ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೆ? -ರಾಮಲಿಂಗಾ ರೆಡ್ಡಿ

Last Updated 29 ಏಪ್ರಿಲ್ 2022, 16:14 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಬಿಜೆಪಿಯ ಪ್ರಭಾವಿ ರಾಜಕಾರಣಿಗಳು, ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳೇ ಭಾಗಿಯಾಗಿದ್ದಾರೆ. ಇಂತಹ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲು ಸಿಐಡಿಗೆ ಸಾಧ್ಯವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

‘ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಬಿಜೆಪಿಯ ಹಲವು ಪ್ರಭಾವಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ತನಿಖೆ ಆರಂಭವಾಗಿ ಹಲವು ದಿನಗಳಾದರೂ ಮಧ್ಯಂತರ ವರದಿ ಸಲ್ಲಿಸಲು ಸಿಐಡಿಗೆ ಸಾಧ್ಯವಾಗಿಲ್ಲ. ಕಲಬುರಗಿ ಮಾತ್ರವಲ್ಲ, ಬೆಂಗಳೂರು ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿರುವ ಆರೋಪಗಳಿವೆ. ನೇರವಾಗಿ ಸರ್ಕಾರದ ನಿಯಂತ್ರಣದಲ್ಲೇ ಇರುವ ಸಿಐಡಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಾರೆಯೆ’ ಎಂದು ಕೇಳಿದ್ದಾರೆ.

ಪಿಎಸ್‌ಐ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಿನಕ್ಕೊಂದು ರೀತಿಯ ಅಕ್ರಮಗಳು ಬಯಲಾಗುತ್ತಲೇ ಇದ್ದವು. ಆಯ್ಕೆಪಟ್ಟಿ ರದ್ದಾಗಲೇಬೇಕಿತ್ತು. ಪರೀಕ್ಷೆ ರದ್ದುಪಡಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕಟಿಸಿದ್ದಾರೆ. ಆದರೆ, ಹಗರಣದಲ್ಲಿ ಭಾಗಿಯಾಗಿರುವ ದೊಡ್ಡ ಕುಳಗಳ ಬಗ್ಗೆ ಮೌನ ವಹಿಸಿದ್ದಾರೆ ಎಂದು ಟೀಕಿಸಿದ್ದಾರೆ.

ನೇಮಕಾತಿಯ ನೇತೃತ್ವ ವಹಿಸಿದ್ದ ಐಪಿಎಸ್‌ ಅಧಿಕಾರಿ ಅಮೃತ್‌ ಪಾಲ್‌ ಅವರನ್ನು ಏಕೆ ವರ್ಗಾವಣೆ ಮಾಡಲಾಗಿದೆ? ಇದೊಂದು ಸಾಮಾನ್ಯ ವರ್ಗಾವಣೆ ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಕ್ರಮದ ಹೊಣೆ ಹೊರಬೇಕಾಗಿದ್ದ ಅಧಿಕಾರಿಯನ್ನು ಸಮರ್ಥಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಪೊಲೀಸರೇ ಆರೋಪಿಗಳಾಗಿರುವ ಪ್ರಕರಣದಲ್ಲಿ ಸಿಐಡಿ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುವ ವಿಶ್ವಾಸವಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿರುವಂತೆ ಕಾಣುತ್ತಿದೆ. ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರ ಮೇಲುಸ್ತುವಾರಿಯಲ್ಲಿ ಸಿಐಡಿ ತನಿಖೆ ನಡೆಸುವಂತೆ ಆದೇಶ ಹೊರಡಿಸಬೇಕು ಎಂದು ರಾಮಲಿಂಗಾ ರೆಡ್ಡಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT