ಗುರುವಾರ , ಮೇ 13, 2021
16 °C

PV Web exclusive | ಆರೋಗ್ಯ ತುರ್ತು ಪರಿಸ್ಥಿತಿ; ಯಾಕೀ ದುರ್ಗತಿ...?

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಭಾರತ ಈಗ ಒಂದು ರೀತಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ವಿಶ್ವದ ಬಹುತೇಕ ದೇಶಗಳು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದರೆ, ಕೋವಿಡ್–19 ಎರಡನೇ ಅಲೆ ಎದುರಿಸಲು ಸಜ್ಜಾಗದ ಭಾರತ ದಿನದಿಂದ ದಿನಕ್ಕೆ ತತ್ತರಿಸುತ್ತಿದೆ. ಕೋವಿಡ್ ಚಿಕಿತ್ಸೆಗೆ ಮೂಲಸೌಕರ್ಯಗಳಿಲ್ಲದ ಆಸ್ಪತ್ರೆಗಳಲ್ಲಾಗುತ್ತಿರುವ ಯಡವಟ್ಟಿನಿಂದಾಗಿ, ನಿತ್ಯ ನೂರಾರು ಜೀವಗಳು ಬಲಿಯಾಗುತ್ತಿವೆ. ಆಮ್ಲಜನಕಕ್ಕಾಗಿ ದೇಶದಾದ್ಯಂತ ಹಾಹಾಕಾರ ಶುರುವಾಗಿದ್ದು, ಪ್ರಾಣವಾಯು ಇಲ್ಲದೆ ರೋಗಿಗಳು ಕೊನೆಯುಸಿರೆಳೆಯುತ್ತಿದ್ದಾರೆ.

ಮಹಾನಗರಗಳ ಸ್ಮಶಾನಗಳಲ್ಲಿ ದಿನವಿಡೀ ಹೆಣಗಳನ್ನು ಸುಡಲಾಗುತ್ತಿದೆ. ಸಾವು ಜಯಿಸಲಾಗದವರ ಚಿತೆಯ ಹೊಗೆ ಮುಗಿಲು ಮುಟ್ಟುತ್ತಿದೆ. ರೋಗಿಗಳ ಮೃತದೇಹಗಳನ್ನೊತ್ತ ಆಂಬುಲೆನ್ಸ್‌ಗಳು ಸ್ಮಶಾನದ ಎದುರು ತಾಸುಗಟ್ಟಲೆ ಕ್ಯೂ ನಿಲ್ಲುತ್ತಿವೆ. ಎಲ್ಲೆಂದರಲ್ಲಿ ಹೆಣಗಳನ್ನು ಸುಡಲಾಗುತ್ತಿದೆ. ರೋಗಿಗಳ ಅಂತ್ಯಕ್ರಿಯೆಯನ್ನು ಖಾಸಗಿ ಜಮೀನಿನಲ್ಲಿ ನೆರವೇರಿಸಲು ಅನುಮತಿ ನೀಡಿರುವ ಸರ್ಕಾರ, ಹೊಸ ಸ್ಮಶಾನಗಳ ನಿರ್ಮಾಣಕ್ಕೂ ಮುಂದಾಗಿದೆ. ‘ನಮಗೆ ಸ್ಮಶಾನ ಬೇಡ, ಆಮ್ಲಜನಕ ಕೊಡಿ’ ಎಂದು ಜನ ಕೇಳುತ್ತಿದ್ದಾರೆ.

ಯಾಕೆ ಹೀಗಾಯ್ತು? ಇಷ್ಟೆಲ್ಲಾ ಅನಾಹುತಕ್ಕೆ ನಿನ್ನೆ ಮೊನ್ನೆ ಉಲ್ಭಣಿಸಿದ ಕೋವಿಡ್–19 ಎರಡನೇ ಅಲೆ ನೆಪವಷ್ಟೆ. ವರ್ಷದ ಹಿಂದೆಯೇ ವಿಶ್ವವವನ್ನು ಕಾಡಿದ ಕೋವಿಡ್ ನಿಯಂತ್ರಣಕ್ಕೆ ಭಾರತವೂ ಲಾಕ್‌ಡೌನ್‌ (ಪೂರ್ವ ತಯಾರಿ ಇಲ್ಲದೆ) ಘೋಷಿಸಿ, ಒಂದು ಮಟ್ಟಿಗೆ ಅಂಕುಶ ಹಾಕಲು ಯತ್ನಿಸಿ ಬಹಳ ತಿಂಗಳಾಗಿಲ್ಲ. ಅದೇ ಸೋಂಕು ಈಗ ಸಮುದಾಯದ ಮಟ್ಟಕ್ಕೆ ಹರಡಿದೆ. ಬಡವ–ಬಲ್ಲಿದನೆನ್ನದೆ ಎಲ್ಲರನ್ನೂ ಆಹುತಿ ತೆಗೆದುಕೊಳ್ಳುತ್ತಿದೆ. ಇದಕ್ಕೆ ಯಾರನ್ನು ದೂರಬೇಕು? ಕೋವಿಡ್ ಅನ್ನೇ ಅಥವಾ ಜನರ ನಿರ್ಲಕ್ಷ್ಯವನ್ನೇ? ಎರಡೂ ಅಲ್ಲ, ಹೊಣೆಗೇಡಿ ಹಾಗೂ ನಿರ್ಲಕ್ಷ್ಯದ ಪರಮಾವಧಿಯ ಪ್ರಭುತ್ವವನ್ನು.

2019ರ ನವೆಂಬರ್‌ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡು ಕೊರೊನಾ ಸೋಂಕು, ಜಗತ್ತನ್ನು ವ್ಯಾಪಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಸೋಂಕಿನ ಹೊಡೆತಕ್ಕೆ ಪಾಶ್ಚಾತ್ಯ ದೇಶಗಳು ಲಾಕ್‌ಡೌನ್ ಘೋಷಿಸಿ ಸೋಂಕಿಗೆ ಕಡಿವಾಣ ಹಾಕಲು ಯತ್ನಿಸಿದ್ದಾಗ, ಭಾರತ ‌ಮಾತ್ರ ತಜ್ಞರ ಎಚ್ಚರಿಕೆಯನ್ನು ಕಡೆಗಣಿಸಿ, ತನಗೇನೂ ಗೊತ್ತಿಲ್ಲವೆಂಬಂತೆ ಸುಮ್ಮನಿತ್ತು.

ಬದಲಿಗೆ 2020ರ ಫೆಬ್ರುವರಿಯಲ್ಲಿ ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾರತ ಭೇಟಿ ನಿಮಿತ್ತ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್‌ ರಾಜ್ಯದ ಅಹಮದಾಬಾದ್‌ನಲ್ಲಿ  ಲಕ್ಷಾಂತರ ಜನರನ್ನು ಸೇರಿಸಿ ಅದ್ಧೂರಿಯಾಗಿ ಆಯೋಜಿಸುವಲ್ಲಿ ಮಗ್ನನಾಗಿತ್ತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಮೋದಿ ಏಕಾಏಕಿ ಲಾಕ್‌ಡೌನ್‌ ಘೋಷಿಸಿದರು. ಪೂರ್ವತಯಾರಿ ಇಲ್ಲದ ಲಾಕ್‌ಡೌನ್‌ನಿಂದ ಹದಗೆಟ್ಟ ದೇಶದ ಆರ್ಥಿಕತೆ ಹಾಗೂ ಜನಜೀವನ ಇನ್ನೂ ತಹಬದಿಗೆ ಬಂದಿಲ್ಲ ಎಂಬುದು ಮತ್ತೊಂದು ವಿಷಯ.

ಇದರ ನಡುವೆಯೇ ಕೋವಿಡ್ ಎರಡನೇ ಅಲೆ ಶುರುವಾಗಿದೆ. ಮೊದಲ ಅಲೆಯಲ್ಲೇ ಎಚ್ಚೆತ್ತುಕೊಂಡಿದ್ದ ಬೇರೆ ದೇಶಗಳು ಎರಡನೇ ಅಲೆಯ ಸವಾಲನ್ನು ಸಮರ್ಥವಾಗಿ ಎದುರಿಸುತ್ತಿದ್ದರೆ, ಭಾರತದ್ದು ಈಗಲೂ ದಿವ್ಯ ನಿರ್ಲಕ್ಷ್ಯ. ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿ ಮತ್ತು ಪರಿವಾರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ, ಕೋವಿಡ್ ಲೆಕ್ಕಿಸದೆ ಮಗ್ನವಾಗಿತ್ತು. ಇತ್ತ ಕರ್ನಾಟಕದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆ ಭರಾಟೆಯಲ್ಲಿ ಸರ್ಕಾರ ಮುಳುಗಿತ್ತು. ಎರಡೂ ಸರ್ಕಾರಗಳು ನಿರ್ಲಕ್ಷ್ಯದ ಪ್ರತಿಫಲವೇ ಸದ್ಯದ ಪರಿಸ್ಥಿತಿಗೆ ಕಾರಣ.

ಇಷ್ಟಾದರೂ ಸರ್ಕಾರ ಮೊದಲ ಅಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿದ್ದ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವ ಅವಕಾಶವನ್ನು ಕೈ ಚೆಲ್ಲಿದೆ. ಇದರಿಂದಾಗಿ, ಬೀದಿ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ. ಹಿಂದೆ ಪ್ಲೇಗ್‌, ಕಾಲರದಂತಹ ಸಾಂಕ್ರಾಮಿಕ ರೋಗಗಳು ಸೃಷ್ಟಿಸಿದ್ದ ಹಾದಿಯನ್ನು ಕೋವಿಡ್ ಹಿಡಿದಿರುವಂತೆ ಭಾಸವಾಗುತ್ತಿದೆ.

ಕೋವಿಡ್ ರೋಗಿಗಳ ಆರೈಕೆಗಾಗಿ ಚೀನಾ ಹತ್ತೇ ದಿನದಲ್ಲಿ ಆಸ್ಪತ್ರೆಯನ್ನು ನಿರ್ಮಿಸಿ ಸುದ್ದಿಯಾಗಿತ್ತು. ಪಾಶ್ಚಿಮಾತ್ಯ ದೇಶಗಳು ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಂಡು ಕೋವಿಡ್ ಎದುರಿಸಲು ಸನ್ನದ್ಧರಾದವು. ಭಾರತ ಮಾಡಿಕೊಂಡ ಪೂರ್ವತಯಾರಿ ಶೂನ್ಯ. ರಾಮ ಮಂದಿರಕ್ಕೆ ದೇಶದಾದ್ಯಂತ ಸಾವಿರಾರು ಕೋಟಿ ದೇಣಿಗೆ ಎತ್ತಿದ್ದ ಆಳುವ ಪಕ್ಷದ ಮಾತೃ ಸಂಘಟನೆ, ಕೋವಿಡ್‌ನಂತಹ ಸಂದರ್ಭದಲ್ಲಿ ಜೀವ ಉಳಿಸುವಂತಹ ಅಭಿಯಾನ ಕೈಗೊಳ್ಳುವ ಅವಕಾಶವನ್ನು ಕೈಚೆಲ್ಲಿ ಕುಳಿತಿದೆ.

ಇಷ್ಟಾದರೂ ನಮ್ಮದು ಈಗ ‘ಯಥಾ ರಾಜ, ತಥಾ ಪ್ರಜಾ’ ಎಂಬ ಪ್ರಭುತ್ವ. ಇಲ್ಲಿ ವಿರೋಧ ಪಕ್ಷಗಳು ನೆಪ ಮಾತ್ರ. ಮಾಧ್ಯಮಗಳು ಆಳುವವರ ತುತ್ತೂರಿಗಳು. ದೇಶದ ಸದ್ಯದ ಸ್ಥಿತಿಯನ್ನು ನೆನಪಿಸಿಕೊಂಡರೆ, ರೋಮ್ ದೊರೆ ನೀರೊ ನೆನಪಾಗುತ್ತಾನೆ. ತನ್ನ ರಾಜ್ಯಕ್ಕೆ ಬೆಂಕಿ ಬಿದ್ದಾಗ ಆತ ಪಿಟೀಲು ನುಡಿಸುತ್ತಿದ್ದನಂತೆ. ನಮ್ಮಲ್ಲಿ ಪಿಟೀಲಿನ ಬದಲು ಪ್ರಭುತ್ವದ ನೂರೆಂಟು ಗೋಜಲುಗಳು ಕಾಣಿಸುತ್ತಿವೆ. ಕೋವಿಡ್ ಒಂದು ನೆಪವಷ್ಟೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು