ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಪರಿಶಿಷ್ಟ ಸಮುದಾಯದವರೇ ಸಿಎಂ ಆಗಬೇಕು: ನಿರ್ಣಯ

ದಲಿತ ಸಮುದಾಯದ ಏಳು ಪೀಠಾಧಿಪತಿಗಳು, ಸ್ವಾಭಿಮಾನಿ ಎಸ್‌ಸಿ– ಎಸ್‌ಟಿ ಒಕ್ಕೂಟದ ಸಭೆ
Last Updated 28 ನವೆಂಬರ್ 2022, 20:52 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿ ಪರಿಶಿಷ್ಟ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡ
ಬೇಕು, ಇದಕ್ಕಾಗಿ ಪರಿಶಿಷ್ಟ ಸಮುದಾಯದ ಎಲ್ಲ 151 ಜಾತಿಯವರೂ ಒಂದಾಗಬೇಕು’ ಎಂಬ ನಿರ್ಣಯ ವನ್ನು ರಾಜ್ಯದ ವಿವಿಧ ಮಠಾಧೀಶರು ಹಾಗೂ ಮುಖಂಡರ ಸಭೆಯಲ್ಲಿ ಕೈಗೊಳ್ಳಲಾಯಿತು.

ನಗರದಲ್ಲಿ ಸೋಮವಾರ ನಡೆದಪರಿಶಿಷ್ಟ ಜಾತಿ ಹಾಗೂ ಪಂಗಡದ ಮಠಾಧೀಶರು ಹಾಗೂ ಸ್ವಾಭಿಮಾನಿ ಎಸ್‌ಸಿ–ಎಸ್‌ಟಿ ಒಕ್ಕೂಟದ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.

‘ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿ, ಪರಿಶಿಷ್ಟ ಪಂಗಡದಲ್ಲಿ 50 ಉಪ ಜಾತಿಯವರು ಇದ್ದೇವೆ. 2 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಆದರೂ ಇದುವರೆಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಪಕ್ಷಗಳ ಕಾರಣದಿಂದ, ಭಿನ್ನಮತದಿಂದ ಚದುರಿ ಹೋದ ಎಲ್ಲ ಜಾತಿಯವರೂ ಈಗ ಒಂದಾಗಬೇಕು. ಮಠಾಧೀಶರು ಹೇಳಿದವರಿಗೇ ಮತ ಹಾಕಬೇಕು’ ಎಂದೂ ನಿರ್ಧರಿಸಲಾಯಿತು.

ಸದ್ಯ 51 ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿಗೆ, 15 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಇವಲ್ಲದೇ ಇನ್ನೂ 58 ಕ್ಷೇತ್ರಗಳಲ್ಲಿ ಪರಿಶಿಷ್ಟರೇ ಗೆಲ್ಲುವ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕುವಾರು ಸಮಾವೇಶ ಮಾಡಿ, ಆ ಕ್ಷೇತ್ರಗಳನ್ನೂ ಗೆಲ್ಲಲು ಸಿದ್ಧತೆ ಮಾಡಬೇಕು ಎಂದು ತಿಳಿಸಲಾಯಿತು.

ಈಗ ಪರಿಶಿಷ್ಟ ಸ್ವಾಮೀಜಿಗಳೆಲ್ಲ ಒಂದಾಗಿದ್ದೇವೆ. ಹಿಂದುಳಿದ ವರ್ಗದ ಮಠಾಧೀಶರನ್ನೂ ಸೇರಿಸಿಕೊಂಡು ಮಹಾನ್‌ ಸಂಘಟನೆ ಮಾಡಿ ಮುನ್ನುಗ್ಗಬೇಕು. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟರಿಗೆ ಮೀಸಲಾದ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ತಪ್ಪಿಸಲು ಯತ್ನ ನಡೆದಿದೆ. ಇದನ್ನು ತಡೆಯಬೇಕು ಎಂಬ ನಿರ್ಣಯ ಕೂಡ ಕೈಗೊಳ್ಳಲಾಯಿತು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಬಂಜಾರಾ ಗುರುಪೀಠದ ಸಂತ ಸೇವಾಲಾಲ್‌ ಸ್ವಾಮೀಜಿ, ಚಿತ್ರದುರ್ಗ ಮೇದಾರ ಕೇತೇಶ್ವರ ಗುರುಪೀಠದ ಬಸವಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಉರಿಲಿಂಗಪೆದ್ದಿ ಶಾಖಾ ಮಠದ ಸಿದ್ದರಾಮೇಶ್ವರ ಸ್ವಾಮೀಜಿ ವೇದಿಕೆಯಲ್ಲಿದ್ದರು.

ನಂತರ, ಎಲ್ಲ ಮಠಾಧೀಶರೂ ಶಾಸಕ ರಮೇಶ ಜಾರಕಿಹೊಳಿ ಅವರ ನಿವಾಸದಲ್ಲಿ ಗೋಪ್ಯ ಸಭೆ ನಡೆಸಿದರು.

‘ರಮೇಶ ಜಾರಕಿಹೊಳಿ ಅವರಿಗೆ ನೈತಿಕ ಬೆಂಬಲ, ಧೈರ್ಯ ನೀಡಲು ಬಂದಿದ್ದೇವೆ. ಅವರೊಂದಿಗೆ ನಾವೆಲ್ಲ ಇದ್ದೇವೆ’ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಸಭೆ ಬಳಿಕ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT