ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಹೋರಾಟ: ನಿಯಮ ಪಾಲಿಸದವರ ವಿರುದ್ಧ ಕ್ರಮ ಏನು?

ರಾಜ್ಯ ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್
Last Updated 1 ಮಾರ್ಚ್ 2021, 20:49 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ರ್‍ಯಾಲಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಎಲ್ಲಾ ರ್‍ಯಾಲಿ ಮತ್ತು ಸಮಾವೇಶಗಳಲ್ಲಿ ಕೋವಿಡ್ ಮಾರ್ಗದರ್ಶಿ ಸೂತ್ರ(ಎಸ್‌ಒಪಿ) ಪಾಲಿಸುವುದನ್ನು ಕಡ್ಡಾಯಗೊಳಿಸಲು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

‘ನಿರ್ದಿಷ್ಟ ಸಮುದಾಯ ವೊಂದು ಮೀಸಲಾತಿಗೆ ಆಗ್ರಹಿಸಿ ರ್‍ಯಾಲಿ ನಡೆಸಿದೆ ಎಂಬ ಮಾಹಿತಿ ನಮಗೆ ದೊರೆತಿದೆ. ನಿಯಮ ಉಲ್ಲಂಘಿಸಿದ್ದರೆ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಮೆಮೊ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು. ಮೀಸಲಾತಿ ಬೇಡಿಕೆ ಮುಂದಿಟ್ಟು ಪಂಚಮಸಾಲಿ ಸಮುದಾಯದವರು ಕಳೆದ ಭಾನುವಾರ(ಫೆ.21) ರ್‍ಯಾಲಿ ನಡೆಸಿದ್ದರು.

ಈ ಮಧ್ಯೆ, ತಿದ್ದುಪಡಿ ಮಾಡಿರುವ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ–2020ರ ಪ್ರತಿಯನ್ನು ಸರ್ಕಾರ ಸಲ್ಲಿಸಿತು. ‘ಪ್ರಧಾನ ಕಾಯ್ದೆಯಡಿ ಒದಗಿಸಿರುವ ದಂಡದ ನಿಗದಿಪಡಿಸುವ ಸಂಬಂಧ ನಿಯಮಾವಳಿ ರೂಪಿಸಲಾಗಿದೆಯೇ’ ಎಂದು ಪೀಠ ಪ್ರಶ್ನಿಸಿತು.

ಕೋವಿಡ್‌ ತಡೆಗಟ್ಟಲು ಅಳವಡಿಸಿಕೊಂಡಿರುವ ಕ್ರಮಗಳ ಕುರಿತು ವಿವರಣೆ ಸಲ್ಲಿಸುವಂತೆ ರಾಜಕೀಯ ಪಕ್ಷಗಳಿಗೆ ನೋಟಿಸ್ ನೀಡಲು ಪೀಠಇದೇ ವೇಳೆ ಆದೇಶಿಸಿತು.

ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರದ ಕುರಿತು ರಾಜ್ಯ ಸರ್ಕಾರವನ್ನು ಹಿಂದಿನ ವಿಚಾರಣೆ ವೇಳೆ ಪೀಠ ತರಾಟೆಗೆ ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT