ಬುಧವಾರ, ನವೆಂಬರ್ 25, 2020
21 °C
ಚುನಾವಣಾ ಫಲಿತಾಂಶ ವಿಶ್ಲೇಷಣೆ

ಡಿ.ಕೆ ಸಹೋದರರಿಗೆ ಮುನಿರತ್ನ ತಿರುಮಂತ್ರ

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚುನಾವಣಾ ಕಣದಲ್ಲಿ ’ಚತುರ‘ ನಡೆಗಳನ್ನು ಇಡುವ ಮೂಲಕ ಮುನಿರತ್ನ ಅವರು ಡಿ.ಕೆ. ಶಿವಕುಮಾರ್‌ ಹಾಗೂ ಸುರೇಶ್‌ ಸಹೋದರರ ಒಕ್ಕಲಿಗರ ಕೋಟೆಯನ್ನು ಛಿದ್ರ ಮಾಡಿ ಮೇಲುಗೈ ಸಾಧಿಸಿದ್ದಾರೆ. ತಮ್ಮ ಹಳೆಯ ಶಿಷ್ಯನಿಗೆ ಸೋಲಿನ ರುಚಿ ತೋರಿಸಲೇಬೇಕು ಎಂದು ಪಟ್ಟು ಹಿಡಿದಿದ್ದ ಡಿ.ಕೆ.ಸಹೋದರರಿಗೆ ಇದರಿಂದ ಮುಖಭಂಗವಾಗಿದೆ. 

ರಾಜ್ಯ ಮಟ್ಟದ ನಾಯಕರು ಮುನಿರತ್ನ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರೂ ಸ್ಥಳೀಯರ ಕಾರ್ಯಕರ್ತರು ಅವರ ‘ಕೈ’ ಹಿಡಿಯುತ್ತಾರೋ ಇಲ್ಲವೋ ಎಂಬ ಕಳವಳ ಚುನಾವಣಾ ಪ್ರಚಾರದ ಕೊನೆ ಹಂತದವರೆಗೂ ಬಿಜೆಪಿ ಮುಖಂಡರಲ್ಲಿ ಇತ್ತು. ಬಿಜೆಪಿಯ ಕಾರ್ಯಕರ್ತರ ಪಡೆ ಮುನಿಸು ಮರೆತು ಪಕ್ಷನಿಷ್ಠೆ ಮೆರೆದಿರುವುದು 58,113 ಮತಗಳ ಅಂತರದ ಭಾರಿ ಗೆಲುವಿನಲ್ಲಿ ನಿಚ್ಚಳವಾಗಿ ಕಾಣಿಸುತ್ತಿದೆ.

ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುನಿರತ್ನ ವಿರುದ್ಧ ತೊಡೆ ತಟ್ಟಿ ಕೋರ್ಟ್‌ ಮೆಟ್ಟಿಲೇರಿದ್ದ ಬಿಜೆಪಿಯ ತುಳಸಿ ಮುನಿರಾಜು ಗೌಡ ಹಾಗೂ ಅವರ ಬೆಂಬಲಿಗರು ಅಂತಿಮ ಕ್ಷಣದವರೆಗೂ ಪಕ್ಷದ ಅಭ್ಯರ್ಥಿಯ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಆದರೂ, ಪಕ್ಷ ನಿಷ್ಠ ಕಾರ್ಯಕರ್ತರು ತಳ ಮಟ್ಟದಲ್ಲಿ ಕೆಲಸ ಮಾಡಿ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ರಾಜರಾಜೇಶ್ವರಿನಗರ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯಲ್ಲಿದೆ. ಇಲ್ಲಿ ಸಂಸದರಾಗಿರುವವರು ಡಿ.ಕೆ.ಸುರೇಶ್‌. ಅವರಿಗೆ ಕ್ಷೇತ್ರದಲ್ಲಿ ಬಿಗಿ ಹಿಡಿತ ಇದೆ. ಈ ಹಿಡಿತದ ಆಧಾರದಲ್ಲೇ ಪಕ್ಷದ ನಾಯಕರು ’ಅಚ್ಚರಿ‘ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದ ಮಾದರಿಯಲ್ಲೇ ’ಅನುಕಂಪ‘ದ ಅಲೆ ಮೂಲಕ ಗೆಲುವಿನ ನಗೆ ಬೀರಬಹುದು ಎಂದು ಕಾರ್ಯತಂತ್ರ ಹೆಣೆದಿದ್ದರು. ಇದು ಹೆಚ್ಚು ಪರಿಣಾಮ ಬೀರಿಲ್ಲ. ಚುನಾವಣಾ ಘೋಷಣೆಯಾದ ಬಳಿಕ ಕುಸುಮಾ ಎಚ್‌.ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್‌ ಘೋಷಣೆ ಮಾಡಿದ್ದು ಸಹ ಪಕ್ಷದ ಹಿನ್ನಡೆಗೆ ಕಾರಣ.

ಮುನಿರತ್ನ ಜೊತೆಗೆ ಪಕ್ಷದ ಕಾರ್ಯಕರ್ತರೂ ಬಿಜೆಪಿಯತ್ತ ಗುಳೆ ಹೋಗಿದ್ದರಿಂದ ಕಾಂಗ್ರೆಸ್‌ನ ತಳಹದಿಯೇ ಅಲುಗಾಡಿತ್ತು. ಮನೆ ಮನೆ ಪ್ರಚಾರಕ್ಕೂ ಕಾರ್ಯಕರ್ತರಿಲ್ಲದ ಸ್ಥಿತಿ ಕೆಲವು ಮತಗಟ್ಟೆಗಳ ವ್ಯಾಪ್ತಿಯಲ್ಲಿತ್ತು. ಈ ಕೊರತೆ ಎದ್ದು ಕಾಣಿಸಬಾರದೆಂಬ ಕಾರಣಕ್ಕೆ ಪ್ರಚಾರದುದ್ದಕ್ಕೂ ಕಾಂಗ್ರೆಸ್‌ ಅಬ್ಬರವನ್ನು ಕಾಯ್ದುಕೊಂಡಿತ್ತು. ಒಕ್ಕಲಿಗರು ‘ಕೈ’ ಹಿಡಿಯಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಒಕ್ಕಲಿಗ ಮಹಿಳೆಯನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್‌ ನಿರೀಕ್ಷೆ ಇಲ್ಲಿ ಹುಸಿಯಾಗಿದೆ. ಈಗ ಮತ್ತೆ ತಳ ಹಂತದಲ್ಲಿ ಪಕ್ಷವನ್ನು ಪುನಃಶ್ಚೇತನಗೊಳಿಸಬೇಕಾದ ಪರಿಸ್ಥಿತಿಯನ್ನು ಪಕ್ಷವು ಎದುರಿಸುತ್ತಿದೆ. 

ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಈ ಕ್ಷೇತ್ರದ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಸದಸ್ಯರೂ ಮುನಿರತ್ನ ಜತೆಗೆ ಪಕ್ಷ ನಿಷ್ಠೆ ಬದಲಾಯಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದ ಕಾರಣಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜಿ.ಎಚ್.ರಾಮಚಂದ್ರ ಸಹ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಮರಳಿ ಗೂಡು ಸೇರಿಕೊಂಡರು. ಕಾಂಗ್ರೆಸ್‌ನ ಹಾಗೂ ಜೆಡಿಎಸ್‌ನ ಹಲವು ನಾಯಕರು ಕಮಲ ಮುಡಿದರು. ಲಾಕ್‌ಡೌನ್‌ ಅವಧಿಯಲ್ಲಿ ಮುನಿರತ್ನ ನಡೆಸಿದ ದಾಸೋಹ ಸಹ ಚುನಾವಣೆಯಲ್ಲಿ ನೆರವಿಗೆ ಬಂತು. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಾದ ಕೊಳೆಗೇರಿಗಳ ಹಾಗೂ ಮುಸ್ಲಿಮ್‌ ಮತಗಳೂ ಬಿಜೆಪಿಯ ಕಡೆಗೆ ವಾಲಿತು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ 60 ಸಾವಿರ ಮತಗಳನ್ನು ಪಡೆದು ನಿಕಟ ಸ್ಪರ್ಧೆ ಒಡ್ಡಿದ್ದರು. ಈ ಸಲ ಆ ಪಕ್ಷದ ಅಭ್ಯರ್ಥಿ ಪಡೆದಿದ್ದು 10 ಸಾವಿರ ಮತಗಳಷ್ಟೇ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮುನಿರತ್ನ ನಡುವಿನ ’ಚಿತ್ರರಂಗದ ಗೆಳೆತನ‘ವೂ ಬಿಜೆಪಿ ಅಭ್ಯರ್ಥಿಯ ಗೆಲುವಿನಲ್ಲಿ ಕೆಲಸ ಮಾಡಿದೆಯೇ ಎಂಬ ಅನುಮಾನಕ್ಕೂ ಇದು ಕಾರಣವಾಗಿದೆ.

‘ಕ್ಷೇತ್ರಕ್ಕೆ ಅಪರಿಚಿತರಾಗಿದ್ದ ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಬಿಜೆಪಿಗೆ ಜೆಡಿಎಸ್‌ ನೆರವಾಗಿದೆ. ಒಕ್ಕಲಿಗ ಮತಗಳು ಸಾಕಷ್ಟು ಪ್ರಮಾಣದಲ್ಲಿ ಬಿಜೆಪಿಗೆ ಬಿದ್ದಿವೆ’ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು