ಗುರುವಾರ , ಮೇ 26, 2022
31 °C
ಯತ್ನಾಳ ನೇತೃತ್ವದಲ್ಲಿ ತ್ರಿಪಕ್ಷ ಸದಸ್ಯರ ಧರಣಿ l ಪಂಚಮಸಾಲಿ, ಕುರುಬ ಮೀಸಲಾತಿ ಚರ್ಚೆಗೆ ಆಗ್ರಹ

ವಿಧಾನಸಭೆಯಲ್ಲಿ ಮೊಳಗಿದ ಮೀಸಲಾತಿ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದುಳಿದ ವರ್ಗಗಳ ‘2ಎ’ ಮೀಸಲಾತಿಗೆ ಆಗ್ರಹಿಸಿ ಪಂಚಮ ಸಾಲಿ ಸಮುದಾಯ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಕುರುಬ ಸಮುದಾಯದ ಜನರು ನಡೆಸುತ್ತಿರುವ ಹೋರಾಟದ ಕುರಿತು ಚರ್ಚೆಗೆ ಒತ್ತಾಯಿಸಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳ ಸದಸ್ಯರು ಮಂಗಳವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದರು.

ಆಡಳಿತ ಪಕ್ಷದ ಹಿರಿಯ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರು ಧರಣಿಯ ನೇತೃತ್ವ ವಹಿಸಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಧರಣಿ ನಿರತ ಶಾಸಕರ ಬೇಡಿಕೆಯನ್ನು ಬೆಂಬಲಿಸಿದರು.

ಶೂನ್ಯವೇಳೆಯಲ್ಲಿ ನಡೆದ ಈ ಘಟನೆ ಆಡಳಿತಾರೂಢ ಬಿಜೆಪಿಯಲ್ಲಿನ ಗುಂಪುಗಾರಿಕೆ ಪ್ರದರ್ಶನಕ್ಕೆ ವೇದಿಕೆ ಯಾಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಯತ್ನಾಳ, ‘ಪಂಚಮಸಾಲಿ ಸಮುದಾಯವನ್ನು ತಿಂಗಳೊಳಗೆ ‘2ಎ’ ಪಟ್ಟಿಗೆ ಸೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಈವರೆಗೂ ಯಾವ ಕ್ರಮವೂ ಆಗಿಲ್ಲ. ಪಂಚಮಸಾಲಿ ಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಮೀಸಲಾತಿಗಾಗಿ ಕುರುಬ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯೂ ಬೆಂಗಳೂರಿನತ್ತ ಬರುತ್ತಿದೆ. ಮುಖ್ಯಮಂತ್ರಿ ಈ ಕುರಿತು ಸ್ಪ‍ಷ್ಟವಾಗಿ ಹೇಳಿಕೆ ನೀಡಬೇಕು. ಮುಂದೆ ಏನಾದರೂ ಅನಾಹುತವಾದರೆ ಅವರೇ ಹೊಣೆ’ ಎಂದರು.

ಉತ್ತರ ನೀಡಲು ಮುಂದಾದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ‘ಈ ವಿಷಯದಲ್ಲಿ ಕಾನೂನು ಮತ್ತು ಸಂವಿಧಾನಕ್ಕೆ ಸಂಬಂಧಿಸಿದ ವಿಚಾರಗಳೂ ಸೇರಿವೆ. ಎಲ್ಲವನ್ನೂ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಈ ಹೇಳಿಕೆಯಿಂದ ತೃಪ್ತರಾಗದ ಯತ್ನಾಳ, ಮುಖ್ಯಮಂತ್ರಿಯೇ ಉತ್ತರಿಸಬೇಕು ಎಂದು ಪಟ್ಟು ಹಿಡಿದರು. ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಈಶ್ವರಪ್ಪ ಸಲಹೆ ನೀಡಿದರು. ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ, ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಚರ್ಚೆಗೆ ಅವಕಾಶ ಕೋರಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅದಕ್ಕೆ ಒಪ್ಪಲಿಲ್ಲ.

ಸಭಾಧ್ಯಕ್ಷರ ಪೀಠದ ಎದುರು ಧಾವಿಸಿದ ಯತ್ನಾಳ ಧರಣಿ ಆರಂಭಿಸಿದೆರು. ಬಿಜೆಪಿಯ ಅರವಿಂದ ಬೆಲ್ಲದ, ಕಾಂಗ್ರೆಸ್‌ನ ಯತೀಂದ್ರ, ರಾಘವೇಂದ್ರ ಹಿಟ್ನಾಳ್, ತುಕಾರಾಂ, ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ, ವೆಂಕಟರಾವ್ ನಾಡಗೌಡ ಸೇರಿದಂತೆ ಹಲವರು ಧರಣಿಗೆ ಜತೆಗೂಡಿದರು.

ಮತ್ತೆ ಎದ್ದುನಿಂತ ಈಶ್ವರಪ್ಪ, ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಚರ್ಚೆಗೆ ಅವಕಾಶ ನೀಡುವುದಾಗಿ ಕಾಗೇರಿ ಪ್ರಕಟಿಸಿದರು.

ಬಳಿಕ ಮೂರೂ ಪಕ್ಷಗಳ ಸದಸ್ಯರು ಧರಣಿ ಕೈಬಿಟ್ಟು, ಸ್ವಸ್ಥಾನಕ್ಕೆ ಮರಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು