್ಯ’ ಸುಳ್ಳಿನ ಕಂತೆ’
ಬಿಜೆಪಿ ಹೊರತಂದಿರುವ ‘ಸಿದ್ದರಾಮಯ್ಯ, ಸ್ಕ್ಯಾಮ್‌ ರಾಮಯ್ಯ’ ಎಂಬ ಪುಸ್ತಕದಲ್ಲಿನ ಯಾವುದಾದರೂ ಒಂದು ಆರೋಪವನ್ನು ಈ ಸರ್ಕಾರ ಮೂರು ವರ್ಷಗಳಲ್ಲಿ ಸದನದ ಒಳಗೆ, ಹೊರಗೆ ಪ್ರಸ್ತಾಪ ಮಾಡಿದೆಯೇ? ಯಾವ ಆರೋಪದಲ್ಲೂ ಸತ್ಯವಿಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಪುಸ್ತಕದಲ್ಲಿ ತಪ್ಪು ತಪ್ಪಾಗಿ, ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ. ಅವರು ಉಲ್ಲೇಖಿಸಿರುವ ಬಹುತೇಕ ವಿಷಯಗಳಲ್ಲಿ ಸಿಬಿಐ ‘ಬಿ ರಿಪೋರ್ಟ್‌’ ಹಾಕಿದೆ. ಆದರೂ, ಅವರಿಗೆ ಮಾನಮರ್ಯಾದೆ ಇಲ್ಲ. ಪುಸ್ತಕ ಮುದ್ರಣ ಆಗಿರುವುದು ಆರೆಸ್ಸೆಸ್‌ನ ಕಚೇರಿ ಕೇಶವ ಕೃಪಾದಲ್ಲಿ ಎಂದರು.

ರೀ–ಡೂ ಮಾಡಿ ಎಂದು ಹೇಳಿದ್ದು ನ್ಯಾಯಾಲಯ. ನ್ಯಾಯಮೂರ್ತಿ ಕೆಂಪಣ್ಣ ಅವರ ಅವರ ವರದಿಯಲ್ಲಿ ಸಿದ್ದರಾಮಯ್ಯ ಅವರು ಯಾವುದೇ ಡಿನೋಟಿಫಿಕೇಷನ್‌ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಐಎಎಸ್‌ ಅಧಿಕಾರಿ ಡಿ.ಕೆ.ರವಿ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ, ಅಕ್ರಮ ಲಾಟರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಿಬಿಐ ರಿಪೋರ್ಟ್‌ ನೀಡಿದೆ. ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿದ್ದರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು