ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ₹100 ದೇಣಿಗೆ: ಆಕ್ರೋಶ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಹೊರಡಿಸಿದ್ದ ಸುತ್ತೋಲೆ
Last Updated 21 ಅಕ್ಟೋಬರ್ 2022, 20:41 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹ 100 ಸಂಗ್ರಹಿಸಲು ಎಸ್‌ಡಿಎಂಸಿಗಳಿಗೆ ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಹೊರಡಿಸಿದ್ದ ಸುತ್ತೋಲೆಗೆ ರಾಜ್ಯದಾದ್ಯಂತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಅ.21ರ ಸಂಚಿಕೆಯ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಶಿಕ್ಷಣ ಸಚಿವರು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ‘ಚೈಲ್ಡ್‌ ರೈಟ್ಸ್ ಟ್ರಸ್ಟ್’ ಸಂಸ್ಥೆಯ ನಿರ್ದೇಶಕ ನಾಗಸಿಂಹ ಜಿ. ರಾವ್, ಪೋಷಕರ ಮೇಲೆ ಸ್ವಇಚ್ಛೆಯ ದೇಣಿಗೆಯ ಹೊರೆ ಸರ್ಕಾರ ‘ನಮ್ಮ ಶಾಲೆ ನಮ್ಮ ಕೊಡುಗೆ’ ಯೋಜನೆ ಅಡಿ ಶಾಲೆಗಳ ಅಭಿವೃದ್ಧಿಗೆ ದೇಣಿಗೆ ಸಂಗ್ರಹಿಸುವುದು ಒಳ್ಳೆಯ ನಿರ್ಧಾರ. ಆದರೆ, ದೇಣಿಗೆ ನೀಡುವ, ನೀಡದಿರುವ ಪೋಷಕರ ಮಕ್ಕಳ ಮಧ್ಯೆ ಅಂತರ ಹೆಚ್ಚಾಗುತ್ತದೆ. ದೇಣಿಗೆ ಮುಂದೆ ಶುಲ್ಕವಾಗಿ ಪರಿವರ್ತನೆ ಯಾಗುತ್ತದೆ. ಹಾಗಾಗಿ, ತಕ್ಷಣ ಸುತ್ತೋಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹಣ ಒದಗಿಸುವ ತನ್ನ ಮೂಲಭೂತ ಜವಾಬ್ದಾರಿಯಿಂದ ನುಣುಚಿಕೊಂಡು, ಹೊರೆಯನ್ನು ಪೋಷಕರ ಹೆಗಲ ಮೇಲೆ ಹೊರಿಸಿದೆ. ಸರ್ಕಾರದ ಈ ನಿರ್ಧಾರ ಅತ್ಯಂತ ಆಘಾತಕಾರಿ ಎಂದು ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ ಕಾಮತ್ಹೇಳಿದ್ದಾರೆ.

‘ರಾಜ್ಯದ ಜನರಿಗೆ ಅನುಕೂಲಕರವಲ್ಲದ ಯೋಜನೆಗಳಿಗೆ ಸಾವಿರಾರು ಕೋಟಿ ಹಣ ಪೋಲು ಮಾಡುವ ಸರ್ಕಾರ, ಪೋಷಕರಿಂದ ದೇಣಿಗೆ ಸಂಗ್ರಹಿಸುವ ನಿರ್ಧಾರ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ವಿಮುಖಮಾಡುತ್ತದೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಯು.ಬಿ.ವೆಂಕಟೇಶ್‌ ಆತಂಕವ್ಯಕ್ತಪಡಿಸಿದ್ದಾರೆ.‘ಎಷ್ಟೋ ಮಕ್ಕಳು ಶಾಲೆಯಲ್ಲಿ ನೀಡುವ ಒಂದು ಹೊತ್ತಿನ ಊಟದ ಸಲುವಾಗಿ ಶಾಲೆಗೆ ಬರುತ್ತಿದ್ದಾರೆ. ಹಲವು ಮಕ್ಕಳಿಗೆ ಬಟ್ಟೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ. ಇಂತಹ ಮಕ್ಕಳೇ ಇರುವ ಪೋಷಕರಿಗೆ ಹಣ ಕೇಳುವುದು ಸಲ್ಲದು’ ಎಂದು ಲಾಯರ್ಸ್ ಗಿಲ್ಡ್‌ನ ರಾಜ್ಯ ಸಂಚಾಲಕ ಅನೀಸ್ ಪಾಷ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT