ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಆರ್‌ ನಗರ ಉಪಚುನಾವಣೆ: ಬಿಜೆಪಿ ಕೈಕೊಟ್ಟರೆ ಜೆಡಿಎಸ್‌ನಿಂದ ಮುನಿರತ್ನ ಕಣಕ್ಕೆ?

Last Updated 6 ಅಕ್ಟೋಬರ್ 2020, 3:03 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಆರ್‌.ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಗೆ ಸ್ಪರ್ಧಿಸಲು ಅನರ್ಹ ಶಾಸಕ ಮುನಿರತ್ನ ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ನಾಯಕರು ಟಿಕೆಟ್‌ ಕೊಡದಿದ್ದರೆ ಜೆಡಿಎಸ್‌ ಬಾಗಿಲು ತಟ್ಟುವ ಆಲೋಚನೆಯಲ್ಲಿ ಮುನಿರತ್ನ ಇದ್ದಾರೆ.

ಬಿಜೆಪಿ ರಾಜ್ಯ ಘಟಕ ವರಿಷ್ಠರಿಗೆ ಕಳುಹಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತುಳಸಿ ಮುನಿರಾಜುಗೌಡ ಅವರ ಹೆಸರನ್ನೂ ಸೇರಿಸಿರುವುದರಿಂದ ಮುನಿರತ್ನ ಅವರಿಗೆ ಟಿಕೆಟ್‌ ಖಾತರಿ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ಜೆಡಿಎಸ್ ಕೂಡ ತನ್ನ‌ ಅಭ್ಯರ್ಥಿಯ ಹೆಸರನ್ನು ಘೋಷಿಸದೇ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ. ಬಿಜೆಪಿಯಿಂದ ಟಿಕೆಟ್‌ ವಂಚಿತರಾದರೆ ಮುನಿರತ್ನ ಅವರಿಗೆ ಟಿಕೆಟ್‌ ನೀಡುವ ಬಗ್ಗೆಯೂ ಜೆಡಿಎಸ್‌ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ಈ ಮಧ್ಯೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಂಡಾಯವೆದ್ದು, ಸರ್ಕಾರ ಪತನಗೊಳಿಸಿ ಈಗ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಅನುಭವಿಸುತ್ತಿರುವ ತಮ್ಮ ‘ಮಿತ್ರ’ರ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕುವ ತಂತ್ರವನ್ನು ಮುನಿರತ್ನ ಬಳಸುತ್ತಿದ್ದಾರೆ ಎನ್ನಲಾಗಿದೆ.

‘ಮುನಿರತ್ನ ಅವರಿಗೆ ಟಿಕೆಟ್‌ ಸಿಗದೇ ಇದ್ದರೆ, ಸರ್ಕಾರ ಬಿದ್ದು ಹೋಗಬಹುದು’ ಎಂಬ ವದಂತಿಯನ್ನೂ ತೇಲಿ ಬೀಡಲಾಗಿದೆ. ಆದರೆ, ವರಿಷ್ಠರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ, ಉಮೇಶ ಕತ್ತಿ ಅವರ ಸಹೋದರ ರಮೇಶ ಕತ್ತಿ, ಪ್ರಭಾಕರ ಕೋರೆ, ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಹಿಂದೆ ಟಿಕೆಟ್‌ ನಿರಾಕರಿಸಿರುವ ನಿದರ್ಶನಗಳು ಮುನಿರತ್ನ ಅವರನ್ನು ಚಿಂತೆಗೆ ದೂಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಕೊಟ್ಟು ವರಿಷ್ಠರು ಮುನಿರತ್ನ ಅವರಿಗೆ ಟಿಕೆಟ್‌ ನೀಡಲೂಬಹುದು. ಆದರೆ, ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುನಿರತ್ನ ಅವರ ಬೆಂಬಲಿಗರ ಮಧ್ಯೆ ಸಾಮರಸ್ಯದ ಕೊರತೆ ಇದೆ. ಮುನಿರತ್ನ ಅವರು ಬಿಜೆಪಿ ಸೇರಿದ ನಂತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿ ವಿಶ್ವಾಸಗಳಿಸಲು ಯತ್ನಿಸಿಲ್ಲ. ಅದರಲ್ಲೂ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರ ಜತೆ ಸೌಹಾರ್ದ ಭೇಟಿಯೂ ಆಗಿಲ್ಲ ಎಂಬುದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ದೂರು.

ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕು ಎಂದು ಪಕ್ಷದ ನಾಯಕರು ತುಳಸಿ ಮುನಿರಾಜುಗೌಡರಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಸಿವೆ.

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ: ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ತುಳಸಿ ಮುನಿರಾಜುಗೌಡ ಅವರು ಸಲ್ಲಿಸಿದ್ದ ಅರ್ಜಿಯು ಮಂಗಳವಾರ (ಅ.6) ವಿಚಾರಣೆಗೆ ಬರಲಿದೆ.

‘ಮುನಿರತ್ನಗೇ ಟಿಕೆಟ್‌ ಸಿಗಬೇಕು’

ಮೈಸೂರು: ‘ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ವರಿಷ್ಠರಿಗೆ ಎರಡು ಹೆಸರು ಕಳಿಸಿದ್ದು ಏಕೆ? ಇದು ಮೊದಲ ತಪ್ಪು. ಮುನಿರತ್ನ ಅವರಿಗೇ ಟಿಕೆಟ್‌ ಸಿಗಬೇಕು. ಯಾವುದೇ ಕಾರಣಕ್ಕೂ ಅವರ ಕೈತಪ್ಪಬಾರದು’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಸೋಮವಾರ ಇಲ್ಲಿ ಹೇಳಿದರು.

‘ಬಿಜೆಪಿ ಸರ್ಕಾರ ರಚನೆಗಾಗಿ ಮುನಿರತ್ನ ಸಹಾಯ ಮಾಡಲಿಲ್ಲವೇ? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲವೇ? ಪಕ್ಷದ ವರಿಷ್ಠರಿಗೆ ಎಷ್ಟಾದರೂ ಹೆಸರು ಕಳಿಸಿಕೊಳ್ಳಲಿ. ಏನಾದರೂ ಚರ್ಚೆ ನಡೆಯಲಿ. ಮುನಿರತ್ನ ಹೆಸರು ಅಂತಿಮವಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT