ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಪ್ರಕಾಶನ ಸಂಸ್ಥೆಗೆ ‘ಕಲ್ಯಾಣ’!

ಸಮಾಜ ಕಲ್ಯಾಣ ಇಲಾಖೆಯ ನಡೆಗೆ ಪ್ರಕಾಶಕರ ಅಸಮಾಧಾನ
Last Updated 29 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ತಂದ ಬದಲಾವಣೆಯಿಂದ ಪುಸ್ತಕೋದ್ಯಮ ತತ್ತರಿಸಿಹೋಗಿದೆ. ಇಂತಹ ಸ್ಥಿತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಇರುವ ವಿದ್ಯಾರ್ಥಿ ನಿಲಯಗಳ ಗ್ರಂಥಾಲಯಗಳಿಗೆ ಒಂದೇ ಪ್ರಕಾಶನದ ಹೆಚ್ಚಿನ ಪುಸ್ತಕಗಳನ್ನು ಖರೀದಿಸಲು ಇಲಾಖೆ ಮುಂದಾಗಿರುವುದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೋವಿಡ್‌ ಕಾರಣ ಪುಸ್ತಕ ಪ್ರಿಯರು ಕೂಡ ಮಳಿಗೆಗಳಿಗೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪುಸ್ತಕಗಳ ರಾಶಿ ಮಳಿಗೆಗಳಲ್ಲಿಯೇ ದೂಳು ತಿನ್ನುತ್ತಿವೆ. ಹೀಗಾಗಿ ಪುಸ್ತಕ ಪ್ರಕಾಶಕರು ಹಾಗೂ ಮಾರಾಟಗಾರರು ಆರು ತಿಂಗಳುಗಳಿಂದ ಕಂಗಾಲಾಗಿ ಕುಳಿತಿದ್ದಾರೆ.

ಈಗ ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ
ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆದರೆ, ಇಲಾಖೆಯ ಅಧಿಕಾರಿಗಳು ಖರೀದಿಸಲು ಸೂಚಿಸಿರುವ ಪುಸ್ತಕಗಳ ಪಟ್ಟಿಯಲ್ಲಿ ಶೇ 80 ರಷ್ಟು ಪುಸ್ತಕಗಳು ಒಂದೇ ಪ್ರಕಾಶನವು ಪ್ರಕಟಿಸಿದ ಪುಸ್ತಕಗಳೇ ಆಗಿದ್ದು, ಇಲ್ಲಿ ಪಾರದರ್ಶಕತೆ ಕಣ್ಮರೆಯಾಗಿದೆ ಎಂದು ಪ್ರಕಾಶಕರು ದೂರಿದ್ದಾರೆ.

‘ರಾಜ್ಯದಲ್ಲಿ 1,500ಕ್ಕೂ ಅಧಿಕ ಪ್ರಕಾಶಕರಿದ್ದಾರೆ. ವಾರ್ಷಿಕ 7 ಸಾವಿರಕ್ಕೂ ಅಧಿಕ ಹೊಸ ಪುಸ್ತಕಗಳು ಪ್ರಕಟವಾಗುತ್ತವೆ. ಆದರೆ, ಜಿಲ್ಲೆಗಳಲ್ಲಿ ಖರೀದಿಗೆ ಅಂತಿಮಗೊಳಿಸಲಾದ ಪುಸ್ತಕಗಳ ಪಟ್ಟಿಯಲ್ಲಿ ಒಂದೇ ಪ್ರಕಾಶನದ ಅಧಿಕ ಪುಸ್ತಕಗಳಿವೆ. ಸಾಮಾನ್ಯ ಜ್ಞಾನ, ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಎಲ್ಲವೂ ಒಂದೇ ಪ್ರಕಾಶನದ ಪುಸ್ತಕಗಳನ್ನೇ ಅಂತಿಮಗೊಳಿಸಲಾಗುತ್ತಿದೆ. ಪ್ರತಿ ವರ್ಷ ಒಂದೇ ಪ್ರಕಾಶನದ ಪುಸ್ತಕಗಳನ್ನು ಆಯ್ಕೆ ಆಗುತ್ತಿರುವುದನ್ನು ಗಮನಿಸಿದರೆ ಈ ಯೋಜನೆಯಲ್ಲಿ ಇಲಾಖೆಯ ಅಧಿಕಾರಿಗಳು ಒಳಒಪ್ಪಂದ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿಪಾಲ್ಗೊಳ್ಳಲು ನಿಗದಿಪಡಿಸಿದ ಅರ್ಹತಾ ಮಾನದಂಡ ಅವೈಜ್ಞಾನಿಕವಾಗಿದೆ’ ಎಂದು ಪ್ರಕಾಶಕರೊಬ್ಬರು ಆರೋಪಿಸಿದರು.

ನಿರಂತರ ಅನ್ಯಾಯ: ‘ಪ್ರತಿವರ್ಷ ಒಂದೇ ಪ್ರಕಾಶನದ ಅಧಿಕ ಪುಸ್ತಕಗಳನ್ನು ಆಯ್ಕೆ ಮಾಡುತ್ತಿರುವುದು ಯಕ್ಷ ಪ್ರಶ್ನೆಯಾಗಿದೆ. ಈ ಹಿಂದೆ ಇಲಾಖೆಯ ಸಚಿವರಾಗಿದ್ದ ಎಚ್. ಆಂಜನೇಯ ಅವರು ಪುಸ್ತಕಗಳ ಆಯ್ಕೆಗೆ ಸಮಿತಿ ರಚಿಸಬೇಕೆಂದು ಸೂಚಿಸಿದ್ದರು. ಈವರೆಗೂ ಸಮಿತಿ ರಚನೆ ಆಗಿಲ್ಲ. ಗ್ರಂಥಾಲಯ ಇಲಾಖೆ ಮಾದರಿಯಲ್ಲಿಯೇ ಆಯ್ಕೆ ಸಮಿತಿ ರಚಿಸಿ, ಖರೀದಿಗೆ ಪ್ರಕಾಶನ ಸಂಸ್ಥೆಗಳನ್ನು ಆಹ್ವಾನಿಸಬೇಕು’ ಎಂದು ಕರ್ನಾಟಕ ಪ್ರಕಾಶಕ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕಾಶನ ಸಂಸ್ಥೆಗಳು ಗ್ರಂಥಾಲಯಗಳನ್ನೇ ಅವಲಂಬಿಸಿವೆ. ಆದರೆ, ಸರ್ಕಾರ ಇ– ಬುಕ್‌ ಹೆಸರಿನಲ್ಲಿ ನಮ್ಮನ್ನು ಕಡೆಗಣಿಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ಗ್ರಂಥಾಲಯಗಳಿಗೆ ಪ್ರತಿ ವರ್ಷ ಸುಮಾರು ₹ 15 ಕೋಟಿ ಮೌಲ್ಯದ ಪುಸ್ತಕಗಳ ಖರೀದಿ ನಡೆಯುತ್ತಿದ್ದರೂ ಅದು ಒಂದೇ ಸಂಸ್ಥೆಯ ಪಾಲಾಗುತ್ತಿದೆ. ಇದರಿಂದ ಉಳಿದ ಪ್ರಕಾಶರಿಗೆ ಅನ್ಯಾಯವಾಗುತ್ತಿದೆ’ ಎಂದು ಸೃಷ್ಟಿ ಪ್ರಕಾಶನದ ಸೃಷ್ಟಿ ನಾಗೇಶ್ ಬೇಸರ ವ್ಯಕ್ತಪಡಿಸಿದರು.

ಮೂರು ವಿಭಾಗಗಳಲ್ಲಿ ವಿಂಗಡಣೆ

‘ಯಾವುದೇ ನಿರ್ದಿಷ್ಟ ಪ್ರಕಾಶನದ ಪುಸ್ತಕಗಳ ಖರೀದಿಯ ಬಗ್ಗೆ ಕೇಂದ್ರ ಕಚೇರಿಯಿಂದ ಜಿಲ್ಲೆಗಳಲ್ಲಿರುವ ಉಪ ನಿರ್ದೇಶಕರಿಗೆ ಸೂಚಿಸಿಲ್ಲ. ಆದರೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕರ ಪುಸ್ತಕಗಳನ್ನು ಖರೀದಿಸುವಂತೆ ಸೂಚಿಸಿದ್ದೇವೆ. ಪುಸ್ತಕಗಳ ಖರೀದಿಗೆ ಶೈಕ್ಷಣಿಕ ಪುಸ್ತಕಗಳು, ಸಾಮಾನ್ಯ ಜ್ಞಾನದ ಪುಸ್ತಕಗಳು ಹಾಗೂ ಮಹಾನಾಯಕರ ಜೀವನಚರಿತ್ರೆ ಕುರಿತಾದ ಪುಸ್ತಕಗಳು ಎಂದು ವಿಂಗಡಿಸಲಾಗುತ್ತದೆ. ಈಗಾಗಲೇ ಪುಸ್ತಗಳ ಖರೀದಿಗೆ ಹಣವನ್ನೂ ಮಂಜೂರು ಮಾಡಿದ್ದೇವೆ. ಒಂದೇ ಪ್ರಕಾಶನದ ಅಧಿಕ ಪುಸ್ತಕಗಳನ್ನು ಆಯ್ಕೆ ಮಾಡಿದಲ್ಲಿ ಹಿರಿಯ ಅಧಿಕಾರಿಗಳಿಂದ ಮೇಲ್ವಿಚಾರಣೆ ನಡೆಸಲಾಗುವುದು’ ಎಂದು ಇಲಾಖೆಯ ಆಯುಕ್ತ ಡಾ. ರವಿಕುಮಾರ್ ಸುರ್‌ಪುರ್‌ ತಿಳಿಸಿದರು.

ಕೆಲ ಜಿಲ್ಲೆಗಳಲ್ಲಿ ಪುಸ್ತಕ ಖರೀದಿಗೆ ಟೆಂಡರ್ ಆಹ್ವಾನಿಸಿದ್ದರೂ ಪುಸ್ತಕಗಳ ಶೀರ್ಷಿಕೆಯನ್ನು ಪ್ರಕಟಿಸದಿರುವುದು ಕೂಡ ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿದೆ.

***

ಇ ಟೆಂಡರ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದ್ದು, ಅನಗತ್ಯವಾಗಿ ಆರೋಪ ಮಾಡಲಾಗುತ್ತಿದೆ. ಪುಸ್ತಕಗಳ ಆಯ್ಕೆಯಲ್ಲಿಯೂ ನಮ್ಮ ಸಂಸ್ಥೆಯ ಪಾತ್ರವಿಲ್ಲ

-ಆರ್‌. ದೊಡ್ಡೇಗೌಡ, ಸಪ್ನ ಬುಕ್‌ ಹೌಸ್ ವ್ಯವಸ್ಥಾಪಕ

***

ಜಿಲ್ಲಾ ಮಟ್ಟದಲ್ಲಿಯೇ ಪುಸ್ತಕಗಳನ್ನು ಖರೀದಿಸಲು ಸೂಚಿಸಲಾಗಿದೆ. ಒಂದೇ ಪ್ರಕಾಶನ ಸಂಸ್ಥೆಯ ಅಧಿಕ ಪುಸ್ತಕಗಳನ್ನು ಆಯ್ಕೆ ಮಾಡಿದರೆ ಕ್ರಮಕೈಗೊಳ್ಳಲಾಗುವುದು

-ಡಾ. ರವಿಕುಮಾರ್ ಸುರ್‌ಪುರ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT