ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳಲ್ಲಿ ಆಮ್ಲಜನಕ ಸಹಾಯವಾಣಿ ಮಾಹಿತಿ: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Last Updated 6 ಮೇ 2021, 17:15 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಆಮ್ಲಜನಕದ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರೀಕೃತ ವ್ಯವಸ್ಥೆಯೇ ಇಲ್ಲದಿರುವುದನ್ನು ಗಮನಿಸಿದ ಹೈಕೋರ್ಟ್‌, ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಎಲ್ಲ ಆಸ್ಪತ್ರೆಗಳಲ್ಲೂ ಆಮ್ಲಜನಕದ ಸಹಾಯವಾಣಿ ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಗುರುವಾರ ನಿರ್ದೇಶನ ನೀಡಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ವಿಶೇಷ ಪೀಠ, ಈ ನಿರ್ದೇಶನ ನೀಡಿತು.

‘ರಾಜ್ಯ ಸರ್ಕಾರವು ಇ–ಮೇಲ್‌ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಮಾಹಿತಿ ರವಾನಿಸುವ ಕ್ರಮ ಅನುಸರಿಸಲು ಅವಕಾಶವಿದೆ. ಆಮ್ಲಜನಕ ಪೂರೈಕೆ ಸಹಾಯವಾಣಿಗೆ ಸಂಬಂಧಿಸಿದ ಮಾಹಿತಿ ಪ್ರಚಾರಕ್ಕೆ ತಕ್ಷಣವೇ ಎಲ್ಲ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳಿಗೆ ನಿರ್ದೇಶಿಸಬೇಕು. ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಪೀಠ ಆದೇಶಿಸಿತು.

ಆಮ್ಲಜನಕ ‍ಪೂರೈಕೆಯ ನಿರ್ವಹಣೆಗೆ ಸಿದ್ಧಪಡಿಸಿರುವ ಕರಡು ಮಾರ್ಗಸೂಚಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ರಾಜ್ಯ ಸರ್ಕಾರ, ಈವರೆಗೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿನ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ನಿಶ್ಚಿತವಾದ ಯಾವುದೇ ಮಾರ್ಗಸೂಚಿಗಳು ಇರಲಿಲ್ಲ ಎಂಬ ಮಾಹಿತಿ ನೀಡಿತು.

‘ರಾಜ್ಯದಲ್ಲಿ ಆಮ್ಲಜನಕದ ಬಾಟ್ಲಿಂಗ್‌ ಘಟಕಗಳು ಇರುವ ಸ್ಥಳ, ಪ್ರತಿ ಬಾಟ್ಲಿಂಗ್‌ ಘಟಕದ ಸಾಮರ್ಥ್ಯ ಮತ್ತು ಪ್ರಸ್ತುತ ಅಲ್ಲಿ ಲಭ್ಯವಿರುವ ಆಮ್ಲಜನಕದ ಪ್ರಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರೀಕೃತ ಮಾಹಿತಿಯೇ ಲಭ್ಯವಿಲ್ಲ. ಸದ್ಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಆಮ್ಲಜನಕದ ಬೇಡಿಕೆಗೆ ಸಂಬಂಧಿಸಿದಂತೆಯೂ ಕೇಂದ್ರೀಕೃತವಾಗಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಇಲ್ಲ’ ಎಂದ ನ್ಯಾಯಪೀಠ, ಈ ಎಲ್ಲ ವಿಚಾರಗಳ ಕುರಿತಾಗಿ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿತು.

‘ಪ್ರೆಷರ್‌ ಸ್ವಿಂಗ್‌ ಅಡ್ಸಾರ್ಪ್ಶನ್‌’ ತಂತ್ರಜ್ಞಾನದಲ್ಲಿ ಆಮ್ಲಜನಕ ಉತ್ಪಾದಿಸುವ 68 ಘಟಕಗಳನ್ನು ಮೇ ಅಂತ್ಯದೊಳಗೆ ಕಾರ್ಯಾರಂಭ ಮಾಡಲಿವೆ. ಈ ಪೈಕಿ 28 ಘಟಕಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಪ್ರತಿ ಘಟಕವು ನಿಮಿಷಕ್ಕೆ 500 ಲೀಟರ್‌ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದನ್ನು ಬಳಸಿಕೊಂಡು 15ರಿಂದ 20 ಹಾಸಿಗೆಗಳನ್ನು ನಿರ್ವಹಣೆ ಮಾಡಬಹುದು‘ ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಕೋರ್ಟ್‌ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT