ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ನಲ್ಲಿ ಕಂದಾಯ ಇಲಾಖೆಯ ಸೇವೆಗಳು: ಡಿಜಿಟಲ್‌ ಪಾವತಿ ಅವಕಾಶಕ್ಕೆ ಶಿಫಾರಸ್ಸು

ವಿವಿಧ ಸೇವೆಗಳ ಅರ್ಜಿ ಶುಲ್ಕವನ್ನು ಡಿಜಿಟಲ್‌ ಪಾವತಿ ಅವಕಾಶಕ್ಕೆ ಶಿಫಾರಸ್ಸು
Last Updated 30 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಮೊಬೈಲ್‌ ಆ್ಯಪ್‌ ಮೂಲಕ ನೀಡಬೇಕು ಮತ್ತು ಇಲಾಖೆಯ ವಿವಿಧ ಸೇವೆಗಳ ಅರ್ಜಿ ಶುಲ್ಕವನ್ನು ನಗದು ಪಾವತಿಯ ಬದಲಿಗೆ ಡಿಜಿಟಲ್‌ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಕಂದಾಯ ಇಲಾಖೆ ಕುರಿತ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಬಳಕೆದಾರರಿಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಬಳಕೆದಾರರಿಗೆ ಮೊಬೈಲ್‌ ಆ್ಯಪ್‌ ಮೂಲಕ ಲಭ್ಯವಾಗುವಂತೆ ಕ್ರಮ ವಹಿಸಬೇಕು. ಈ ಸಂಬಂಧ ಇ–ಆಡಳಿತ ಇಲಾಖೆಯು ಮೊಬೈಲ್ ಆ್ಯಪ್‌ ಅನ್ನು ಪುನರಾಭಿವೃದ್ಧಿಗೊಳಿಸಬೇಕು ಎಂದು ಹೇಳಿದೆ.

ಅಲ್ಲದೆ, ಕಂದಾಯ ಇಲಾಖೆಯ ಎಲ್ಲಾ ಆನ್‌ಲೈನ್‌ ಸೇವೆಗಳಿಗೂ ಅರ್ಜಿ ಶುಲ್ಕವನ್ನು ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌, ಗೂಗಲ್‌ ಪೇ, ಮೂಲಕ ಪಾವತಿಸಲು ಅವಕಾಶ ಕಲ್ಪಿಸಬೇಕು ಎಂದೂ ಹೇಳಿದೆ.

ಪ್ರಮುಖ ಶಿಫಾರಸ್ಸುಗಳು:

*ಬೆಂಗಳೂರು ಒನ್ ರೀತಿಯಲ್ಲೇ ನಾಗರಿಕರಿಗೆ ಸುಲಭವಾಗಿ ಸೇವೆ ಒದಗಿಸಲು ‘ಗ್ರಾಮ ಒನ್‌’ ವ್ಯವಸ್ಥೆಯನ್ನು ಕಲ್ಪಿಸಬೇಕು. ಇದಕ್ಕೆ ಸಂಬಂಧಿಸಿದಂತೆ ನಿರ್ವಾಹಕರು ಅಥವಾ ದತ್ತಾಂಶ ನಮೂದಿಸುವ ಆಪರೇಟರ್‌ಗಳಿಗೆ ತರಬೇತಿ ನೀಡಬೇಕು.

*ಅಟಲ್‌ಜೀ ಸ್ನೇಹಿ ಕೇಂದ್ರಗಳಲ್ಲಿ (ಎಜೆಎಸ್‌ಕೆ) ನಾಗರಿಕರಿಗಾಗಿ ಏಕಗವಾಕ್ಷಿ ಸೇವಾ ಸೌಲಭ್ಯ ನೀಡಬೇಕು. ಎಲ್ಲಾ ಸರ್ಕಾರಿ ನಾಗರಿಕ ಆನ್‌ಲೈನ್‌ ಸೇವೆಗಳನ್ನು ಎಜೆಎಸ್‌ಕೆ ಕೇಂದ್ರಗಳಲ್ಲಿ ಒದಗಿಸಲು ತಗಲುವ ವೆಚ್ಚಕ್ಕೆ ಅರ್ಜಿದಾರರಿಗೆ ₹25 ಶುಲ್ಕ ವಿಧಿಸಬಹುದು. ಈಗಾಗಲೇ ಬಳಕೆದಾರರ ಶುಲ್ಕ ₹25 ಇದೆ. ಇದರಿಂದ ₹50 ಆಗಲಿದೆ.

*ಕಂದಾಯ ಇಲಾಖೆಯ ಎಲ್ಲ ಪ್ರಮಾಣ ಪತ್ರಗಳ ವಿತರಣೆಗಾಗಿ ‘ಇ–ಕ್ಷಣ’ ವ್ಯವಸ್ಥೆಯನ್ನು ಜಾರಿಗೊಳಿಸಿ, ಇ–ಕ್ಷಣವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು.

*ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಪಿಂಚಣಿ ಸೇವೆಗಳನ್ನೂ ‘ನವೋದಯ’ ಆ್ಯಪ್ ಅಡಿ ತರಬೇಕು. ನಂತರ ವಿವಿಧ ಇಲಾಖೆಗಳ ಎಲ್ಲಾ ಪಿಂಚಣಿ ಯೋಜನೆಗಳನ್ನು (ಕಂದಾಯೇತರ ಸೇರಿ) ನವೋದಯ ಆ್ಯಪ್‌ ಅಡಿ ತರಲು ಕ್ರಮಕೈಗೊಳ್ಳಬೇಕು.

*ಅರ್ಜಿದಾರರ ಅರ್ಜಿಯ ವಸ್ತುಸ್ಥಿತಿ, ಅನುಮೋದನೆ, ನಿರಾಕರಣೆ ಮತ್ತು ಅಗತ್ಯವಿರುವ ಹೆಚ್ಚುವರಿ ದಾಖಲೆಗಳ ಕುರಿತು ಎಸ್‌ಎಂಎಸ್‌ ಸೌಲಭ್ಯ ಅಥವಾ ದೂರವಾಣಿ ಕರೆ ಸೌಲಭ್ಯ ಕಲ್ಪಿಸಬೇಕು. ಮೊಬೈಲ್‌ ಆ್ಯಪ್‌ ಅಥವಾ ಡಿಜಿಲಾಕರ್‌ ಮೂಲಕ ಪ್ರಮಾಣ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ತಂತ್ರಾಂಶದಲ್ಲಿ ಅವಕಾಶ ನೀಡುವುದು. ಪ್ರಮಾಣ ಪತ್ರಗಳ ಸಾಫ್ಟ್‌ ಪ್ರತಿಯನ್ನು ಇ–ಮೇಲ್‌ ಮೂಲಕ ಪಿಡಿಎಫ್‌ ರೂಪದಲ್ಲಿ ಅರ್ಜಿದಾರರು ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ಗೆ ಜೋಡಿಸಿ ಕಳುಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.

ಜಾತಿ ಪ್ರಮಾಣಪತ್ರ: ದೋಷ ತಿದ್ದುವ ಅಧಿಕಾರ ತಹಶೀಲ್ದಾರ್‌ಗೆ

ಜಾತಿ ಪ್ರಮಾಣಪತ್ರ/ ಆದಾಯ ಪ್ರಮಾಣಪತ್ರಗಳಲ್ಲಿ ಹೆಸರು, ವಿಳಾಸಗಳಲ್ಲಿರುವ (ಜಾತಿ ಮತ್ತು ಆದಾಯ ವಿವರಗಳನ್ನು ಬಿಟ್ಟು) ಕಾಗುಣಿತ ದೋಷಗಳನ್ನು ತಿದ್ದುವ ಅಧಿಕಾರ ತಹಶೀಲ್ದಾರ್‌ ದರ್ಜೆ–2 ರವರಿಗೆ ನೀಡುವಂತೆ ಆಯೋಗ ಶಿಫಾರಸು ಮಾಡಿದೆ.

ಪಡಿತರ ಚೀಟಿ, ಆಧಾರ್‌, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ವಿಳಾಸದ ಪುರಾವೆಯಂತಹ ಪ್ರಮಾಣ ಪತ್ರಗಳಿಗೆ ಅಟಲ್‌ ಜನಸ್ನೇಹಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿದ ತಕ್ಷಣವೇ ಸ್ವಯಂ ಚಾಲಿತವಾಗಿ ಭರ್ತಿಯಾಗುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕು ಎಂದೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT