ಮಂಗಳವಾರ, ಜುಲೈ 5, 2022
21 °C
ಬಿಜೆಪಿ ಸೇರ್ಪಡೆಗೆ ವಿವೇಕರಾವ್ ಪಾಟೀಲ ನಿರ್ಧಾರ

ಚುನಾವಣೆ ಹೊಸ್ತಿಲಲ್ಲಿ ರಮೇಶ ಜಾರಕಿಹೊಳಿ ಶಿಕಾರಿ!

ಎಂ, ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ‘ಶಿಕಾರಿ’ ಆರಂಭಿಸಿದ್ದಾರೆ. ಕಾಂಗ್ರೆಸ್‌ ಮುಖಂಡರನ್ನು ಬಿಜೆಪಿಗೆ ಸೆಳೆಯುವ ಕಾರ್ಯಾಚರಣೆಗೆ ಇಳಿದಿದ್ದಾರೆ. ವಿಧಾನಪರಿಷತ್‌ ಹಾಲಿ ಸದಸ್ಯ ವಿವೇಕರಾವ್ ಪಾಟೀಲ ಬಿಜೆಪಿಗೆ ಸೇರ್ಪಡೆಯಾಗುವಂತೆ ಮನವೊಲಿಸಲು ಯಶಸ್ವಿಯಾಗಿದ್ದಾರೆ.

ಹೋದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿವೇಕರಾವ್‌, ಆಗ ಕಾಂಗ್ರೆಸ್‌ ಶಾಸಕರಾಗಿದ್ದ ರಮೇಶ ಜಾರಕಿಹೊಳಿ ಬೆಂಬಲ ನೀಡಿದ್ದರಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಅವರು ಕಾಂಗ್ರೆಸ್‌ ಟಿಕೆಟ್ ಕೇಳಿದ್ದರು. ಆದರೆ, ವರಿಷ್ಠರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ, ಉದ್ಯಮಿ ಚನ್ನರಾಜ ಹಟ್ಟಿಹೊಳಿ ಅವರಿಗೆ ‘ಹಸಿರುನಿಶಾನೆ’ ತೋರಿದ್ದಾರೆ. ಇದರಿಂದ ಬೇಸರಗೊಂಡಿದ್ದರು. ಅವರನ್ನು ರಾಯಬಾಗ ತಾಲ್ಲೂಕಿನ ಬೆಕ್ಕೇರಿಯಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದ ರಮೇಶ, ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಬೆಮುಲ್‌)ದ ಅಧ್ಯಕ್ಷರೂ ಆಗಿರುವ ವಿವೇಕರಾವ್, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸತೀಶ ಕೈ ಮೀರಿ:

‘ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಿದ್ದೆ. ಕೊಡಲಿಲ್ಲ. ಹೀಗಾಗಿ, ನಮ್ಮ ನಾಯಕ ರಮೇಶ ಜಾರಕಿಹೊಳಿ ಆಹ್ವಾನದ ಮೇರೆಗೆ ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಹಾಲಿ ಸದಸ್ಯನಾದರೂ ಕಾಂಗ್ರೆಸ್‌ನವರು ಟಿಕೆಟ್ ನಿರಾಕರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನಿಮ್ಮ ಪರವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಅವರ ಕೈಯನ್ನೂ ಮೀರಿ ಬೇರೆಯವರಿಗೆ (ಚನ್ನರಾಜ) ಟಿಕೆಟ್ ಸಿಕ್ಕಿದೆ. ಇದರಿಂದ ಬೇಸರವಾಗಿದೆ’ ಎಂದು ವಿವೇಕರಾವ್ ‘ಪ್ರಜಾವಾಣಿ’ ತಿಳಿಸಿದರು.

‘ವಿಧಾನಪರಿಷತ್‌ನಲ್ಲಿ ನಾನು ಕಾಂಗ್ರೆಸ್‌ ಪರ ಕಾರ್ಯನಿರ್ವಹಿಸಿದ್ದೆ. ಸ್ಪೀಕರ್‌ ಚುನಾವಣೆ, ವಿವಿಧ ನಿರ್ಣಯಗಳ ಸಂದರ್ಭದಲ್ಲಿ ಬೆಂಬಲಿಸಿದ್ದೆ. ಆದರೂ ಆ ನನಗೆ ಮನ್ನಣೆ ಸಿಕ್ಕಿಲ್ಲ. ಹೀಗಾಗಿ, ರಮೇಶ ಅವರನ್ನು ಬೆಂಬಲಿಸಿ ಬಿಜೆಪಿ ಸೇರಲಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ರಮೇಶ ಈಚೆಗೆ, ಹಿಂದೆ ಬಿಜೆಪಿಯಲ್ಲಿದ್ದ ಹಾಲಿ ಕಾಂಗ್ರೆಸ್ ಮುಖಂಡ ಕಾಗವಾಡದ ಭರಮಗೌಡ (ರಾಜು) ಕಾಗೆ ಅವರನ್ನೂ ಭೇಟಿಯಾಗಿದ್ದರು. ಪಕ್ಷಕ್ಕೆ ವಾಪಸಾಗುವಂತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದಾಗಿ, ಕೆಲವೇ ದಿನಗಳಲ್ಲಿ ಅವರನ್ನು ಭೇಟಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಚುನಾವಣೆಯಲ್ಲಿ ತಮ್ಮ ಚನ್ನರಾಜಗೆ ಬೆಂಬಲ ನೀಡುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ ಜಾರಕಿಹೊಳಿ ನಡೆ ಕಾಂಗ್ರೆಸ್‌ಗೆ ತಲೆನೋವು ಸೃಷ್ಟಿಸಿದೆ. ಅವರು ಭೇಟಿಯಾದವರನ್ನು ಲಕ್ಷ್ಮಿ ಕೂಡ ಭೇಟಿಯಾಗಿ ಚರ್ಚಿಸುತ್ತಿದ್ದಾರೆ! ಹೀಗಾಗಿ, ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಣ ರಂಗೇರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು