ಗುರುವಾರ , ನವೆಂಬರ್ 26, 2020
21 °C
ಕೊಡಗು, ಹಾಸನ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ l ಜಲಾವೃತವಾದ ಮನೆಗಳು

ತಗ್ಗಿದ ಪ್ರವಾಹ: ಮುಂದುವರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ತಗ್ಗಿದೆ. ಆದರೆ, ಮಳೆ ಮುಂದುವರಿದಿದ್ದು, ಕೆಲವೆಡೆ ಮನೆಗಳು ಕುಸಿದಿವೆ.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭೀಮಾ ನದಿ ಪ್ರವಾಹ ತಗ್ಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗಿದ್ದು ಅಲ್ಲಲ್ಲಿ ಮನೆಗಳು ಕುಸಿದಿವೆ. ಮೂವರು ಗಾಯಗೊಂಡಿದ್ದಾರೆ.

ಯಾದಗಿರಿಯ ಮುಸ್ಲಿಂ‍ಪುರದಲ್ಲಿ ಮನೆ ಕುಸಿದು ವೃದ್ಧೆ ಖಮರುನ್ನಿಸಾ ಬೇಗಂ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲ್ಲೂಕಿನ ಆನೂರ (ಕೆ) ಗ್ರಾಮದಲ್ಲಿ ಭೀಮಾ ನದಿ ದಡದಲ್ಲಿ ಇದ್ದ ಗುಡಿಸಲುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರಿಂದ ಜನರು ತಾತ್ಕಾಲಿಕವಾಗಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಹುಣಸಗಿ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಮಳೆ ಸುರಿಯುತ್ತಿದ್ದು, ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಮನೆ ಕುಸಿದು ಶಾಂತಮ್ಮ ಅಮರೇಶ ಪೂಜಾರಿ ಮತ್ತು ಅವರ ಎರಡು ವರ್ಷದ ಮಗು ಶಿವರಾಜ ಗಾಯಗೊಂಡಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಚಿತ್ತಾಪುರದಲ್ಲಿ ಸಿಡಿಲು ಬಡಿದು ಬಸಪ್ಪ ಅಂಬಿಗೇರ‌ ಅವರಿಗೆ ಸೇರಿದ 6 ಕುರಿ ಸಾವನ್ನಪ್ಪಿವೆ. ಮಾನ್ವಿ ತಾಲ್ಲೂಕಿನ ಭೋಗಾವತಿಯಲ್ಲಿ ಕಬ್ಬಿನ ತೋಟದಲ್ಲಿ ಸಿಡಿಲು ಬಿದ್ದಿದ್ದರಿಂದ ದೊಡ್ಡಬಸಪ್ಪಗೌಡ ಅವರಿಗೆ ಸೇರಿದ 4 ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ. 

ಕಲಬುರ್ಗಿ ಜಿಲ್ಲೆಯಲ್ಲಿ ಭೀಮಾ ಹರಿವು 1.55 ಲಕ್ಷ ಕ್ಯುಸೆಕ್‌ಗೆ ಕುಸಿದಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರವಾಹದ ಆತಂಕ ದೂರವಾಗಿದೆ. ಕಲಬುರ್ಗಿ–ಜೇವರ್ಗಿ ಮಧ್ಯದ ಕಟ್ಟಿಸಂಗಾವಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ಧಾರಾಕಾರ ಮಳೆ : ಕೊಡಗು ಹಾಗೂ ಹಾಸನ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಅರಸೀಕೆರೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆಲವೆಡೆ ಮನೆಗಳು ಜಲಾವೃತವಾಗಿದ್ದವು. ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಸುರಿದಿದೆ.

ತಗ್ಗಿದ ಮಳೆ: ಹುಬ್ಬಳ್ಳಿ ನಗರವೂ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.

ಬಳ್ಳಾರಿ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಜೋರಾಗಿ ಮಳೆ ಸುರಿದಿದ್ದು, 19 ಮನೆಗಳಿಗೆ ಹಾನಿಯಾಗಿದೆ. ಸಂಡೂರಿನಲ್ಲಿ ಸಿಡಿಲು ಬಡಿದು 6 ಕುರಿಗಳು ಮೃತಪಟ್ಟಿವೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಡೀ ಮಳೆ ಸುರಿದಿದ್ದು, ಕಟಾವಿಗೆ ಬಂದಿರುವ ಶೇಂಗಾ ಹಾಗೂ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ. ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕಾಕನೂರು ಬಳಿ ಇರುವ ಸೂಳೆಕೆರೆಯ ಪ್ರಮುಖ ನೀರಿನ ಸೆಲೆಯಾಗಿರುವ ಹಿರೇಹಳ್ಳ ಈ ವರ್ಷದಲ್ಲಿ ಎರಡನೇ ಬಾರಿ ತುಂಬಿ ಹರಿಯುತ್ತಿದೆ.

23 ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಮುಂದುವರಿಕೆ:

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಅ.22 ಮತ್ತು 23ರಂದು ಧಾರಾಕಾರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಘೋಷಿತ ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಮುಂದುವರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತುಮಕೂರು, ಶಿವಮೊಗ್ಗ, ರಾಮನಗರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಗದಗ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ ಎರಡು ದಿನಗಳವರೆಗೆ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಅ. 24ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಮಳೆ-ಎಲ್ಲಿ, ಎಷ್ಟು?: ಕೊಪ್ಪಳ ಜಿಲ್ಲೆಯ ಬೇವೂರು ಹಾಗೂ ಹಾವೇರಿಯಲ್ಲಿ ಗರಿಷ್ಠ 10 ಸೆಂ.ಮೀ ಮಳೆಯಾಗಿದೆ. ಧಾರವಾಡ, ದಾವಣಗೆರೆ 9, ಹೊಸಕೋಟೆ, ಬೆಂಗಳೂರು 7, ಚಿತ್ರದುರ್ಗ, ನೆಲಮಂಗಲ, ಮಾಗಡಿ, ಕಂಪ್ಲಿ 6, ಪಾವಗಡ, ರಾಮನಗರ, ದೊಡ್ಡಬಳ್ಳಾಪುರ 5, ಸಿಂಧನೂರು, ಬೆಳಗಾವಿ, ಚಳ್ಳಕೆರೆ, ದಾವಣಗೆರೆ, ಕುಣಿಗಲ್, ಪಾಂಡವಪುರ, ಮೊಳಕಾಲ್ಮುರು 4, ಧಾರವಾಡ, ಚಿಂಚೋಳಿ, ಹರಿಹರ, ಚಿಕ್ಕಬಳ್ಳಾಪುರ, ಆನೇಕಲ್, ಬಾಗೇಪಲ್ಲಿ 3, ಮಂಡ್ಯ, ತಿಪಟೂರು, ಮಾಲೂರು, ಬಂಗಾರಪೇಟೆಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು