ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಡ್ಡಿ ಸುಡುವ ವಿಚಾರ: ಪ್ರತಿಕ್ರಿಯೆಗೆ ಮಾಜಿ ಸಿಎಂ ಯಡಿಯೂರಪ್ಪ ನಕಾರ

Last Updated 6 ಜೂನ್ 2022, 15:24 IST
ಅಕ್ಷರ ಗಾತ್ರ

ಬೆಳಗಾವಿ: ‘ಆರ್‌ಎಸ್‌ಎಸ್‌ ಚಡ್ಡಿ ಸುಡುವ ಕಾಂಗ್ರೆಸ್ಸಿಗರ ಕೆಲಸಕ್ಕೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಶಾಸಕ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ವಿಧಾನ ಪರಿಷತ್‌ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಸೋಮವಾರ ನಗರಕ್ಕೆ ಬಂದ ಅವರು, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ನಮ್ಮ ಮೇಲಿದೆ. ಹಾಗಾಗಿ, ಮುಂದಿನ ಎಲ್ಲ ಚುನಾವಣೆಗಳಲ್ಲೂ ನಾವು ಗೆಲುವು ಕಾಣುತ್ತೇವೆ’ ಎಂದರು.

‘ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನಾನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದು ಆಕಸ್ಮಿಕ. ಅವರು ಹುಬ್ಬಳ್ಳಿಗೆ ಹೊರಡಲು ಬಂದಿದ್ದರು, ನಾನು ಬೆಳಗಾವಿಗೆ ಬರಲು ತಯಾರಾಗಿದ್ದೆ. ಆಕಸ್ಮಿಕವಾಗಿ ಸಿಕ್ಕಿದ್ದರಿಂದ ಕುಶಲೋಪರಿ ವಿಚಾರಿಸಿದೆವು. ಒಂದೇ ಒಂದು ಪದ ರಾಜಕೀಯ ಮಾತನಾಡಿಲ್ಲ’ ಎಂದರು.

‘‌ವಿರೋಧ ಪಕ್ಷದವರು ಎಂಬ ಕಾರಣಕ್ಕೆ ವಿರೋಧಿಗಳಾಗೇ ಬದುಕಬೇಕೆಂದೇನಿಲ್ಲ. ಪರಸ್ಪರ ಆತ್ಮೀಯತೆ, ವಿಶ್ವಾಸ ಇರಬೇಕು. ರಾಜಕಾರಣಕ್ಕೂ ಆತ್ಮೀಯತೆಗೂ ಅಜಗಜಾಂತರವಿದೆ. ಅವರು ಅವರದೇ ಶೈಲಿಯಲ್ಲಿ ರಾಜಕಾರಣ ಮಾಡುತ್ತಾರೆ. ನಾವು ನಮ್ಮ ಪದ್ಧತಿ ಅನುಸರಿಸುತ್ತಿದ್ದೇವೆ’ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಮೂರೂ ಸ್ಥಾನ ಗೆಲ್ಲುತ್ತೇವೆ: ‘ವಿಧಾನ ಪರಿಷತ್‌ಗೆ ವಾಯವ್ಯ ಶಿಕ್ಷಕರ ಮತಕ್ಷೇತ್ರ, ವಾಯವ್ಯ ಪದವೀಧರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಎಲ್ಲರ ಪರವಾಗಿ ಪ್ರಚಾರ ಮಾಡಲು ಮೂರು ದಿನ ಈ ಕಡೆ ಬಂದಿದ್ದೇವೆ’ ಎಂದರು.

‘ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹಣಮಂತ ನಿರಾಣಿ ಅವರು 45ರಿಂದ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಶಿಕ್ಷಕರ ಕ್ಷೇತ್ರದಲ್ಲಿ ಅರುಣ ಶಹಾಪುರ ಅವರ ಗೆಲುವಿನ ಅಂತರ ತುಸು ಕಡಿಮೆಯಾಗಬಹುದು. ಈಗಿನ ಅಂದಾಜಿನ ಪ್ರಕಾರ 15ರಿಂದ 20 ಸಾವಿರ ಮತಗಳ ಅಂತರದಲ್ಲಿ ಅವರು ಗೆಲ್ಲಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT