ಸೋಮವಾರ, ಜೂನ್ 14, 2021
22 °C

ಹೈಕೋರ್ಟ್ ಆದೇಶಗಳ ಕುರಿತ ಸಿ.ಟಿ.ರವಿ, ಸದಾನಂದಗೌಡ ಹೇಳಿಕೆಗಳಿಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈಕೋರ್ಟ್ ನೀಡುತ್ತಿರುವ ಆದೇಶಗಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೀಡಿರುವ ಹೇಳಿಕೆಗಳಿಗೆ ನಿವೃತ್ತ ನ್ಯಾಯಾಧೀಶರ ಪ್ರತಿಕ್ರಿಯೆಗಳು ಹೀಗಿವೆ.

**
ನ್ಯಾಯಾಂಗ ಕೈಕಟ್ಟಿ ಕೂರಲಾಗದು
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಒಬ್ಬರ ಮೇಲೊಬ್ಬರು ಅಧಿಕಾರ ಚಲಾಯಿಸಬಾರದು. ಆದರೆ, ಜನರ ಸಮಸ್ಯೆಗಳಿಗೆ ಶಾಸಕಾಂಗ ಮತ್ತು ಕಾರ್ಯಾಂಗ ಸ್ಪಂದಿಸದಿದ್ದಾಗ ಜನ ಸಾಮಾನ್ಯರು ಅನಿವಾರ್ಯವಾಗಿ ನ್ಯಾಯಾಂಗದ ಕದ ತಟ್ಟುತ್ತಾರೆ. ಆಗ ನ್ಯಾಯಾಂಗ ಕೈಕಟ್ಟಿ ಕೂರಲು ಆಗುವುದಿಲ್ಲ. ನ್ಯಾಯಾಂಗವೂ ಸ್ಪಂದಿಸದಿದ್ದರೆ ಅರಾಜಕತೆ ಉಂಟಾಗುತ್ತದೆ. ಆಮ್ಲಜನಕ ಕೊರತೆಯಿಂದ ಸಾವುಗಳು ಸಂಭವಿಸುತ್ತಿವೆ. ಲಸಿಕೆಗಾಗಿ ಜನ ಅಲೆದಾಡುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಆಗಿರುವುದು ಸಮಯೋಚಿತ. ಸರ್ಕಾರ ಅದನ್ನು ಗೌರವದಿಂದ ಸ್ವೀಕರಿಸಬೇಕು. ಲಭ್ಯತೆ ಬಗ್ಗೆ ಮಾಹಿತಿ ನೀಡಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಅದನ್ನು ಬಿಟ್ಟು ನ್ಯಾಯಾಂಗದ ವಿರುದ್ಧ ಉಡಾಫೆ ಮಾಡುವುದು ಸರಿಯಲ್ಲ.
– ಎಚ್.ಎನ್.ನಾಗಮೋಹನದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

**
ಬೇಜವಾಬ್ದಾರಿ ಮಾತುಗಳು
ನ್ಯಾಯಾಧೀಶರು ಸರ್ವಜ್ಞರೇ ಎಂದು ಸಿ.ಟಿ. ರವಿ ಅವರು ಅಸಂಬದ್ಧವಾಗಿ ಮಾತನಾಡುವುದು ತರವಲ್ಲ. ಕಾನೂನು ಮಂತ್ರಿ ಆಗಿದ್ದ ಡಿ.ವಿ.ಸದಾನಂದಗೌಡ ಅವರು ಸಂವಿಧಾನ ಅಡಿಯಲ್ಲಿ ನ್ಯಾಯಾಂಗ ಕಾರ್ಯವ್ಯಾಪ್ತಿ ಏನು ಎಂಬುದನ್ನು ತಿಳಿದುಕೊಂಡಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಜನರಿಗೆ ಮೂಲಭೂತ ಹಕ್ಕು ನೀಡಲು ಸರ್ಕಾರ ವಿಫಲವಾದಾಗ ನ್ಯಾಯಾಂಗ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಹೈಕೋರ್ಟ್ ತನ್ನ ಕಾರ್ಯ ವ್ಯಾಪ್ತಿಯಲ್ಲೇ ಕೆಲಸ ಮಾಡುತ್ತಿದೆ. ನ್ಯಾಯಾಂಗದ ಬಗ್ಗೆ ಈ ರೀತಿ ಬೇಜವಾಬ್ದಾರಿ ತನದಿಂದ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಅವರು ಎದುರಿಸಬೇಕಾಗುತ್ತದೆ.
–ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ

**
ಕೆಟ್ಟ ಪರಂಪರೆಗೆ ನಾಂದಿ
ಕೋವಿಡ್ ಎರಡನೇ ಅಲೆ ಇಡೀ ದೇಶದ ನಾಗರಿಕರನ್ನು ಕಂಗೆಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತನ್ನ ಪಾಲಿನ  ಕೆಲಸ ಅರಿಯದೆ ಮೈಮರೆತಿವೆ. ನಾಗರಿಕರಿಗೆ ಸಾಂವಿಧಾನಿಕವಾಗಿ ಲಭ್ಯವಾಗಿರುವ ಹಕ್ಕುಗಳ ರಕ್ಷಣೆಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಮಧ್ಯಂತರ ಆದೇಶಗಳನ್ನು ನೀಡಿವೆ. ಇದನ್ನು ಸರಿಯಾಗಿ ಗ್ರಹಿಸದೆ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು  ಸದಾನಂದಗೌಡ ಮತ್ತು ಸಿ.ಟಿ. ರವಿ ಅವರು ನೀಡಿರುವ ಹೇಳಿಕೆಗಳು ಖಂಡನಾರ್ಹ. ನ್ಯಾಯಾಧೀಶರ ಆತ್ಮ ಸ್ಥೈರ್ಯವನ್ನು ಕೆಡಸುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡಲಾಗಿದೆ. ಇಂತಹ ಕೀಳು ಮಟ್ಟದ ಮಾತುಗಳು ಕೆಟ್ಟ ಪರಂಪರೆ ಬೆಳೆಸುತ್ತದೆ.
–ಎ.ಪಿ. ರಂಗನಾಥ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ


–ವಿ.ಗೋಪಾಲಗೌಡ, ಎಚ್.ಎನ್.ನಾಗಮೋಹನದಾಸ್, ಎ.ಪಿ.ರಂಗನಾಥ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು