ಮಂಗಳವಾರ, ಸೆಪ್ಟೆಂಬರ್ 27, 2022
27 °C
ಆರೋಪಿ ಅಭ್ಯರ್ಥಿಗಳ ಮೊಬೈಲ್‌ ಕರೆಗಳ ಮೇಲೆ ನಿಗಾ ಇರಿಸಿದ್ದ ತನಿಖಾಧಿಕಾರಿಗಳು

ಬಂಧನಕ್ಕೂ ಮುನ್ನ ಪಿಎಸ್‌ಐ ಅಣಕು ಪರೀಕ್ಷೆ!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಅಕ್ಟೋಬರ್ 3ರಂದು ನಡೆದ ಪಿಎಸ್‌ಐ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಐಡಿ ಅಧಿಕಾರಿಗಳು ಎಂಟೂ ಆರೋಪಿಗಳನ್ನು ಬಂಧಿಸುವ ಮುನ್ನ ಪಿಎಸ್‌ಐ ಅಣಕು ಪರೀಕ್ಷೆ ನಡೆಸಿದ್ದಾರೆ. ಅದರಲ್ಲಿ ಬಹುತೇಕರು ನಿಗದಿತ ಅಂಕ ಪಡೆಯಲು ವಿಫಲರಾಗಿದ್ದಾರೆ!

ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಖಚಿತವಾದ ಕೂಡಲೇ ಸಿಐಡಿ ಅಧಿಕಾರಿಗಳು ಅಭ್ಯರ್ಥಿಗಳಾದ ಜೇವರ್ಗಿಯ ಭಗವಂತರಾಯ ಜೋಗೂರ, ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ, ಪೀರಪ್ಪ ಸಿದ್ನಾಳ, ಶ್ರೀಶೈಲ ಹಚ್ಚಡ, ಅಫಜಲಪುರ ತಾಲ್ಲೂಕಿನ ಗೌರ (ಬಿ) ಗ್ರಾಮದ ಸಿದ್ದುಗೌಡ ಶರಣಪ್ಪ ಪಾಟೀಲ, ಸೋಮನಾಥ, ವಿಜಯಕುಮಾರ್ ಗುಡೂರಗೆ ಬಂಧಿಸಿದ್ದಾರೆ.

‘ಎರಡು ತಿಂಗಳಿನಿಂದ ಎಂಟೂ ಅಭ್ಯರ್ಥಿಗಳ ಮೇಲೆ ಕಣ್ಣಿಟ್ಟು, ಅವರ ಮೊಬೈಲ್‌ ಕರೆ ಪರಿಶೀಲಿಸಲಾಗುತಿತ್ತು. ಎಲ್ಲರೂ ಪ್ರಕರಣದ ಪ್ರಮುಖ ಕಿಂಗ್‌ಪಿನ್‌ ಆದ ಆರ್‌.ಡಿ. ಪಾಟೀಲ ಮತ್ತು ಆತನ ಸಹಚರರ ಜೊತೆ ಸಂಪರ್ಕದಲ್ಲಿ ಇದ್ದದ್ದು ಗೊತ್ತಾಯಿತು. ಎಲ್ಲರನ್ನೂ ಕಲಬುರಗಿಯ ಐವಾನ್–ಇ–ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಗೆ ಕರೆಸಿ, ಪರೀಕ್ಷೆಯಲ್ಲಿ ಬರೆದ ಪ್ರಬಂಧವನ್ನು ಮತ್ತೆ ಬರೆಯಲು ಮತ್ತು ಇಂಗ್ಲಿಷ್ ಅನುವಾದ ಮಾಡಲು ಸೂಚಿಸಲಾಯಿತು. ಇದರಿಂದ ಬೆಚ್ಚಿಬಿದ್ದ ಅಭ್ಯರ್ಥಿಗಳು ತೋಚಿದ್ದನ್ನು ಬರೆದರು’ ಎಂದು ಮೂಲಗಳು ತಿಳಿಸಿವೆ.

‘ಆರೋಪಿಗಳಾದ ಭಗವಂತರಾಯ ಮತ್ತು ರವಿರಾಜ ಬೆಂಗಳೂರಿನಲ್ಲಿ ಕೆಲಸ ಮಾಡಿದರೆ, ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ ರಾಯಚೂರು ಜಿಲ್ಲೆ ದೇವದುರ್ಗ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದಾನೆ. ಆರ್.ಡಿ. ಪಾಟೀಲ ಅಳಿಯನೂ ಆಗಿರುವ ಸಿದ್ದುಗೌಡ ಪಾಟೀಲ ಯಾದಗಿರಿ ಜಿಲ್ಲೆ ಮುದ್ನಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕ ಆಗಿದ್ದಾನೆ. ಉಳಿದವರು ಕಲಬುರಗಿ ಮತ್ತು ವಿಜಯಪುರದಲ್ಲಿ ಇದ್ದರು. ದೂರವಾಣಿ ಕರೆ ಮತ್ತು ಇನ್ನಷ್ಟು ಮಾಹಿತಿ
ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್‌ಸ್ಟೆಬಲ್ ಹುದ್ದೆ ಬಿಟ್ಟು ಎಫ್‌ಡಿಎ: ಆರ್.ಡಿ. ಪಾಟೀಲ ಪತ್ನಿಯ ತಮ್ಮನಾದ ಆರೋಪಿ ಸಿದ್ದುಗೌಡ ಪಾಟೀಲ ಯಾದಗಿರಿಯಲ್ಲಿ ಡಿಎಆರ್‌ ಕಾನ್‌ಸ್ಟೆಬಲ್‌ ಆಗಿದ್ದ. ಆರೋಗ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆ ಸಿಕ್ಕ ಬಳಿಕ ಕಾನ್‌ಸ್ಟೆಬಲ್ ಹುದ್ದೆಗೆ ರಾಜೀನಾಮೆ ನೀಡಿದ್ದ. ವಿವಿಧ ಪರೀಕ್ಷೆಗಳಲ್ಲಿ ಪಾಸ್ ಮಾಡಿಸಿಕೊಡಲು ಅಭ್ಯರ್ಥಿಗಳನ್ನು ಮಾವನ ಬಳಿ ಕರೆ ತರುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ತನಿಖೆ ನಡೆಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು