ಶುಕ್ರವಾರ, ನವೆಂಬರ್ 27, 2020
19 °C
ಜವಾಬ್ದಾರಿ ನಿಭಾಯಿಸಲು ಸಿದ್ಧ: ಸುಮಾ ಅಶೋಕ ಗಸ್ತಿ

‘ರಾಜ್ಯಸಭಾ ಸ್ಥಾನ ‘ಕಲ್ಯಾಣ’ಕ್ಕೇ ಇರಲಿ’: ಬಿಜೆಪಿಯಲ್ಲಿ ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಅಶೋಕ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಅಶೋಕ ಗಸ್ತಿ ಅವರ ಪತ್ನಿ ಸುಮಾ ಗಸ್ತಿ ಅವರಿಗೇ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಸವಿತಾ ಸಮಾಜದವರು ಆಗ್ರಹಿಸುತ್ತಿದ್ದಾರೆ. ತಾವು ಈ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಸುಮಾ ಗಸ್ತಿ ಹೇಳಿದ್ದಾರೆ.

ಏತನ್ಮಧ್ಯೆ ಈ ಸ್ಥಾನಕ್ಕೆ ಕಲ್ಯಾಣ ಕರ್ನಾಟಕದವರನ್ನೇ ಪರಿಗಣಿಸಬೇಕು ಎಂಬ ಕೂಗು ಬಿಜೆಪಿಯಲ್ಲಿ ಎದ್ದಿದೆ.

ಸಾಮಾನ್ಯ ಕಾರ್ಯಕರ್ತರಾಗಿದ್ದ ಅಶೋಕ ಗಸ್ತಿ ಅವರಿಗೆ ಬಿಜೆಪಿ ಹೈಕಮಾಂಡ್‌ ರಾಜ್ಯಸಭೆ ಸದಸ್ಯ ಸ್ಥಾನ ನೀಡಿತ್ತು. ಇದು ಕಲ್ಯಾಣ ಕರ್ನಾಟಕಕ್ಕೆ ಸಿಕ್ಕ ಅವಕಾಶವೂ ಆಗಿತ್ತು. ಆದರೆ, ಗಸ್ತಿ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿ, ಸಂಸತ್ತಿನ ಒಂದು ಅಧಿವೇಶನಕ್ಕೆ ಮಾತ್ರ ಹಾಜರಾಗಿದ್ದರು. ಕೋವಿಡ್‌ನಿಂದಾಗಿ ಮೃತಪಟ್ಟರು. 

ಈ ಭಾಗದವರನ್ನೇ ಪರಿಗಣಿಸಿ:  ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಕಲಬುರ್ಗಿ ವಿಭಾಗ ಸಹ ಪ್ರಮುಖ ಈಶ್ವರಸಿಂಗ್‌ ಠಾಕೂರ್, ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹಾಗೂ ಸಮಸ್ಯೆಗಳ ನಿವಾರಣೆಗೆ ಅನುಕೂಲವಾಗು
ವಂತೆ ಮತ್ತೆ ಈ ಭಾಗದವರನ್ನೇ ರಾಜ್ಯಸಭೆಗೆ ಕಳಿಸಬೇಕು’ ಎಂದು ಹೇಳಿದರು.

‘ಪಕ್ಷದ ವರಿಷ್ಠರು ಕಲ್ಯಾಣ ಕರ್ನಾಟಕದ ಹಿತ ಗಮನದಲ್ಲಿರಿಸಿಕೊಂಡೇ ಅಶೋಕ ಗಸ್ತಿ ಅವರನ್ನು ರಾಜ್ಯಸಭೆಗೆ ಕಳಿಸಿದ್ದರು. ಗಸ್ತಿ ನಿಧನದಿಂದ ಈ ಸ್ಥಾನ ತೆರವಾಗಿದೆ. ಈ ಭಾಗದ ಜನರಿಗೆ ಅನ್ಯಾಯವಾಗಬಾರದು. ಹೀಗಾಗಿ ಈ ಭಾಗದವರಿಗೇ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗುವುದು. ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಪಕ್ಷಕ್ಕೆ ಬಿಟ್ಟ ವಿಚಾರ’ ಎಂದು ಅವರು ಹೇಳಿದರು.

‘ಈ ಭಾಗದವರಿಗೇ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್‌ ಅವರನ್ನು ಒತ್ತಾಯಿಸಲಿದ್ದೇವೆ. ಆದರೆ, ಇಂಥವರಿಗೇ ಟಿಕೆಟ್‌ ನೀಡಬೇಕು ಎಂದು ಕೇಳುವುದಿಲ್ಲ’ ಎಂದು ಬಿಜೆಪಿಯ ಕಲಬುರ್ಗಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಹೇಳಿದರು.

ಅನುಕಂಪದ ನೌಕರಿ ಅಲ್ಲ: ‘ಸರ್ಕಾರಿ ನೌಕರಿ ರೀತಿ ಅನುಕಂಪದ ಆಧಾರದಲ್ಲಿ ಹುದ್ದೆ ಕೊಡಿ ಎಂದು ಕೇಳು ವುದಕ್ಕೆ ಆಗುವುದಿಲ್ಲ. ಸುಮಾ ಗಸ್ತಿ ಅವರಿಗೆ ಸ್ಥಾನಮಾನ ಕೊಟ್ಟರೆ ತಪ್ಪಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ’
ಎಂದು ರಾಯಚೂರಿನ ಬಿಜೆಪಿ  ಮುಖಂಡ ಎನ್‌.ಶಂಕರೆಪ್ಪ ಪ್ರತಿಕ್ರಿಯಿಸಿದರು. 

***

ನಾನು ಪದವೀಧರೆ. ಪಕ್ಷದ ಸಂಘಟನೆ ಬಗ್ಗೆಯೂ ತಿಳಿವಳಿಕೆ ಇದೆ. ರಾಜ್ಯಸಭಾ ಸದಸ್ಯತ್ವ ಅಥವಾ ಬೇರೆ ಯಾವುದಾದರೂ ಸ್ಥಾನಮಾನ ಕೊಡುತ್ತಾರೆ ಎನ್ನುವ ನಂಬಿಕೆ ಇದೆ.

- ಸುಮಾ ಅಶೋಕ ಗಸ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು